ಸಾರಾಂಶ
ಹನುಮಸಾಗರ:
ನವದಂಪತಿ ಹಿರಿಯರ ಮಾರ್ಗದರ್ಶನದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಸಮೀಪದ ಬಾದಿಮನಾಳ ಗ್ರಾಮದ ಕನಕ ಗುರು ಪೀಠದಲ್ಲಿ ಹಮ್ಮಿಕೊಂಡ 25ನೇ ವರ್ಷದ ಜಾತ್ರಾ ರಜತ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನಾದ್ಯಂತ ಮಠಗಳು ಸಮಾಜ ತಿದ್ದುವ ಹಾಗೂ ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ ಎಂದ ಅವರು, ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಸಮುದಾಯ ಒಗ್ಗಟ್ಟಿನಿಂದ ಇರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೋಡಿಸಬೇಕು. ನವ ದಂಪತಿಗಳು ಮನೆಯ-ಹಿರಿಯರನ್ನು ಗೌರವದಿಂದ ಕಾಣಬೇಕು. ಒಬ್ಬರನೊಬ್ಬರು ಅರಿತುಕೊಂಡು ಸುಖ ಸಂಸಾರ ನಡೆಸಬೇಕು ಎಂದರು.ದುಬಾರಿ ದುನಿಯಾದಲ್ಲಿ ಬಡವರು ಸಾಲ ಮಾಡಿ ಮದುವೆ ಮಾಡಿಕೊಂಡು ಅದನ್ನು ತೀರಿಸಲು ಜೀವನ ಪರ್ಯಂತ ದುಡಿಯಬೇಕಾಗಿದೆ. ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿದ್ದು, ಪ್ರತಿ ವರ್ಷ ಸಾಮೂಹಿಕ ಮದುವೆ ಮಾಡುತ್ತಿರುವ ಬಾದಿಮನಾಳ ಕನಕ ಗುರುಪೀಠದ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ಬಾದಿಮನಾಳ ಕನಕ ಗುರು ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಜನರಲ್ಲಿ ಸಂಸ್ಕಾರ ಇದ್ದರೆ ಮಾತ್ರ ಮಠ, ಸ್ವಾಮೀಜಿಗಳು ಉಳಿಯುತ್ತಾರೆ. ಕನಕದಾಸರು ತಮ್ಮ ವಿಚಾರಧಾರೆಗಳು ಹಾಗೂ ಕೀರ್ತನೆಗಳ ಮೂಲಕ ಸರ್ವಕಾಲಕ್ಕೂ ಪ್ರಸ್ತುತ. ಹುಟ್ಟಿದ ಮೇಲೆ ಸಮಾಜಕ್ಕೆ ಒಂದಿಷ್ಟು ಸೇವೆ ಸಲ್ಲಿಸಿ, ಒಳ್ಳೆಯದು ಮಾಡಬೇಕು ಎಂದರು.5 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಿಂಥಣಿ ಬ್ರಿಡ್ಜ್ ಕನಕ ಗುರು ಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್, ಚಿದಾನಂದಯ್ಯ ಗುರುವಿನ, ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ, ಗ್ರಾಪಂ ಅಧ್ಯಕ್ಷೆ ರೇಖಾ ಲಂಡೂರಿ, ಹಾಲುಮತ ಸಮುದಾಯದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೇದ, ಪ್ರಭಾಕರ ಚಿಣಿ, ಉಮೇಶ ಮಂಗಳೂರು, ಲಕ್ಷ್ಮಮ್ಮ ಟಕ್ಕಳಕಿ, ಮಹಾಂತೇಶ ಗಣವರಿ, ಹೋಳಿಯಪ್ಪ ಕುರಿ ಇದ್ದರು.