ಕೆಲವರಿಂದ ನನ್ನ ಟಾರ್ಗೆಟ್: ಡಾ.ಮಹೇಶ್ ಜೋಶಿ

| Published : Nov 14 2024, 12:48 AM IST

ಸಾರಾಂಶ

ಸಮ್ಮೇಳನ ನಡೆಯುವ ಸ್ಥಳ ಈಗಾಗಲೇ ನಿಗದಿಯಾಗಿದೆ. ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ವೇದಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಜಾಗದ ವಿಚಾರಕ್ಕೆ ಏನೇ ಗೊಂದಲಗಳಿದ್ದರೂ ಅವರ ಬಳಿ ಅಥವಾ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಅಂತಿಮಗೊಳಿಸಿಕೊಳ್ಳಬೇಕು. ಎಲ್ಲದ್ದಕ್ಕೂ ರಾಜ್ಯಾಧ್ಯಕ್ಷನಾದ ನನ್ನನ್ನೇ ಪ್ರಶ್ನಿಸುವುದು ಮತ್ತು ಗೊಂದಲಗಳನ್ನು ಮೂಡಿಸುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಲವರು ಉದ್ದೇಶ ಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲರಿಗೂ ಸಮ್ಮೇಳನದ ಬಗ್ಗೆ ಸಲಹೆ ಕೊಡಲು ಮುಕ್ತ ಅವಕಾಶವಿದೆ. ಯಾವುದು ತಪ್ಪು ಎಂಬುದನ್ನು ತಿಳಿಸಿ ಗೊಂದಲಗಳಿಗೆ ತೆರೆ ಎಳೆಯಬೇಕೇ ವಿನಃ ಅಪಪ್ರಚಾರ ಮಾಡಬಾರದು ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್‌ ಜೋಶಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ತೆರೆದಿರುವ ಸಾಹಿತ್ಯ ಸಮ್ಮೇಳನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕೆಲವರು ಅನಗತ್ಯಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಆದರೆ, ನನಗೆ ಯಾರ ಮೇಲೂ ದ್ವೇಷವಿಲ್ಲ. ಅಪಪ್ರಚಾರದಿಂದ ವಿವಾದಕ್ಕೆ ಏಕೆ ಸಿಲುಕಬೇಕೆಂದು ಸುಮ್ಮನಿದ್ದೇನೆ ಎಂದರು.

ಸಮ್ಮೇಳನ ನಡೆಯುವ ಸ್ಥಳ ಈಗಾಗಲೇ ನಿಗದಿಯಾಗಿದೆ. ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ವೇದಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಜಾಗದ ವಿಚಾರಕ್ಕೆ ಏನೇ ಗೊಂದಲಗಳಿದ್ದರೂ ಅವರ ಬಳಿ ಅಥವಾ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಅಂತಿಮಗೊಳಿಸಿಕೊಳ್ಳಬೇಕು. ಎಲ್ಲದ್ದಕ್ಕೂ ರಾಜ್ಯಾಧ್ಯಕ್ಷನಾದ ನನ್ನನ್ನೇ ಪ್ರಶ್ನಿಸುವುದು ಮತ್ತು ಗೊಂದಲಗಳನ್ನು ಮೂಡಿಸುವುದು ಸರಿಯಲ್ಲ ಎಂದರು.

ವಿಶ್ವದ ವಿವಿಧ ರಾಷ್ಟ್ರಗಳಲ್ಲಿರುವ ಎಲ್ಲ ಕನ್ನಡಿಗರನ್ನೂ ಒಟ್ಟುಗೂಡಿಸುವ ನಿಟ್ಟಿನಲ್ಲಿ ಅಮೆರಿಕಾದಲ್ಲಿ ನೆಲೆಸಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರ ಮೊಮ್ಮಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಿದ್ದೆ. ಆದರೆ, ಕೆಲವರು ದೇಶದಲ್ಲಿರುವವರನ್ನೇ ಕರೆಯುತ್ತಿಲ್ಲ. ದೂರದಲ್ಲಿರುವವರನ್ನು ಕರೆಯುತ್ತಿದ್ದಾರೆಂಬ ಕೊಂಕು ನುಡಿಗಳು ಬೇಸರ ಉಂಟುಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ದೇಶ-ವಿದೇಶದಲ್ಲಿರುವ ಕನ್ನಡಿಗರು ಬರದೇ ಇದ್ದರೆ ಅದಕ್ಕೆ ಸಾಹಿತ್ಯ ಪರಿಷತ್ ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕಸಾಪ ಸಂಚಾಲಕಿ ಮೀರಾ ಶಿವಲಿಂಗಯ್ಯ, ಪದಾಧಿಕಾರಿಗಳಾದ ಹುಸ್ಕೂರು ಕೃಷ್ಣೇಗೌಡ, ಹರ್ಷ ಪಣ್ಣೇದೊಡ್ಡಿ, ಅಪ್ಪಾಜಪ್ಪ ಗೋಷ್ಠಿಯಲ್ಲಿದ್ದರು.ನೀತಿ ಸಂಹಿತೆ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಅಡ್ಡಿ

ರಾಜ್ಯದ ಮೂರು ಕ್ಷೇತ್ರಗಳಲ್ಲಿ ವಿಧಾನ ಸಭಾ ಉಪ ಚುನಾವಣೆ ನಿಗಯಾಗಿದ್ದ ಕಾರಣ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಳಂಬವಾಗಿಯಿತೇ ಹೊರತು, ಬೇರೆ ಯಾವುದೇ ಕಾರಣ ಇಲ್ಲ ಎಂದು ಡಾ.ಮಹೇಶ್‌ಜೋಶಿ ಅವರು ಸ್ಪಷ್ಟಪಡಿಸಿದರು.

ಉಪ ಚುನಾವಣೆಗಳು ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಲಿಖಿತವಾಗಿ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ತಿಳಿಸಲಾಯಿತು. ಚುನಾವಣಾ ಆಯೋಗವೂ ಸಹ ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ಮುಂದೂಡುವಂತೆ ತಿಳಿಸಿದ್ದರಿಂದ ಅಧ್ಯಕ್ಷರ ಆಯ್ಕೆಯಲ್ಲಿ ವಿಳಂಬವಾಯಿತು. ಗುರುವಾರ ಚುನಾವಣಾ ಆಯೋಗವನ್ನು ಸಂಪರ್ಕಿಸಿ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲು ಕಾರ್ಯಕಾರಿ ಸಮಿತಿ ಸಭೆ ಕರೆದು ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

೨೫ ಕೋಟಿ ಮಂಜೂರು:

ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ೨೫ ಕೋಟಿ ರು. ಹಣ ಮಂಜೂರು ಮಾಡಿದೆ. ಆದರೆ, ಇನ್ನೂ ಸಹ ಹಣ ಬಿಡುಗಡೆಯಾಗಿಲ್ಲ. ಹಣಕಾಸು ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಣ ಮಂಜೂರಾಗಿದೆ ಎಂದು ತಿಳಿಸಿದೆ. ಇಂದು ಅಥವಾ ನಾಳೆ ಹಣ ಬಿಡುಗಡೆಯಾಗಲಿದೆ ಎಂದರು.ನಾವಾಡುವ ನುಡಿಯೇ ಕನ್ನಡ ನುಡಿ

೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ದೃಷ್ಟಿಯಿಂದ ದೂರದರ್ಶನದ ಸಹಭಾಗಿತ್ವದಲ್ಲಿ ‘ನಾವಾಡುವ ನುಡಿಯೇ ಕನ್ನಡ ನುಡಿ’ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಮಹೇಶ್ ಜೋಶಿ ತಿಳಿಸಿದರು.

ನ. ೨೪ರಂದು ಬೆಳಗ್ಗೆ ೯ ಗಂಟೆಯಿಂದ ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಧ್ವನಿಪರೀಕ್ಷೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲೂ ಸಹ ವೇದಿಕೆ ಹತ್ತದ, ಗುರುತಿಸಿಕೊಳ್ಳದ ಕಲಾವಿದರಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ಜೊತೆಗೆ ಹಳೇ ಕಲಾವಿದರಿಗೂ ಅವಕಾಶ ನೀಡಲಾಗುವುದು. ಡಿ. ೧ರಂದು ಆಯ್ಕೆಯಾದ ಕಲಾವಿದರಿಂದ ಕನ್ನಡ ನಾಡು, ನುಡಿ, ಕವಿ-ಸಾಹಿತಿಗಳು ಹಾಗೂ ಕನ್ನಡದ ಹಳೆಯ ಚಿತ್ರಗೀತೆಗಳನ್ನು ಹಾಡಿಸಲಾಗುವುದು ವಿವರಿಸಿದರು.