ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಈಗಾಗಲೇ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಈ ಬಾರಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದಾರೆ.

- ಎರಡು ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ । ಮತದಾರರು ನನ್ನನ್ನೇ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ

ಶಿವಕುಮಾರ ಕುಷ್ಟಗಿ

ಗದಗ

ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಈಗಾಗಲೇ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಈ ಬಾರಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ತಮ್ಮ ಬಿಡುವಿಲ್ಲದ ಪ್ರಚಾರದ ಮಧ್ಯೆ ಕನ್ನಡಪ್ರಭದೊಂದಿಗೆ ಮಾತನಾಡಿ ತಮ್ಮ ಮನದಾನಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

- ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪದವೀಧರರು, ಶಿಕ್ಷಕರು, ನೌಕರರು, ನಿವೃತ್ತ ನೌಕರರು, ವಕೀಲರು ಎಲ್ಲರೂ ನನಗೆ ಬೆಂಬಲಿಸುತ್ತಿದ್ದಾರೆ. ನಮ್ಮ ಪಕ್ಷದ ಹಿರಿಯರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಪದವೀಧರರ ಪ್ರತಿನಿಧಿಯಾಗಿ ಪರಿಷತ್ತಿನಲ್ಲಿ ಹೇಗೆ ಕೆಲಸ ಮಾಡಿದ್ದೇನೆ ಎಂಬುದನ್ನು ಯುವ ಸಮುದಾಯ ಗಮನಿಸಿದೆ. ಈ ಸಲವೂ ನನ್ನ ಗೆಲುವು ಖಚಿತ.

- ಪದವೀಧರರು ನಿಮಗೇ ಏಕೆ ಮತ ಹಾಕಬೇಕು?

ಕಳೆದ 12 ವರ್ಷಗಳಲ್ಲಿ ಪದವೀಧರರು, ಶಿಕ್ಷಕರು ಮತ್ತು ನೌಕರರ ಸಮಸ್ಯೆ ಬಂದಾಗಲೆಲ್ಲ ಅವರ ಪರವಾಗಿ ಧ್ವನಿ ಎತ್ತಿದ್ದೇನೆ. ನಿರುದ್ಯೋಗ, ಶಿಕ್ಷಕರ ನೇಮಕಾತಿ, ಶಿಕ್ಷಣ ಸಂಸ್ಥೆಗಳ ಸಮಸ್ಯೆ, ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಖಾಲಿ ಹುದ್ದೆಗಳು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಕ್ಷೇತ್ರದ ಜನರ ವಿಶ್ವಾಸವೇ ನನ್ನ ದೊಡ್ಡ ಶಕ್ತಿ. ಈ ಎಲ್ಲ ಕಾರಣದಿಂದ ನನಗೆ ಮತ ಹಾಕಬೇಕು; ಹಾಕಿ ಎಂದು ಕೇಳುತ್ತಿದ್ದೇನೆ. ಗೆಲ್ಲುತ್ತೇನೆ ಎಂಬ ವಿಶ್ವಾಸವೂ ಇದೆ.

- ಎರಡು ಅವಧಿಯಲ್ಲಿ ನೀವು ಮಾಡಿದ ಪ್ರಮುಖ ಕೆಲಸಗಳೇನು?

ಎರಡು ಅವಧಿಯಲ್ಲಿ ಮೂರು ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದೇನೆ, ಪದವೀಧರರ ಉದ್ಯೋಗ, ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ. ನಿರುದ್ಯೋಗದ ವಿಚಾರವನ್ನು ನಿರಂತರವಾಗಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿದ್ದೇನೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲು ಸರ್ಕಾರದ ಮೇಲೆ ಒತ್ತಡ ತಂದಿದ್ದೇನೆ. ಉದ್ಯೋಗ ಮೇಳಗಳನ್ನು ಆಯೋಜಿಸಿ ಯುವಕರಿಗೆ ನೇರವಾಗಿ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನ ಮಾಡಿದ್ದೇನೆ. ಶಿಕ್ಷಕರ ಸಮಸ್ಯೆಗಳು, ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರ ವಿವಿಧ ಬೇಡಿಕೆಗಳ ಬಗ್ಗೆಯೂ ಧ್ವನಿ ಎತ್ತಿದ್ದೇನೆ. ಇವೇ ನನಗೆ ಶ್ರೀರಕ್ಷೆ.

- ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಇದು ನಿಮ್ಮ ಗೆಲುವಿಗೆ ಅಡ್ಡಿಯಾಗಬಹುದಾ?

ಹಿಂದೆ ಕಾಂಗ್ರೆಸ್‌ ಸರ್ಕಾರವಿದ್ದಾಗಲೂ ಗೆದ್ದು ಬಂದಿದ್ದೇನೆ. ಅವರ ಶಾಸಕರ ಸಂಖ್ಯೆ ಜಾಸ್ತಿ ಇರಬಹುದು. ಆದರೆ ಆ ಸರ್ಕಾರದ ಬಗ್ಗೆ ಪದವೀಧರರಲ್ಲಿ ಅಸಮಧಾನವಿದೆ. ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಯಾಗುತ್ತಿಲ್ಲ. ಆದರೆ ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ, ಮುದ್ರಾ ಹಾಗೂ ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳ ಮೂಲಕ ಸ್ವಯಂ ಉದ್ಯೋಗ ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಈ ಕಾರಣದಿಂದ ಕಾಂಗ್ರೆಸ್‌ ಸರ್ಕಾರವಿದ್ದರೂ ನನ್ನ ಗೆಲವು ಕಟ್ಟಿಟ್ಟ ಬುತ್ತಿ.

- ನಿಮ್ಮ ಮುಂದಿನ ಕಾರ್ಯಯೋಜನೆಗಳೇನು?

ಪದವೀಧರರ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಸರ್ಕಾರದ ಮೇಲೆ ನಿರಂತರ ಒತ್ತಡ ತರುತ್ತೇನೆ. ಜಿಲ್ಲಾವಾರು ಉದ್ಯೋಗ ಮೇಳಗಳನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿಸುತ್ತೇನೆ. ಉದ್ಯೋಗ ಹಾಗೂ ಉದ್ಯಮಶೀಲತೆಯ ಅವಕಾಶಗಳ ಕುರಿತು ವಿಶೇಷ ಗಮನ ಹರಿಸುವುದು, ಶಿಕ್ಷಕರ ಸಮಸ್ಯೆ, ಶಿಕ್ಷಣ ಕ್ಷೇತ್ರದಲ್ಲಿ ಖಾಲಿ ಹುದ್ದೆ ಸೇರಿ ಪದವೀಧರರು ಸಂಬಂಧಿಸಿದ ವಿಚಾರಗಳನ್ನು ಸದನದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸುತ್ತೇನೆ.

- ನಿಮ್ಮ ಪ್ರಚಾರದ ವಿಶೇಷತೆ ಏನು?

ನಮ್ಮ ಪ್ರಚಾರದಲ್ಲಿ 2 ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ನೇರ ಸಂಪರ್ಕ ಮತ್ತು ಮಾಡಿದ ಕೆಲಸಗಳ ಪರಿಚಯ. ಪದವೀಧರರನ್ನು ಮನೆ ಮನೆಗೆ ಭೇಟಿ ಮಾಡುವುದರ ಜತೆಗೆ ವಕೀಲರ ಸಂಘ, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ವಲಯಗಳ ಪದವೀಧರ ಮತದಾರರನ್ನು ಭೇಟಿ ಮಾಡಲಾಗುತ್ತಿದೆ. ಬಿಜೆಪಿ ಜತೆಗೆ ಜೆಡಿಎಸ್‌ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಸಹ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಪ್ರಚಾರಕ್ಕೆ ಮತ್ತಷ್ಟು ಬಲ ನೀಡಿದೆ.

- ಮತದಾರರಿಗೆ ನಿಮ್ಮ ಸಂದೇಶವೇನು?

ನನ್ನ ಎರಡು ಅವಧಿಯ ಸೇವೆ, ಅನುಭವ ಮತ್ತು ಮುಂದಿನ ಕಾರ್ಯಯೋಜನೆಗಳನ್ನು ಗಮನಿಸಿ ಮತ್ತೊಮ್ಮೆ ನನಗೆ ಅವಕಾಶ ನೀಡಬೇಕು. ಪದವೀಧರರ ಧ್ವನಿಯಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ ತೋರಿಸುತ್ತೇನೆ.