ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನಲ್ಲಿ ನಾಡು, ನುಡಿ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು ಅದಕ್ಕೆ ಬೇಕಾದ ಬೆಂಬಲ, ಸಹಕಾರ ನೀಡುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು.ಪಟ್ಟಣದ ಜ್ಞಾನ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗುಂಡ್ಲುಪೇಟೆ ನಾಗರಿಕ ವೇದಿಕೆಯು ಸಂತ ಶಿಶುನಾಳ ಷರೀಫ್ ಪ್ರಶಸ್ತಿಗೆ ಪುರಸ್ಕೃತರಾದ ವಿದ್ಯಾರ್ಥಿಗಳ ನೆಚ್ಚಿನ ಮೇಷ್ಟ್ರಾಗಿದ್ದ ಪ್ರೊ.ಎಸ್.ಮಲ್ಲಣ್ಣಗೆ ಗುಂಡ್ಲುಪೇಟೆ ನಾಗರಿಕ ಪ್ರಶಸ್ತಿ ವಿತರಿಸಿ ಮಾತನಾಡಿದರು. ಪ್ರೊ.ಮಲ್ಲಣ್ಣ ನಮ್ಮ ತಂದೆ (ಎಚ್.ಎಸ್.ಮಹದೇವಪ್ರಸಾದ್)ಗೆ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು. ನಿವೃತ್ತರಾಗಿದ್ದರೂ ಸುಗಮ ಸಂಗೀತದ ಮೂಲಕ ನಾಡಿನೆಲ್ಲೆಡೆ ನಮ್ಮ ಜಿಲ್ಲೆಯ ಹೆಸರನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದರು. ಪ್ರೊ.ಮಲ್ಲಣ್ಣಗೆ ನಾಡಿನ ಹೆಸರಾಂತ ಅನೇಕ ಪ್ರಶಸ್ತಿ ಪುರಸ್ಕಾರ ಲಭಿಸಿದೆಯಾದರೂ ಜಿಲ್ಲಾ ಕಸಾಪ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ನಾಗರಿಕ ಪ್ರಶಸ್ತಿಯನ್ನು ನಾನು ನೀಡಿ ಅಭಿನಂದಿಸುತ್ತಿರುವುದು ಖುಷಿ ತಂದಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್) ಮಾತನಾಡಿ, ಪ್ರೊ.ಮಲ್ಲಣ್ಣ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲದಲ್ಲಿ ಹುಟ್ಟಿ ಸಿದ್ದಗಂಗಾ ಶ್ರೀ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮುಗಿಸಿ, ಮೈಸೂರಿನ ಜೆಎಸ್‌ಎಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಾಂಶುಪಾಲ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು. ಹವ್ಯಾಸದಲ್ಲಿ ಗಾಯಕರು. ತಮ್ಮ ಕಂಚಿನ ಕಂಠದಲ್ಲಿ ನಾಡಿನ ಹೆಸರಾಂತ ಗಾಯಕರು, ಸುಗಮ ಸಂಗೀತ ಪಿತಾಮಹಾರಾದ ಕಾಳಿಂಗರಾಯರ ಗೀತೆಗಳನ್ನು ದೇಶದ ಗಡಿ ದಾಟಿಸಿ ದೇಶ, ವಿದೇಶಗಳಲ್ಲೂ ಪರಿಚಯಿಸಿ ನಮ್ಮ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದರು. ನಂತರ ವೇದಿಕೆಯಲ್ಲಿ ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟ್, ಮೈಸೂರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಶಾಸಕರು ಕುಳಿತು ಕೆಲವು ಗೀತೆಗಳನ್ನು ಕೇಳಿ ಆನಂದಿಸಿದರು.ತಮ್ಮ ಪ್ರಸ್ತುತಿಯಲ್ಲಿ ನಡೆಸಿದ ಒಂದೂವರೆ ತಾಸಿನ ಗೀತಗಾಯನದಲ್ಲಿ ಕಾಳಿಂಗರಾಯರು, ಕುವೆಂಪು, ಬೇಂದ್ರೆ , ಚಲನಚಿತ್ರ ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿದರು. ಇಡೀ ಕಾರ್ಯಕ್ರಮ ನಿರ್ವಹಣೆ ಮಾಡಿದ ಪೃಥ್ವಿರಾಜ್ ಕಾರ್ಯಕ್ರಮದಲ್ಲಿ ನಾಗರಹಾವು ಚಿತ್ರದ ಬಾರೆ, ಬಾರೆ, ಚಂದದ ಚೆಲುವಿನ ತಾರೆ ಹಾಡನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಧುಸೂದನ್,ಸದಸ್ಯ ಎನ್.ಎನ್,ಕುಮಾರ್.ವಿವೇಕ ಸಿರಿ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ ಮರಳಾಪುರ,ಪ್ರಗತಿಪರ ಕೃಷಿಕ ಚಿದಾನಂದ,ಶಿಕ್ಷಕ ಕೆ.ಎಂ.ಗುರುಪ್ರಸಾದ್,ಹಾಲಹಳ್ಳಿ ಬಸವರಾಜ್ ಉಪಸ್ಥಿತರಿದ್ದರು.
ಜಿಲ್ಲೆಯ ಪ್ರತಿಭೆಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಹಿತ್ಯ ಪರಿಷತ್ತು ಸದಾ ಮುಂದಿರುತ್ತದೆ. ಸಾಹಿತ್ಯವನ್ನು ಜನರಿಗೆ ತಲುಪಿಸಲು ಸಂಗೀತವೇ ಸಾಧನ. ಇಂದು ನಾಡಿನ ಖ್ಯಾತ ಕವಿಗಳ ಕವಿತೆಗಳು ಜನರ ಮನದಲ್ಲಿ ಉಳಿಯಲು ಸುಗಮ ಸಂಗೀತವೇ ಕಾರಣ.-ಎಂ.ಶೈಲಕುಮಾರ್ (ಶೈಲೇಶ್), ಕಸಾಪ ಜಿಲ್ಲಾಧ್ಯಕ್ಷತವರಿನ ಪ್ರಶಸ್ತಿಯ ತೂಕವೇ ಬೇರೆ: ಪ್ರೊ.ಮಲ್ಲಣ್ಣನನಗೆ ದೇಶ, ವಿದೇಶಗಳಲ್ಲಿ ಹಾಗೂ ನಾಡಿನ ವಿವಿಧ ಭಾಗಗಳಲ್ಲಿ ಪ್ರಶಸ್ತಿ ಪುರಸ್ಕಾರ ನೀಡಿದ್ದಾರೆ. ಆದರೆ ಇಂದು (ಮಂಗಳವಾರ) ಗುಂಡ್ಲುಪೇಟೆ ನಾಗರಿಕ ಪ್ರಶಸ್ತಿ ನನಗೆ ಹೆಚ್ಚು ಆನಂದ ತಂದಿದೆ ಎಂದು ಪ್ರೊ.ಮಲ್ಲಣ್ಣ ಹೇಳಿದರು. ಕಾರಣ ಇದು ನನ್ನ ಜಿಲ್ಲೆಯ ಪ್ರಶಸ್ತಿ, ತವರಿನ ಪ್ರಶಸ್ತಿಯ ತೂಕವೆ ಬೇರೆ. ಹಾಗಾಗಿ ನನ್ನ ವಿದ್ಯಾರ್ಥಿಯಾಗಿದ್ದ ಎಚ್.ಎಸ್.ಮಹದೇವಪ್ರಸಾದರ ಮಗ ಇಲ್ಲಿನ ಶಾಸಕರಾಗಿ ನನ್ನನ್ನು ಗೌರವಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಪ್ರಶಂಸಿದರು.