ಸಾರಾಂಶ
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಹಾಗೂ ನಗರದ ಹೃದಯಭಾಗದಲ್ಲಿ ನಿರ್ಮಿಸಿದ್ದ ಮಾನವ ಸರಪಳಿ ಎಲ್ಲರ ಗಮನ ಸೆಳೆಯಿತು.
ಚಾಮರಾಜನಗರ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಹಾಗೂ ನಗರದ ಹೃದಯಭಾಗದಲ್ಲಿ ನಿರ್ಮಿಸಿದ್ದ ಮಾನವ ಸರಪಳಿ ಎಲ್ಲರ ಗಮನ ಸೆಳೆಯಿತು. ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಅವರಣದಲ್ಲಿ ಜಾಗೃತಿ ಜಾಥಾಗೆ ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಅವರು ಹಸಿರು ನಿಶಾನೆ ತೋರಿ ಶುಭ ಕೋರಿದರು. ಚಾಮರಾಜೇಶ್ವರ ದೇವಾಲಯದಿಂದ ಹೊರಟ ಜಾಥಾದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ನಾಗರಿಕರು ‘ನನ್ನ ನಡೆ-ಮತಗಟ್ಟೆ ಕಡೆ’ ಹಾಗೂ ‘ಚುನಾವಣೆ ಪರ್ವ-ದೇಶದ ಗರ್ವ’ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ನಗರದ ಹೃದಯಭಾಗದಲ್ಲಿರುವ ಭುವನೇಶ್ವರಿ (ಪಚ್ಚಪ್ಪ) ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಘೋಷಣೆ ಕೂಗಿ ಜನಜಾಗೃತಿ ಮೂಡಿಸಿದರು.
ಇದೇ ವೇಳೆ ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಮಾತನಾಡಿ, ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾತದಾನದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಜಾಥಾ ಹಾಗೂ ಮಾನವ ಸರಪಳಿ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ, ನಗರಸಭೆ ಪರಿಸರ ಎಂಜಿನಿಯರ್ ಗಿರಿಜಮ್ಮ, ಕಂದಾಯ ನಿರೀಕ್ಷಕರಾದ ಶರವಣ, ಹಿರಿಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ, ಸಮುದಾಯ ಸಂಘಟನಾ ಅಧಿಕಾರಿ ವೆಂಕಟನಾಯಕ್, ಇತರರು ಇದ್ದರು. ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಅವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಜಿಪಂ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ ಹಸಿರು ನಿಶಾನೆ ತೋರಿ ಶುಭ ಕೋರಿದರು.