ಕಾಟಾಚಾರಕ್ಕೆ ಮೈಷುಗರ್ ಕಾರ್ಖಾನೆ ಕಾರ್ಯಾಚರಣೆ..!

| Published : Aug 27 2025, 01:00 AM IST

ಕಾಟಾಚಾರಕ್ಕೆ ಮೈಷುಗರ್ ಕಾರ್ಖಾನೆ ಕಾರ್ಯಾಚರಣೆ..!
Share this Article
  • FB
  • TW
  • Linkdin
  • Email

ಸಾರಾಂಶ

ಮೈಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ವೈಫಲ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಅದು ಸುಗಮವಾಗಿ ನಡೆಯಬಾರದೆಂಬುದೇ ಬಹುತೇಕರ ಬಯಕೆ. ಎಷ್ಟೇ ಹಣ ಕೊಟ್ಟರೂ ಸುಧಾರಣೆಯ ಹಾದಿಗೆ ಕಂಪನಿ ಬರುವ ಲಕ್ಷಣಗಳಿಲ್ಲ. ಹೊಸ ಕಾರ್ಖಾನೆ ಮಾಡುವುದಾಗಿ ಸರ್ಕಾರ ಜಿಲ್ಲೆಯ ರೈತರ ಮೂಗಿಗೆ ತುಪ್ಪ ಸವರಿ ಬಿಟ್ಟಿದೆ. ಆ ತುಪ್ಪ ಬಾಯಿಗೆ ಬರುವುದಿಲ್ಲವೆಂಬ ಸತ್ಯ ಗೊತ್ತಿದ್ದರೂ ರೈತರು ಆಸೆಯಿಂದ ಈಗಲೂ ಎದುರುನೋಡುತ್ತಲೇ ಇದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ವೈಫಲ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಅದು ಸುಗಮವಾಗಿ ನಡೆಯಬಾರದೆಂಬುದೇ ಬಹುತೇಕರ ಬಯಕೆ. ಎಷ್ಟೇ ಹಣ ಕೊಟ್ಟರೂ ಸುಧಾರಣೆಯ ಹಾದಿಗೆ ಕಂಪನಿ ಬರುವ ಲಕ್ಷಣಗಳಿಲ್ಲ. ಹೊಸ ಕಾರ್ಖಾನೆ ಮಾಡುವುದಾಗಿ ಸರ್ಕಾರ ಜಿಲ್ಲೆಯ ರೈತರ ಮೂಗಿಗೆ ತುಪ್ಪ ಸವರಿ ಬಿಟ್ಟಿದೆ. ಆ ತುಪ್ಪ ಬಾಯಿಗೆ ಬರುವುದಿಲ್ಲವೆಂಬ ಸತ್ಯ ಗೊತ್ತಿದ್ದರೂ ರೈತರು ಆಸೆಯಿಂದ ಈಗಲೂ ಎದುರುನೋಡುತ್ತಲೇ ಇದ್ದಾರೆ.

ಕಾರ್ಖಾನೆಯನ್ನು ಸುಧಾರಣೆಗೊಳಿಸುವ ಇಚ್ಛಾಶಕ್ತಿ, ಬದ್ಧತೆ ಸರ್ಕಾರಕ್ಕಿದ್ದಿದ್ದರೆ ಎಂದೋ ಹೊಸ ಕಾರ್ಖಾನೆಯಾಗಿ ಪರಿವರ್ತಿಸುತ್ತಿತ್ತು. ಹೊಸ ಕಾರ್ಖಾನೆ ಪಕ್ಕಕ್ಕಿರಲಿ. ಬಾಯ್ಲಿಂಗ್ ಹೌಸ್‌ನ್ನು ಸುಗಮವಾಗಿ ಕಾರ್ಯಾಚರಣೆ ಮಾಡುವುದಕ್ಕೂ ಸರ್ಕಾರಕ್ಕೆ ಆಸಕ್ತಿ ಇಲ್ಲ. ಸರ್ಕಾರ ಹಣ ಕೊಟ್ಟರೂ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸುವ ತಾಕತ್ತು ಆಡಳಿತ ಮಂಡಳಿಯವರಿಗಿಲ್ಲ. ಆಡಳಿತ ಮತ್ತು ತಾಂತ್ರಿಕ ಅನುಭವವಿಲ್ಲದವರಿಗೆ ಯಜಮಾನಿಕೆ ಕೊಟ್ಟು ಕಾರ್ಖಾನೆಯನ್ನು ಪ್ರಗತಿದಾಯಕಾಗಿ ನಡೆಸುವುದು ಸಾಧ್ಯವೇ?.

ಮೈಷುಗರ್ ಕಾರ್ಖಾನೆಯೊಳಗೆ ನೌಕರರೇ ಕಾಣಸಿಗುವುದಿಲ್ಲ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರೆಂಬಂತೆ ಕೆಲಸದಲ್ಲಿದ್ದಾರೆ. ಕಬ್ಬು ಅರೆಯುವಿಕೆ ಒಂದೆಡೆಯಾದರೆ ಅರೆದ ಕಬ್ಬಿನಿಂದ ಹೊರಬಂದ ಸಿಹಿಯಾದ ರಸ ಹೆಬ್ಬಳ್ಳಕ್ಕೆ ಸೇರುತ್ತಿದೆ ಎನ್ನುವುದು ಬಹುತೇಕರ ಬಾಯಲ್ಲಿ ಹರಿದಾಡುತ್ತಿರುವ ಮಾತಾಗಿದೆ. ಕಬ್ಬು ಅರೆಯುವುದಕ್ಕೆ ತಕ್ಕಂತೆ ಗುಣಮಟ್ಟದ ಸಕ್ಕರೆ ಉತ್ಪಾದನೆಯಾಗದಿರುವುದು ಈ ಮಾತುಗಳಿಗೆ ಪುಷ್ಠಿ ನೀಡುವಂತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಾರ್ಖಾನೆ ತೀರಾ ಕೆಟ್ಟದಾಗಿ ನಡೆಯುತ್ತಿದೆ. ಹಿಂದಿನ ವರ್ಷ ಕನಿಷ್ಠ ಪಕ್ಷ ೨ ಲಕ್ಷ ಟನ್ ಕಬ್ಬನ್ನು ಅರೆಯಲಾಗಿತ್ತು. ಈ ವರ್ಷ ಕಾರ್ಖಾನೆ ಕಬ್ಬು ಅರೆಯುವ ಶೈಲಿ ನೋಡಿದರೆ ಅಷ್ಟೊಂದು ಕಬ್ಬು ಅರೆಯುವ ಸಾಧ್ಯತೆಗಳಿಲ್ಲ. ಪೂರ್ವ ಸಿದ್ಧತೆ ಇಲ್ಲದೆ ಕಾರ್ಖಾನೆ ಆರಂಭಿಸಿದ್ದು, ಗುತ್ತಿಗೆ ಪಡೆದಿರುವ ಆರ್.ಬಿ.ಟೆಕ್ ಕಂಪನಿ ಹಾಗೂ ಆಡಳಿತ ಮಂಡಳಿಯವರ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎನ್ನುವಂತಾಗಿದೆ ಕಾರ್ಖಾನೆಯ ಪ್ರಸ್ತುತ ಸ್ಥಿತಿ.

ಆರ್.ಬಿ.ಟೆಕ್‌ನವರು ಗುತ್ತಿಗೆ ನಿಯಮಗಳಿಗೆ ಅನುಸಾರವಾಗಿ ಕಬ್ಬು ಅರೆಯುತ್ತಿದ್ದಾರೆಯೇ ಎಂಬ ಬಗ್ಗೆ ಮೇಲ್ವಿಚಾರಣೆ ಮಾಡಬೇಕಿದ್ದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್ ಅವರ ಜವಾಬ್ದಾರಿ. ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮೂಲಕ ಸರ್ಕಾರದ ಗಮನಸೆಳೆಯಬೇಕಿತ್ತು. ರೈತರಿಗೆ ಯಾವುದೇ ತೊಂದರೆಗಳಾಗದಂತೆ ಎಚ್ಚರ ವಹಿಸಿ ಕೆಲಸ ನಿರ್ವಹಿಸಬೇಕಿತ್ತು.

ಆದರೆ, ಕಾರ್ಖಾನೆ ಸುಗಮವಾಗಿ ಕಾರ್ಯಾಚರಣೆ ಮಾಡದಿರುವುದಕ್ಕೆ ಜವಾಬ್ದಾರಿ ತೆಗೆದುಕೊಳ್ಳುವವರೇ ಯಾರೂ ಇಲ್ಲ. ಗುತ್ತಿಗೆ ಪಡೆದ ಆರ್.ಬಿ.ಟೆಕ್ ಕಂಪನಿ ಇನ್ನೂ ಸಮರ್ಪಕವಾಗಿ ಕಬ್ಬು ಅರೆದಿಲ್ಲವಾದರೂ ಈ ಸಾಲಿನಲ್ಲಿ ಕಂಪನಿಗೆ ಬರಬೇಕಾದ ಹಣದಲ್ಲಿ ಸುಮಾರು ೧೪ ಕೋಟಿ ರು. ಹಣವನ್ನು ಪಡೆದುಕೊಂಡಿದ್ದು, ಕಾಟಾಚಾರಕ್ಕೆ ಕಬ್ಬು ಅರೆಯುತ್ತಿರುವಂತೆ ಕಂಡುಬರುತ್ತಿದೆ. ಇದರ ನಡುವೆ ರೈತ ಸಂಘಟನೆಗಳು ಕಾರ್ಖಾನೆ ಸಮರ್ಪಕವಾಗಿ ಕಾರ್ಯಾಚರಣೆ ಮಾಡುವುದಕ್ಕೆ ಹೋರಾಟ ನಡೆಸುತ್ತಿದ್ದರೂ ಅದು ತೀವ್ರತೆ ಪಡೆದುಕೊಳ್ಳುತ್ತಿಲ್ಲ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಖಾನೆ ಆಡಳಿತ ಮಂಡಳಿ, ಕಂಪನಿ ನಡೆಸುತ್ತಿರುವ ಆರ್.ಬಿ.ಟೆಕ್ ಕಂಪನಿಯವರೂ ಹೋರಾಟವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತೆ ಕಾರ್ಖಾನೆ ಕಾರ್ಯಾಚರಣೆ ನಡೆಸುತ್ತಿದೆ.ಆರ್‌ಬಿ ಟೆಕ್ ಕಂಪನಿಯವರಿಂದ ಹಣ ವಾಪಸ್ ಪಡೆದುಕೊಳ್ಳಿ..!

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಅಸಮರ್ಪಕವಾಗಿ ಕಬ್ಬು ಅರೆಯುತ್ತಿರುವುದಕ್ಕೆ ಗುತ್ತಿಗೆ ಮತ್ತು ಕಾರ್ಯಾಚರಣೆ ಜವಾಬ್ದಾರಿ ಹೊತ್ತಿರುವ ಆರ್.ಬಿ.ಟೆಕ್ ಕಂಪನಿಯವರನ್ನೇ ಹೊಣೆಗಾರರನ್ನಾಗಿ ಮಾಡಿ ಅವರಿಗೆ ನೀಡಿರುವ ಹಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಮಂಗಳವಾರ ಕಾರ್ಖಾನೆ ಸಮರ್ಪಕವಾಗಿ ಕಬ್ಬು ಅರೆಯದಿರುವ ಬಗ್ಗೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್ ನೇತೃತ್ವದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಕೆ.ಬೋರಯ್ಯ ಮಾತನಾಡಿ, ಪೂರ್ವಸಿದ್ಧತೆಯೊಂದಿಗೆ ಕಾರ್ಖಾನೆಯನ್ನು ಆರಂಭಿಸಬೇಕಿದ್ದು ಆರ್.ಬಿ.ಟೆಕ್ ಕಂಪನಿ ಜವಾಬ್ದಾರಿ. ಕಾರ್ಖಾನೆ ಈಗ ಸಮರ್ಪಕವಾಗಿ ಕಾರ್ಯಾಚರಣೆ ನಡೆಸದಿರುವುದರಿಂದ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕು. ಅವರಿಗೆ ಕೊಟ್ಟಿರುವ ಹಣವನ್ನು ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಪಡಿಸಿದರು.

ರೈತ ಮುಖಂಡೆ ಸುನಂದಾ ಜಯರಾಂ ಮಾತನಾಡಿ, ಮಹಾರಾಷ್ಟ್ರದಿಂದ ಬಂದವರಿಗೆ ಯಾರ್ಡ್‌ನಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಗಳಿಲ್ಲ. ಕೂಡಲೇ ಅವರಿಗೆ ವ್ಯವಸ್ಥೆ ಮಾಡಿಕೊಡಿ. ಕುಡಿಯಲು ನೀರಿಲ್ಲ, ಕ್ಯಾಂಟೀನ್ ವ್ಯವಸ್ಥೆ ಇಲ್ಲ. ಶೌಚಾಲಯವಿಲ್ಲ. ಮಾನವೀಯತೆ ದೃಷ್ಟಿಯಿಂದ ಅವೆಲ್ಲವನ್ನೂ ಒದಗಿಸಿಕೊಡಬೇಕು. ಜೊತೆಗೆ ಕಬ್ಬಿನ ಜ್ಯೂಸ್‌ನ್ನು ಹೆಬ್ಬಳ್ಳಕ್ಕೆ ಹರಿಯಬಿಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ತಡೆಹಾಕಬೇಕು. ಇನ್ನು ಮುಂದಾದರೂ ಯಾವುದೇ ತೊಂದರೆಗಳಿಲ್ಲದೆ ಕಾರ್ಖಾನೆ ಕಬ್ಬು ನುರಿಸುವುದರೊಂದಿಗೆ ರೈತರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.

ರೈತಸಂಘದ ಇಂಡುವಾಳು ಚಂದ್ರಶೇಖರ್ ಮಾತನಾಡಿ, ರೈತರು ಕಷ್ಟಪಟ್ಟು ಕಬ್ಬು ಬೆಳೆದು ತಂದಿದ್ದಾರೆ. ಅದನ್ನು ಸಮರ್ಥವಾಗಿ ಅರೆಯದೆ ಒಣಗಿಸುವುದು ಎಷ್ಟರಮಟ್ಟಿಗೆ ಸರಿ. ಹಲವರು ಕಬ್ಬು ತಂದು ಎಂಟು ದಿನಗಳಾಗಿದೆ. ದಿನದಿಂದ ದಿನಕ್ಕೆ ಕಬ್ಬು ಒಣಗುತ್ತಿದೆ. ಟನ್‌ಗೆ ೬೦೦ ಕೆಜಿ ಕಡಿಮೆಯಾಗುತ್ತದೆ. ಈ ನಷ್ಟವನ್ನು ಭರಿಸುವವರು ಯಾರು ಎಂದು ಪ್ರಶ್ನಿಸಿದರು.

ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಕಳೆದ ವರ್ಷ ಅರೆದಿರುವ ೨ ಲಕ್ಷ ಟನ್ ಕಬ್ಬಿಗೆ ೨.೫೦ ಲಕ್ಷ ಟನ್ ಕಬ್ಬಿಗೆ ಹಣ ಪಾವತಿಸಲಾಗಿದೆ. ಈ ಬಗ್ಗೆ ಹಣಕಾಸು ಸಹಾಯಕರ ಅಭಿಪ್ರಾಯ ಪಡೆಯಲಿಲ್ಲವೇಕೆ? ಈ ಸಾಲಿನಲ್ಲಿ ಕಬ್ಬು ಅರೆಯದಿದ್ದರೂ ಸುಮಾರು ೧೪ ಕೋಟಿ ರು. ಪಾವತಿಸಲಾಗಿದೆ. ಗುತ್ತಿಗೆ ನಿಯಮದನ್ವಯ ಶೇ.೯ರ ಇಳುವರಿ ಬಂದರೆ ಟನ್‌ಗೆ ೯೦೦ ರು. ಕೊಡಬೇಕು. ಇಲ್ಲಿ ಶೇ.೬ರಷ್ಟು ಇಳುವರಿ ಬರುತ್ತಿರುವುದರಿಂದ ಹಣ ಕಡಿತ ಮಾಡಬೇಕು ಎಂದಾಗ, ಅಧ್ಯಕ್ಷ ಸಿ.ಡಿ.ಗಂಗಾಧರ್ ಈ ಬಗ್ಗೆ ಆರ್.ಬಿ.ಟೆಕ್‌ನವರಿಗೆ ನೋಟೀಸ್ ಕೊಟ್ಟಿದ್ದೇವೆಂದಷ್ಟೇ ಹೇಳಿದರು.

ಕಾರ್ಖಾನೆ ಸಮರ್ಥವಾಗಿ ಕಾರ್ಯಾಚರಣೆ ನಡೆಸದಿರುವ ಬಗ್ಗೆ, ಕಬ್ಬಿನ ರಸ ಹೆಬ್ಬಳ್ಳ ಸೇರುತ್ತಿರುವ ಬಗ್ಗೆ, ಆರ್‌ಬಿ ಟೆಕ್‌ನವರಿಗೆ ಹೆಚ್ಚಿನ ಹಣ ಪಾವತಿ ಮಾಡಿರುವ ಕುರಿತು ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಂದ ಸರಿಯಾದ ಉತ್ತರಗಳು ಬರಲೇಇಲ್ಲ. ಎಲ್ಲವನ್ನು ತೇಲಿಸಿ ಮಾತನಾಡಿ ಸಭೆಗೆ ಮಂಗಳ ಹಾಡಿದರು.

ಸಭೆಯಲ್ಲಿ ಶಿವಳ್ಳಿ ಚಂದ್ರಶೇಖರ್, ಸಂತೋಷ್, ಎಚ್.ಡಿ.ಜಯರಾಂ, ಮುದ್ದೇಗೌಡ ಸೇರಿದಂತೆ ಹಲವರಿದ್ದರು.ಕಬ್ಬಿನ ಜ್ಯೂಸ್ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗುತ್ತಿರುವುದನ್ನು ಕೂಡಲೇ ತಡೆಗಟ್ಟಲಾಗುವುದು. ಕಾರ್ಖಾನೆ ವ್ಯವಸ್ಥಿತವಾಗಿ ಕಬ್ಬು ಅರೆಯುವುದಕ್ಕೆ ಸೂಕ್ತ ಕ್ರಮ ಜರುಗಿಸಲಾಗುವುದು. ಕಬ್ಬು ತಂದವರಿಗೆ ಕ್ಯಾಂಟೀನ್, ಕುಡಿಯುವ ನೀರಿನ ಸೌಲಭ್ಯ ಒದಗಿಸುವುದಕ್ಕೆ ತಕ್ಷಣಕ್ಕೇ ವ್ಯವಸ್ಥೆ ಮಾಡಲಾಗುವುದು. ಮುಂದಿನ ತಿಂಗಳು ೧೦ ರಿಂದ ರೈತರಿಗೆ ಕಬ್ಬಿನ ಹಣ ಪಾವತಿಸಲಾಗುವುದು.

- ಸಿ.ಡಿ.ಗಂಗಾಧರ್, ಅಧ್ಯಕ್ಷರು, ಮೈಷುಗರ್ ಕಾರ್ಖಾನೆಕಾರ್ಖಾನೆಯೊಳಗಿನ ನೌಕರರೇ ನಮಗೆ ಒಳೇಟು ನೀಡುತ್ತಿದ್ದಾರೆ. ಕಾರ್ಖಾನೆಯೊಳಗಿನ ವಿಡಿಯೋಗಳನ್ನು ಹೊರಗೆ ಹಂಚುತ್ತಿದ್ದಾರೆ. ನಮ್ಮೂರಿನ ಕಾರ್ಖಾನೆಯ ಎಂಡಿಯಾಗಿ ಉತ್ತಮವಾಗಿ ಆಡಳಿತ ನಡೆಸಬೇಕೆಂಬ ಆಸೆಯಿಂದ ಇಲ್ಲಿಗೆ ಬಂದೆ. ಇಲ್ಲಿನ ವ್ಯವಸ್ಥೆ ನೋಡಿದರೆ ಭಯವಾಗುತ್ತಿದೆ. ಸರ್ಕಾರ ಪೂರ್ಣಕಾಲಿಕ ಎಂಡಿಯನ್ನು ನೇಮಕ ಮಾಡಿದರೆ ನಾನು ಇಲ್ಲಿಂದ ಹೊರನಡೆಯುತ್ತೇನೆ.

- ಕೆ.ಮಂಗಲ್‌ದಾಸ್‌, ಎಂಡಿ, ಮೈಷುಗರ್