ಸಾರಾಂಶ
ಸಮೃದ್ಧ ಹಾನಗಲ್ಲ ನಿರ್ಮಾಣ ನನ್ನ ಆದ್ಯತೆ, ಅಂತಹ ಕಾಳಜಿಯ ವಾತಾವರಣ ಹಾಗೂ ನೆಮ್ಮದಿಗೆ ಪೂರಕವಾದ ಚಿಂತನೆಗೆ ಎಲ್ಲರೂ ಕೈಜೋಡಿಸಿ, ಅಭಿವೃದ್ಧಿಯ ದೃಢ ಸಂಕಲ್ಪಕ್ಕೆ ಸಹಕರಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಮನವಿ ಮಾಡಿದರು.
ಹಾನಗಲ್ಲ: ಸಮೃದ್ಧ ಹಾನಗಲ್ಲ ನಿರ್ಮಾಣ ನನ್ನ ಆದ್ಯತೆ, ಅಂತಹ ಕಾಳಜಿಯ ವಾತಾವರಣ ಹಾಗೂ ನೆಮ್ಮದಿಗೆ ಪೂರಕವಾದ ಚಿಂತನೆಗೆ ಎಲ್ಲರೂ ಕೈಜೋಡಿಸಿ, ಅಭಿವೃದ್ಧಿಯ ದೃಢ ಸಂಕಲ್ಪಕ್ಕೆ ಸಹಕರಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಮನವಿ ಮಾಡಿದರು.
ಹಾನಗಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಪೋಡಿ ಮುಕ್ತ ಅಭಿಯಾನದಡಿ 152 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಪಹಣಿ ದುರಸ್ತಿಗೊಳಿಸಿ ಗಣಕೀಕೃತಗೊಳಿಸಲಾಗುತ್ತಿದೆ. ಭೂ ಮಂಜೂರಿ ಪ್ರಕರಣ ಇತ್ಯರ್ಥ ಪಡಿಸಲಾಗುತ್ತಿದೆ. ಪಹಣಿ, ಆಧಾರ್ ಜೋಡಣೆಯಲ್ಲಿ ಶೇ. 93ರಷ್ಟು ಪ್ರಗತಿ ಸಾಧಿಸಿರುವ ಕಾರಣ ಹಾನಗಲ್ಲ ತಾಲೂಕು ಹಾವೇರಿ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಮನೆ ಬಾಗಿಲಿಗೆ ಪೌತಿ ಖಾತೆ ತಲುಪಿಸುವ ಅಭಿಯಾನ ಶೀಘ್ರ ಚಾಲನೆ ಪಡೆಯಲಿದೆ. 16 ಕಂದಾಯ ಗ್ರಾಮ, 47 ಉಪ ಗ್ರಾಮಗಳನ್ನು ಹೊಸದಾಗಿ ರಚಿಸಿ 13 ಸಾವಿರ ದಾಖಲೆ ರಹಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಒಟ್ಟಾರೆ ಇಡೀ ತಾಲೂಕು ಆಡಳಿತ ಯಂತ್ರ ಚುರುಕುಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.ತಹಸೀಲ್ದಾರ್ ರೇಣುಕಾ ಎಸ್., ಪುರಸಭೆ ಅಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಮಮತಾ ಆರೆಗೊಪ್ಪ, ಖುರ್ಷಿದ ಹುಲ್ಲತ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.