ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೊಸದುರ್ಗ ತಾಲೂಕನ್ನು ಮುಂದುವರೆದ ತಾಲೂಕನ್ನಾಗಿ ಮಾಡುವುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ತರುವ ಮೂಲಕ ಉದ್ಯೋಗ ಸೃಷ್ಠಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ 50ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕರ್ತರು, ಅಭಿಮಾನಿಗಳು ಆಯೋಜಿಸಿದ್ದ ಸುವರ್ಣ ಸಂಭ್ರಮ ಆಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ನಂತರ ಅಸಂಘಟಿತ ಕ್ಷೇತ್ರಗಳಲ್ಲಿ ವೃತ್ತಿ ನಿರತರಿಗೆ ಸನ್ಮಾನಿಸಿ ಮಾತನಾಡಿ ಅವರು, ಸ್ಥಳೀಯರಿಗೆ ಉದ್ಯೋಗ ದೊರಕಿಸಲು ಕೇಂದ್ರ ಸರ್ಕಾರದ ನೆರವಿನೊಂದಿಗೆ ಕೈಗಾರಿಕೆ ಸ್ಥಾಪಿಸಲು ಮುಂದಾಗಿದ್ದು, ಈ ಸಂಬಂಧ ಸಂಸದ ಗೋವಿಂದ ಕಾರಜೋಳ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಸ್ಥಳೀಯವಾಗಿ ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳು ಮುಂದೆ ಬಂದರೆ ಮೂಲ ಸೌಕರ್ಯ ಓದಗಿಸಿ ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಸಿಕ್ಕ ಅಧಿಕಾರವನ್ನು ಜನರ ಸೇವೆಗೆ ಬಳಸಿದ್ದೇನೆ. ಈವರೆಗೂ ಯಾರಿಂದಲೂ ಒಂದು ರೂಪಾಯಿ ಪಡೆಯದೇ, ಪರಿಶುದ್ಧ, ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದಿರುವೆ. ಮುಂದಿನ ದಿನಗಳಲ್ಲಿ ಹೊಸದುರ್ಗದಲ್ಲಿ ವಾರದಲ್ಲಿ 3 ದಿನ ಉಳಿದು ತಾಲೂಕಿನ ಜನರ ಕಷ್ಟ, ನೋವುಗಳಲ್ಲಿ ಭಾಗಿಯಾಗುವೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪ್ರೀತಿ, ವಿಶ್ವಾಸ ಗಳಿಸುತ್ತೇನೆ. ಕೆಲಸದ ಆಧಾರದ ಮೇಲೆ ನನ್ನ ಅವಶ್ಯಕತೆಯನ್ನು ಜನರೇ ನಿರ್ಧಾರ ಮಾಡಲಿ ಎಂದರು.ನನ್ನ ವಿಧಾನ ಪರಿಷತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಕಡೆ ತಲಾ ₹1.50 ಲಕ್ಷ ವೆಚ್ಚದಲ್ಲಿ 10 ಗ್ರಾಪಂ ಕಾರ್ಯಾಲಯಗಳನ್ನು ನಿರ್ಮಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿ ಮೊದಲ ಗ್ರಾಪಂ ಕಟ್ಟಡ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಲಾಗಿದೆ. ಜನರ ಆಶೀರ್ವಾದದಿಂದ ಸಿಕ್ಕ ಅಧಿಕಾರವನ್ನು ಜನರ ಸೇವೆಗೆ ಬಳಸುತ್ತೇನೆ. ಹಣ, ಅಂತಸ್ತು, ಅಧಿಕಾರಕ್ಕಿಂತ ವೈಯಕ್ತಿಕ ಸಂಬಂಧಗಳು ಹಾಗೂ ಜನರ ಹೃದಯದಲ್ಲಿ ಸ್ಥಾನ ಪಡೆಯುವುದು ಮುಖ್ಯ ಎಂದು ನುಡಿದರು.
ಈ ವೇಳೆ ಬಿಜೆಪಿ ರೈತ ಮೊರ್ಚಾ ರಾಜ್ಯ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್, ಉದ್ಯಮಿ ಸದ್ಗುರು ಪ್ರದೀಪ್, ಗೂಳಿಹಟ್ಟಿ ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್, ಮಲ್ಲಿಕಾರ್ಜುನ್, ತುಂಬಿನಕೆರೆ ಬಸವರಾಜ್, ದೊಡ್ಡಘಟ್ಟದ್ಯಾಮಣ್ಣ, ಚಳ್ಳಕೆರೆ ಕೆ.ಟಿ.ಕುಮಾರಸ್ವಾಮಿ, ಜಗದೀಶ್ ಸೇರಿ ಪುರಸಭೆ ಸದಸ್ಯರು ಹಾಜರಿದ್ದರು.