ಸಾರಾಂಶ
ಸಾಗರ : ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಪಕ್ಷದ ವಿರುದ್ಧವಲ್ಲ. ವಿಧಾನ ಪರಿಷತ್ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರ ರಚನೆ ಮಾಡಲು, ಬೀಳಿಸಲು ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ಚಿಹ್ನೆ ಇರುವುದಿಲ್ಲ. ಬದಲಾಗಿ ವ್ಯಕ್ತಿ ನೋಡಿ ಮತ ಚಲಾವಣೆ ಮಾಡಲಾಗುತ್ತದೆ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್ ಹೇಳಿದರು.
ಪಟ್ಟಣದ ಮಲೆನಾಡುಸಿರಿ ಸಭಾಂಗಣದಲ್ಲಿ ಚುನಾವಣೆ ಸಂಬಂಧ ಸಭೆ ನಡೆಸಿ ಮಾಧ್ಯಮದ ಜೊತೆ ಮಾತನಾಡಿ, ನೈಋತ್ಯ ಪದವೀಧರ ಕ್ಷೇತ್ರಕ್ಕೆ ಆಯ್ಕೆ ಮಾಡಿರುವ ಬಿಜೆಪಿ ಅಭ್ಯರ್ಥಿ ಬಗ್ಗೆ ನನಗೆ ಸಮಾಧಾನ ಇಲ್ಲದೆ ಇರುವುದು ಮತ್ತು ಪಕ್ಷ ನನಗೆ ಟಿಕೆಟ್ ಕೊಡುತ್ತೇನೆ ಎಂದು ಮೋಸ ಮಾಡಿರುವ ಹಿನ್ನೆಲೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.
೧೯೯೪ರಿಂದ ಕರಾವಳಿ ಭಾಗದಲ್ಲಿ ಭಾರತೀಯ ಜನತಾ ಪಕ್ಷ ಸಂಘಟಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದೇನೆ. ಮೂರು ಬಾರಿ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಕಳೆದ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನನಗೆ ಟಿಕೆಟ್ ನಿರಾಕರಿಸಲಾಗಿತ್ತು. ಜೊತೆಗೆ ವಿಧಾನ ಪರಿಷತ್‌ಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ನನಗೆ ವಿಧಾನ ಪರಿಷತ್ ಟಿಕೇಟ್ ನಿರಾಕರಿಸಲಾಗಿದೆ. ಹಿಂದಿನಿಂದಲೂ ಮಲೆನಾಡು ಭಾಗಕ್ಕೆ ಒಂದು, ಕರಾವಳಿ ಭಾಗಕ್ಕೆ ಒಂದು ಸ್ಥಾನ ನೀಡುವ ಪರಿಪಾಠ ಪಕ್ಷದಲ್ಲಿತ್ತು. ಈ ಬಾರಿ ಎರಡೂ ಕ್ಷೇತ್ರವನ್ನು ಮಲೆನಾಡು ಭಾಗಕ್ಕೆ ನೀಡಿರುವುದು ನನಗೆ ಬೇಸರ ತಂದಿದ್ದು, ಕಾರ್ಯಕರ್ತರು, ಪ್ರಮುಖರ ಜೊತೆ ಸಮಾಲೋಚನೆ ನಡೆಸಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.
ಬಿಜೆಪಿಯಿಂದ ಟಿಕೆಟ್ ಕೊಡುವುದಾದರೆ ಸಾಕಷ್ಟು ಜನ ಹಿರಿಯರು ಇದ್ದರು. ಲಿಂಗಾಯಿತ ಸಮುದಾಯದ ಗಿರೀಶ್ ಪಟೇಲ್, ಹಿರಿಯರಾದ ದತ್ತಾತ್ರಿ ಹೀಗೆ ಅನೇಕ ಮುಖಂಡರು ಇದ್ದರು. ಆದರೆ ಒಂದೂವರೆ ವರ್ಷದ ಹಿಂದೆ ಬಿಜೆಪಿಗೆ ಬಂದಿರುವ ಧನಂಜಯ ಸರ್ಜಿ ಅವರಿಗೆ ಟಿಕೇಟ್ ನೀಡಿರುವ ಪಕ್ಷದ ಕೆಲವರ ನಿರ್ಧಾರ ಸರಿಯಲ್ಲ. ಒಂದೂವರೆ ವರ್ಷದ ಹಿಂದೆ ಪರಿವಾರದ ವಿರುದ್ಧ ನಡೆದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಡಾ.ಧನಂಜಯ ಸರ್ಜಿಗೆ ಬಿಜೆಪಿ ಟಿಕೆಟ್ ನೀಡಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಕ್ಷೇತ್ರವ್ಯಾಪ್ತಿಯಲ್ಲಿ ಮತದಾರರ ಉತ್ತಮ ಸ್ಪಂದನೆ ಸಿಗುತ್ತಿದೆ. ಪಕ್ಷದೊಳಗೆ ಸಹ ನನಗೆ ಬೆಂಬಲ ಸಿಕ್ಕಿದ್ದು, ನೈಋತ್ಯ ಪದವೀಧರ ಕ್ಷೇತ್ರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.
ಗೋಷ್ಠಿಯಲ್ಲಿ ಕೆ.ವಿ.ಪ್ರವೀಣ್, ಯು.ಎಚ್.ರಾಮಪ್ಪ, ಶಂಕರ್ ಶಿವಮೊಗ್ಗ, ರಾಜಶೇಖರ್ ಇನ್ನಿತರರು ಹಾಜರಿದ್ದರು.