ಅಕ್ರಮ, ಅನಧಿಕೃತವಾಗಿ ಮಟನ್‌, ಚಿಕನ್‌ ಮಾರಾಟ ವಿರೋಧಿಸಿ ಕಳೆದ 5ರಂದು ಪುರಸಭೆಗೆ ಹಾಗೂ ಡಿ.12ಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಕ್ರಮಕ್ಕೆ ಮುಂದಾಗಿಲ್ಲ

ಕುಷ್ಟಗಿ: ಪಟ್ಟಣದ ಪುರಸಭೆ ಮುಂಭಾಗದಲ್ಲಿರುವ ಮಟನ್‌, ಚಿಕನ್‌ ಅಂಗಡಿ ಹಾಗೂ ಮೀನು ಮಾರಾಟಗಾರರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸೂಕ್ತ ಕ್ರಮಕ್ಕೆ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹಳೆಯ ಪ್ರವಾಸಿ ಮಂದಿರ ಎದುರಿನ ವಾಣಿಜ್ಯ ಮಳಿಗೆಗಳ ಬಯಲಿನಲ್ಲಿಟ್ಟು ಚಿಕನ್ ಮಾರಾಟ ಮಾಡುತ್ತಿದ್ದು, ನಿಯಂತ್ರಿಸುವ ಜತೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಯ ಪಕ್ಕದಲ್ಲಿಯೆ ಚಿಕನ್, ಮಟನ್ ಹಾಗೂ ಮೀನು ಮಾರಾಟ ನಡೆಯುತ್ತಿರುವದರಿಂದ ಈ ರಸ್ತೆಯಲ್ಲಿ ಬೀದಿನಾಯಿಗಳು ಹಿಂಡು ಹಿಂಡಾಗಿ ಕಾಣುತ್ತಿದ್ದು, ಸಾರ್ವಜನಿಕರು ಸಂಚಾರ ಮಾಡುವಾಗ ಅಥವಾ ಬೈಕ್‌ ಸವಾರರನ್ನು ಬೆನ್ನಟ್ಟಿಕೊಂಡು ಹೋಗುತ್ತಿರುವ ಘಟನೆಗಳು ದಿನಂಪ್ರತಿಯಾಗಿ ನಡೆಯುತ್ತಿವೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಈ ರೀತಿ ಅಕ್ರಮ, ಅನಧಿಕೃತವಾಗಿ ಮಟನ್‌, ಚಿಕನ್‌ ಮಾರಾಟ ವಿರೋಧಿಸಿ ಕಳೆದ 5ರಂದು ಪುರಸಭೆಗೆ ಹಾಗೂ ಡಿ.12ಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಗಾಂಧಿನಗರದ ನಿವಾಸಿ ಮುತ್ತುರಾಜ ಕಟ್ಟಿಮನಿ ಆರೋಪಿಸಿದ್ದಾರೆ.

ಮಟನ್ ಮಾರ್ಕೆಟ್ ಹಾಗೂ ಚಿಕನ್ ಅಂಗಡಿಗಳ ನಿಯಂತ್ರಣದ ಕುರಿತು ದೂರುಗಳು ಸಲ್ಲಿಕೆಯಾಗಿದ್ದು, ಈ ಕುರಿತು ನೈರ್ಮಲ್ಯಾಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ವೈಜ್ಞಾನಿಕ ರೀತಿಯಲ್ಲಿ ಮಾರಾಟ ಮಾಡುವ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ತಿಳಿಸಿದ್ದಾರೆ.