ಸಾರಾಂಶ
ಮಂಗಳೂರು : ಈ ಬಾರಿಯ ನೈಋತ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕರಾವಳಿಯನ್ನು ಬಿಜೆಪಿ ನಾಯಕರು ಸಂಪೂರ್ಣ ಕಡೆಗಣಿಸಿದ್ದಾರೆ. ಹೀಗಾಗಿ ನಾನು ಓರ್ವ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ, ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಪ್ರಾದೇಶಿಕತೆ ಹಾಗೂ ನೈತಿಕತೆಯ ಪ್ರಶ್ನೆ ಇರುವುದರಿಂದ ಪಕ್ಷದ ವಿರುದ್ಧ ನಾನು ಹೋಗುತ್ತಿದ್ದೇನೆ ಎಂದು ಅನಿಸುವುದಿಲ್ಲ. ನನಗೆ ಟಿಕೆಟ್ ನೀಡುವುದಾಗಿ ನಂಬಿಸಿ ಬಳಿಕ ನಾಯಕರು ಇತ್ತೀಚೆಗಷ್ಟೆ ಕಾಂಗ್ರೆಸ್‌ನಿಂದ ಬಂದ, ರಾಷ್ಟ್ರೀಯತೆ ವಿರುದ್ಧ ಪ್ರತಿಭಟಿಸಿದ್ದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ನನ್ನ ಸ್ಪರ್ಧೆ ಅವರ ವಿರುದ್ಧವೂ ಅಲ್ಲ. ಶಿವಮೊಗ್ಗದಲ್ಲೇ ಪಕ್ಷಕ್ಕಾಗಿ ದುಡಿದ ಅನೇಕ ಮಂದಿ ಇದ್ದಾರೆ, ಅವರಲ್ಲೊಬ್ಬರಿಗೆ ಟಿಕೆಟ್ ನೀಡಿದರೂ ನಾನು ಸ್ಪರ್ಧಿಸುತ್ತಿರಲಿಲ್ಲ. ಇದು ಪಕ್ಷಾತೀತ ಚುನಾವಣೆಯಾದ್ದರಿಂದ ಜನತೆ ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ನಾನು ಗೆದ್ದು ಮತ್ತೆ ಬಿಜೆಪಿ ಬೆಂಬಲಿಸುತ್ತೇನೆ. ನನ್ನನ್ನು ಪಕ್ಷ ಉಚ್ಛಾಟಿಸಿದರೆ ಆ ದಿನ ಬಹಳ ದುಃಖಪಡಬಹುದು. ಆದರೂ ನಾನು ಕಾರ್ಯಕರ್ತನಾಗಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ನಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ. ದೃಢ ನಿಶ್ಚಯ ಮಾಡಿಯೇ ನಾನು ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಅಸೆಂಬ್ಲಿ ಚುನಾವಣೆಯಲ್ಲಿ ವಿನಾ ಕಾರಣ ನನಗೆ ಟಿಕೆಟ್ ನಿರಾಕರಿಸಲಾಯಿತು. ಪರಿಷತ್ ಚುನಾವಣೆಗೆ ಭರವಸೆ ನೀಡಿ ಬಳಿಕ ಬೇರೊಬ್ಬರಿಗೆ ಟಿಕೆಟ್ ನೀಡಿದರು. ಕರಾವಳಿಯಲ್ಲಿ ಯಾರನ್ನು ನಿಲ್ಲಿಸಿದರೂ ಪಕ್ಷ ಗೆಲ್ಲುತ್ತದೆ ಎಂಬ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರ ನಾಯಕರ ಭ್ರಮೆ ಈ ಚುನಾವಣೆಯಿಂದ ತೊಲಗಬೇಕು ಎಂದು ರಘುಪತಿ ಭಟ್ ಹೇಳಿದರು.
ಪದವೀಧರರಿಗೆ ಪದವಿ ನಂತರ ಕಾಡುವ ಉದ್ಯೋಗಕ್ಕೆ ನೆಟ್‌ವರ್ಕ್ ಡಾಟಾಬೇಸ್‌ಗಳ ಸ್ಥಾಪನೆ, ಸರ್ಕಾರಿ ಹುದ್ದೆಗಳ ಪರೀಕ್ಷೆ ನಡೆದ ಕಾಲಮಿತಿಯಲ್ಲಿ ಫಲಿತಾಂಶ ಪ್ರಕಟ, ಕ್ಷಿಪ್ರ ನೇಮಕಾತಿಗೆ ಒತ್ತಾಯ, ಪದವೀಧರರಿಗೆ ಸ್ವ ಉದ್ಯೋಗಕ್ಕಾಗಿ ಸಾಲ, ಸರ್ಕಾರಿ ಸಹಾಯಗಳಿಗೆ ಸಿಂಗಲ್ ವಿಂಡೋ ಸ್ಥಾಪನೆ, ಪದವೀಧರರಿಗೆ ಕೌಶಲ್ಯ ತರಬೇತಿ, ಸ್ಥಳೀಯ ಜಿಲ್ಲೆಗಳಲ್ಲಿ ಉದ್ಯಮ ಬಯಸುವ ಪದವೀಧರರಿಗೆ ಪೂರಕ ಉದ್ಯಮ ವಲಯದ ಸೃಷ್ಟಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ . ಶೀಘ್ರವೇ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸುತ್ತೇನೆ ಎಂದರು.
ನಾನು 2001ರಲ್ಲಿ ಉಡುಪಿ ನಗರ ಸಭೆ ಅಧ್ಯಕ್ಷನಾದ ಕ್ಷಣದಿಂದ ರಾಜಕೀಯದಲ್ಲಿ ಹಾಗೂ ಜನಪ್ರತಿನಿಧಿಯಾಗಿ ಸಕ್ರಿಯನಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಹುಮ್ಮಸ್ಸು ಇರುವುದರಿಂದ ಪದವೀಧರರ ಕಷ್ಟಕಾರ್ಪಣ್ಯಗಳಿಗೆ ನೆರವಾಗುತ್ತೇನೆ. ಎಲ್ಲಿಯೂ ಹಿಂದಿನವರಂತೆ ‘ಟಾಟಾ ಬಾಯಿ ಬಾಯಿ’ ಶಾಸಕನಾಗುವುದಿಲ್ಲ ಎಂದರು.
ಪಾಲಿಕೆ ಮಾಜಿ ಸದಸ್ಯ ನವೀನ್‌ಚಂದ್ರ, ನಮ್ಮ ಟಿವಿ ಚಾನೆಲ್ ಮುಖ್ಯಸ್ಥ ಡಾ.ಶಿವಶರಣ್ ಶೆಟ್ಟಿ ಇದ್ದರು.
;Resize=(128,128))
;Resize=(128,128))
;Resize=(128,128))