ಅಶಕ್ತ ಸಮುದಾಯಗಳಿಗೆ ನೆರವು ನೀಡಲು ಮಠಗಳು ಸಿದ್ದ

| Published : Sep 30 2024, 01:19 AM IST

ಅಶಕ್ತ ಸಮುದಾಯಗಳಿಗೆ ನೆರವು ನೀಡಲು ಮಠಗಳು ಸಿದ್ದ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಹೊರವಲಯ ಕೇತೇಶ್ವರ ಮಠದಲ್ಲಿ ಭಾನುವಾರ ಅಲೆಮಾರಿ ಸಮುದಾಯಗಳಿಗೆ ಮಾದಾರಶ್ರೀ ಹೊದಿಕೆ ಹಾಗೂ ಶಾಲಾ ಬ್ಯಾಗ್ ವಿತರಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಶಕ್ತ ಸಮುದಾಯಗಳಿಗೆ ನೆರವು ನೀಡಲು ಮಠಗಳು ಸದಾ ಸಿದ್ದವಿವೆ ಎಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಚಿತ್ರದುರ್ಗ ಹೊರ ವಲಯದ ಕೇತೇಶ್ವರ ಮಠದ ಬಳಿ ಬೀಡು ಬಿಟ್ಟಿರುವ ಅಲೆಮಾರಿ ಜನಾಂಗದವರಿಗೆ ಭಾನುವಾರ ಬೆಡ್ ಶೀಟ್ ಮತ್ತು ಅವರ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಇದಕ್ಕೆ ಸರ್ಕಾರ ಮತ್ತು ಮಠಗಳು ಸಹಾಯ ನೀಡಲಿವೆ ಎಂದು ಹೇಳಿದರು.

ಇಂದು ಶ್ರೀಮಂತರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ದೊಡ್ಡ ದೊಡ್ಡ ಹೋಟೇಲ್‌ಗಳಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ದಾವಣಗೆರೆಯ ಮಾಜಿ ಸಚಿವ, ಬಿಜೆಪಿ ಮುಖಂಡ ಜಿ.ಎಂ.ಸಿದ್ದೇಶ್ವರ ರವರ ಪುತ್ರ ಅನಿತ್‍ಕುಮಾರ್ ತಮ್ಮ ಹುಟ್ಟುಹಬ್ಬದ ನಿಮಿತ್ತ ನಮ್ಮ ಮಠಕ್ಕೆ ಬಂದಾಗ ಅಲೆಮಾರಿ ಕುಟುಂಬಗಳ ಬಗ್ಗೆ ತಿಳಿಸಿದ್ದೆ. ಅವರು ಕಷ್ಟ ಕಾಲದಲ್ಲಿದ್ದಾರೆ, ಸಹಾಯ ಮಾಡುವಂತೆ ಮನವಿ ಮಾಡಿದ್ದರ ಮೇರೆಗೆ ಇಂದು ಬೆಡ್ ಶೀಟ್ ಹಾಗೂ ಶಾಲಾ ಬ್ಯಾಗ್ ತಂದು ವಿತರಿಸಿದ್ದಾರೆ ಎಂದರು.

ಸಂವಿಧಾನ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ. ಹಲವಾರು ಜನಾಂಗದವರು ಉಪಯೋಗ ಪಡೆಯುತ್ತಿದ್ದಾರೆ. ಆದರೆ ಇನ್ನೂ ಹಲವಾರು ಸಮುದಾಯಗಳು ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಇಂತಹ ಸಮಾಜಗಳಿಗೆ ಎಲ್ಲರೂ ದನಿಯಾಗಿ ಅವರಿಗೆ ಸಹಾಯ ಮಾಡಬೇಕಿದೆ. ಅಲೆಮಾರಿ ಸಮಾಜದ ಕುಟುಂಬಗಳು ಬದುಕಿಗಾಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಇವರಿಗೆ ನಿಲ್ಲಲು ತಮ್ಮದೇ ಆದ ಸ್ವಂತ ಜಾಗವಿಲ್ಲ. ಇಂತಹವರ ಬದುಕು ಮೊದಲು ಪಾವನವಾಗಬೇಕು ಎಂದು ಶ್ರೀಗಳು ಹೇಳಿದರು. ಈ ಸಂದರ್ಭದಲ್ಲಿ ಕೇತೇಶ್ವರ ಮಠದ ಶ್ರೀಗಳು ಇದ್ದರು.