ಮೈ ರಿಯಾಲಿಟಿ- 2025 ರಿಯಲ್ ಎಸ್ಟೇಟ್ ಎಕ್ಸ್‌ ಪೋ ಉದ್ಘಾಟನೆ

| Published : May 10 2025, 01:17 AM IST

ಸಾರಾಂಶ

ಮೈಸೂರಿನಲ್ಲಿ 100 ವರ್ಷ ಪೂರೈಸಿರುವ ಅನೇಕ ಕಟ್ಟಡಗಳಿವೆ. ಆದರೆ, ನಮಗೆ ಅದರ ಬದಲಿ ಕಟ್ಟಡ ನಿರ್ಮಿಸುವ ಬಗ್ಗೆ ಯಾರು ಆಲೋಚನೆ ಮಾಡಿಲ್ಲ. ಅದು ಆಗುವಂತೆ ಆಲೋಚಿಸಬೇಕಿದೆ. ಮೈಸೂರಿನಲ್ಲಿ ಮೂರು ಅಂತಸ್ತಿನ ಕಟ್ಟಡ ಬಿಟ್ಟು ಅದನ್ನು ಬಿಟ್ಟು ಮುಂದೆ ಸಾಗುತ್ತಿಲ್ಲ. ನೀವು ಧ್ವನಿ ಎತ್ತಿದ್ದಾಗ ನಮಗೆ ಜವಾಬ್ದಾರಿ ಹೆಚ್ಚುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯ(ಬಿಎಐ) ಮೈಸೂರು ಘಟಕ, ಕ್ರೆಡಾಯ್ ಮೈಸೂರು ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾದನಲ್ಲಿ ಆಯೋಜಿಸಿರುವ ಮೈ ರಿಯಾಲಿಟಿ- ರಿಯಲ್ ಎಸ್ಟೇಟ್ ಎಕ್ಸ್‌ ಪೋ ಅನ್ನು ಶಾಸಕ ತನ್ವೀರ್ ಸೇಠ್ ಶುಕ್ರವಾರ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ವಹಿವಾಟಿನಲ್ಲಿ ಯಶಸು ಕಾಣಲು ಒತ್ತು ನೀಡದೇ ಯೋಜಿತ, ಸುಂದರ ನಗರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಸದ್ಯ ನಗರಕ್ಕೆ 300 ಎಂಎಲ್‌ ಡಿ ಒಳಚರಂಡಿ ನೀರನ್ನು ಶುದ್ಧೀಕರಣ ಮಾಡಬೇಕಿದೆ. ಅದರಲ್ಲಿ ಕೇವಲ 150 ಎಂಎಲ್‌ ಡಿ ನೀರನ್ನು ಮಾತ್ರ ಶುದ್ಧೀಕರಿಸಲಾಗುತ್ತಿದೆ. ಇನ್ನುಳಿದ 150 ಎಂಎಲ್‌ ಡಿ ಕೊಳಚೆ ನೀರು ನದಿ ಮೂಲಗಳಿಗೆ ಸೇರುತ್ತಿದೆ. ಇದನ್ನು ತಪ್ಪಿಸುವಂತೆ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ಆಡಳಿತ ವರ್ಗದ ಮೇಲೆ ಒತ್ತಡ ತರಬೇಕು ಎಂದರು.

ಮೈಸೂರಿನಲ್ಲಿ 100 ವರ್ಷ ಪೂರೈಸಿರುವ ಅನೇಕ ಕಟ್ಟಡಗಳಿವೆ. ಆದರೆ, ನಮಗೆ ಅದರ ಬದಲಿ ಕಟ್ಟಡ ನಿರ್ಮಿಸುವ ಬಗ್ಗೆ ಯಾರು ಆಲೋಚನೆ ಮಾಡಿಲ್ಲ. ಅದು ಆಗುವಂತೆ ಆಲೋಚಿಸಬೇಕಿದೆ. ಮೈಸೂರಿನಲ್ಲಿ ಮೂರು ಅಂತಸ್ತಿನ ಕಟ್ಟಡ ಬಿಟ್ಟು ಅದನ್ನು ಬಿಟ್ಟು ಮುಂದೆ ಸಾಗುತ್ತಿಲ್ಲ. ನೀವು ಧ್ವನಿ ಎತ್ತಿದ್ದಾಗ ನಮಗೆ ಜವಾಬ್ದಾರಿ ಹೆಚ್ಚುತ್ತದೆ. ಮೈಸೂರಿನಲ್ಲಿ ಬೆಂಗಳೂರಿನ ರೀತಿಯ ಒಂದು ಲಾಲ್ ಬಾಗ್ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಇರುವ ಚಾಮುಂಡಿಬೆಟ್ಟವು ಒತ್ತುವರಿಯಾಗಿ ಕಾಂಕ್ರಿಟ್ ಬೆಟ್ಟವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮಾತನಾಡಿ, ನಿರ್ಮಾಣ ಕ್ಷೇತ್ರದ ಸಂಘಟನೆಗಳು ಲಾಭದೊಂದಿಗೆ ಸಮಾಜಮುಖಿಯಾಗಿ ಚಿಂತನೆ ಮಾಡಬೇಕು. ಎಲ್ಲಾ ವರ್ಗದ ಜನರಿಗೂ ನಿವೇಶನ ಸಿಗುವಂತೆ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಬಡಾವಣೆಗಳಲ್ಲಿ ಉತ್ತಮ ಸೌಲಭ್ಯ ನೀಡಬೇಕು. ಅಲ್ಲದೆ, ನಗರದ ದೂರದೃಷ್ಟಿ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಬಿಐಎನ ಮೇಳ ಆಯೋಜನೆ ಸಮಿತಿ ಅಧ್ಯಕ್ಷ ನಂದಕುಮಾರ್ ಮಾತನಾಡಿ, 17 ವರ್ಷಗಳಿಂದ ಆಯೋಜಿಸುತ್ತಿರುವ ಈ ಮೇಳದಲ್ಲಿ ಒಟ್ಟು 35 ಮಳಿಗೆಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವ ಇತ್ತೀಚಿನ ಟ್ರೆಂಡ್‌ ಗಳು, ನಾವಿನ್ಯತೆಗಳು ಮತ್ತು ಅವಕಾಶಗಳನ್ನು ಪ್ರದರ್ಶಿಸಲಾಗಿದೆ ಎಂದರು.

ಮೈರಿಯಾಲಿಟಿ- 2025 ಪ್ರದರ್ಶನದಲ್ಲಿ 30 ಹೆಚ್ಚು ಮಳಿಗೆಗಳಿದ್ದು, ಪ್ಲಾಟಿನಂ, ಗೋಲ್ಡ್, ಸಿಲ್ವರ್ ಮತ್ತು ರೆಗ್ಯುಲರ್ ಎಂದು 4 ವರ್ಗದ ಸ್ಟಾಲ್‌ ಗಳನ್ನು ವಿಂಗಡಿಸಲಾಗಿದೆ. ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆಗಳು ಗ್ರಾಹಕರಿಗೆ ಮಾಹಿತಿ ಒದಗಿಸುತ್ತಿವೆ. ಮೇ 12 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8.30 ರವರೆಗೆ ಪ್ರದರ್ಶನವಿದೆ.

ಬಿಎಐ ಮೈಸೂರು ಅಧ್ಯಕ್ಷ ವಿ. ಶ್ರೀನಾಥ್, ಕಾರ್ಯದರ್ಶಿ ವಿ. ಅಕ್ಷಯ್ ಕುಮಾರ್, ಕ್ರೆಡಾಯ್ ಅಧ್ಯಕ್ಷ ಹರೀಶ್ ಶೆಣೈ, ಕಾರ್ಯದರ್ಶಿ ನಾಗರಾಜ್ ವಿ ಬೈರಿ, ಸಿ.ಡಿ. ಕೃಷ್ಣ ಮೊದಲಾದಲರು ಇದ್ದರು.ಗ್ರೇಟರ್ ಮೈಸೂರು ಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿದೆ. 1.38 ಲಕ್ಷ ಆಸ್ತಿಯ ಹಸ್ತಾಂತರ ಮಾಡಿದ್ದೇವೆ. ಅದರ ಕಸ ನೀರಿನ ನಿರ್ವಹಣೆ ಮಾಡುವುದು ಹೇಗೆ ಎಂದು ಚಿಂತಿಸಬೇಕು. ಕೇವಲ ಲೇಔಟ್ ಮಾಡುವುದರಿಂದ ಏನು ಪ್ರಯೋಜನವಾಗುವುದಿಲ್ಲ. ಪಾರ್ಕಿಂಗ್ ವ್ಯವಸ್ಥೆ ಮಾಡುವುದೇ ಇಂದು ದೊಡ್ಡ ಸವಾಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಮಾಡಬೇಕು.

- ತನ್ವೀರ್ ಸೇಠ್, ಶಾಸಕ