ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಾನು ಜನರ ಸೇವೆ ಮಾಡುವವನೇ ಹೊರತು ಯಾರಿಂದಲೂ ಸೇವೆ ಮಾಡಿಸಿಕೊಳ್ಳುವವನಲ್ಲ. ನನಗೆ ಅವರ ಸೇವೆಯ ಅಗತ್ಯವಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್ .ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಎನ್.ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದರು.ಪಟ್ಟಣದ ಟಿಬಿ ಬಡಾವಣೆಯ ಪುರಸಭಾ ಮೈದಾನದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕಾವೇರಿ ಸಮಸ್ಯೆ ಮುಂದಿಟ್ಟುಕೊಂಡು ಕೆಲವರು ರಾಜಕೀಯ ನಿವೃತ್ತಿ ಮಾತನಾಡಿ ನನ್ನ ಸೇವಕನಾಗಿರುತ್ತೇನೆ ಎನ್ನುತ್ತಿದ್ದಾರೆ. ಅವರ ಸೇವೆಯನ್ನು ಈ ಹಿಂದೆಯೇ ನೋಡಿದ್ದೇನೆ ಎಂದು ಕುಟುಕಿದರು.
ಕಾವೇರಿಗಾಗಿ ಜಿಲ್ಲೆಯ ಜನ ರಕ್ತ ಹರಿಸಿದ್ದಾರೆ. ಅದರ ಅರಿವು ನನಗಿದೆ. ಒಕ್ಕೂಟ ಮತ್ತು ನ್ಯಾಯಾಧೀಕರಣ ವ್ಯವಸ್ಥೆಯಲ್ಲಿ ಕಾವೇರಿ ನೀರಿನ ವಿಷಯವಾಗಿ ಯಾವ ರೀತಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಬಹುದು ಎಂದು ಯೋಚಿಸುತ್ತಿದ್ದೇನೆ. ಜಿಲ್ಲೆಯ ಜನರ ಆಶೀರ್ವಾದ ಹಾಗೂ ದೇವೇಗೌಡರ ಮಾರ್ಗದರ್ಶನದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.ನನಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಜಿಲ್ಲೆಯ ಜನ ಶಕ್ತಿ ನೀಡಿದ್ದಾರೆ. ನಿಮಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಸೇರಿದಂತೆ ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಈ ವರ್ಷವಾದರೂ ಜಿಲ್ಲೆಯ ಜನ ಎರಡು ಬೆಳೆ ಭತ್ತ ಬೆಳೆಯುತ್ತಾರೆಂಬ ಆಸೆಯಿದೆ ಎಂದರು.
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕರೆದಿದ್ದ ಸರ್ವ ಪಕ್ಷದ ಸಭೆಗೆ ನಾನು ಹೋಗಲಿಲ್ಲ ಎಂದು ಕೆಲವರು ಟೀಕಿಸುತ್ತಿದ್ದಾರೆ. ಭಾನುವಾರ ಸಭೆ ಕರೆದು ಹಿಂದಿನ ದಿನ ಶನಿವಾರವೇ 10 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡುತ್ತಾರೆ. ಸಭೆಗೆ ಮುನ್ನ ನೀರು ಬಿಟ್ಟು ನಂತರ ನಾನು ಸಭೆಗೆ ಹೋಗಿ ಸಲಹೆ ಕೊಡುವುದಾದರೂ ಏನು ಎಂದು ಪ್ರಶ್ನಿಸಿದರು.ಕೆಲವರು ಕುಮಾರಣ್ಣ ಬಾಡೂಟಕ್ಕೆ ಹೋಗಿದ್ದರು ಎಂದು ಟೀಕಿಸುತ್ತಾರೆ. ಶುಭಕಾರ್ಯಗಳಲ್ಲಿ ಬಾಡೂಟ ಹಾಕುವುದು ನಮ್ಮ ಸಮುದಾಯದ ಸಂಸ್ಕೃತಿಯ ಒಂದು ಭಾಗ. ನಮ್ಮ ಶಾಸಕರು ಯಾರನ್ನೂ ಮೆಚ್ಚಿಸಲು ಬಾಡೂಟ ಹಾಕುತ್ತಿಲ್ಲ. ಬದಲಾಗಿ ನಮ್ಮ ಪರಂಪರೆಯ ಒಂದು ಭಾಗವಾಗಿ ಬಾಡೂಟ ಹಾಕುತ್ತಿದ್ದಾರೆ. ಬಾಡೂಟ ನೀವು ನೀಡುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ಒಂದು ಭಾಗ. ಅಷ್ಟಕ್ಕೂ ನಾನು ಆರೋಗ್ಯದ ದೃಷ್ಟಿಯಿಂದ ಕಳೆದ ಐದಾರು ವರ್ಷಗಳಿಂದಲೂ ಬಾಡೂಟದ ಸೇವನೆ ನಿಲ್ಲಿಸಿದ್ದೇನೆ ಎಂದು ತಿಳಿಸಿದರು.
ನನಗೆ ಲೋಕಸಭೆಗೆ ನಿಲ್ಲುವ ಇಚ್ಛೆ ಇರಲಿಲ್ಲ. ಆದರೆ, ರಾಜಕೀಯ ಪರಿಸ್ಥಿತಿಗಳು ನನ್ನನ್ನು ನಿಲ್ಲುವಂತೆ ಮಾಡಿದವು. ಜಿಲ್ಲೆಯ ಜನ ಕುಮಾರಣ್ಣನಿಂದ ಏನಾದರೂ ಅನುಕೂಲವಾಗಬಹುದು ಎಂದು ಪಕ್ಷಾತೀತವಾಗಿ ಮತ ನೀಡಿದ್ದಾರೆ. ಜಿಲ್ಲೆಯ ಜನರ ನಿರೀಕ್ಷೆಯನ್ನು ಈಡೇರಿಸಲು ನಾನು ಬದ್ದ. ಆದರೆ, ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು.ದೇವೇಗೌಡರ 60 ವರ್ಷಗಳ ರಾಜಕೀಯ ಜೀವನಕ್ಕೆ ಒಕ್ಕಲಿಗ ಸಮಾಜ ಶಕ್ತಿಯಾಗಿ ನಿಂತಿದೆ. ಈ ಭಾಗದ ಜನರಿಗೆ ಕೃತಜ್ಞತಾ ಪೂರ್ವಕವಾಗಿ ಪ್ರಧಾನಿ ನರೇಂದ್ರಮೋದಿ ಮೋದಿ ಅವರು ನನಗೆ ಎರಡು ಮಹತ್ವದ ಖಾತೆಗಳನ್ನು ನೀಡಿದ್ದಾರೆ. ಪ್ರಧಾನಿಗಳು ಸಚಿವ ಸ್ಥಾನವಲ್ಲದೇ ದೇಶದ ಆರ್ಥಿಕತೆಯ ನೀತಿಯನ್ನು ಜಾರಿಗೆ ತರುವ ಆರ್ಥಿಕ ಸಮಿತಿಗೂ ಮತ್ತು ನೀತಿ ಆಯೋಗಕ್ಕೂ ನನ್ನನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಇದಕ್ಕೆ ರಾಜ್ಯ, ಜಿಲ್ಲೆಯ ಜನರ ಆಶೀರ್ವಾದ ಕಾರಣ ಎಂದು ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))