ನಿಮ್ಮ ಉತ್ಸಾಹದಲ್ಲಿ ನನ್ನ ಗೆಲವು ಕಾಣ್ತಿದೆ: ಮಂಜುನಾಥ್‌

| Published : Mar 24 2024, 01:33 AM IST

ನಿಮ್ಮ ಉತ್ಸಾಹದಲ್ಲಿ ನನ್ನ ಗೆಲವು ಕಾಣ್ತಿದೆ: ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾನು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಾಗ ಚಿಕಿತ್ಸೆ ಮೊದಲು ಹಣ ಪಾವತಿ ನಂತರ, ಕಡತಕ್ಕಿಂತ ಪ್ರಾಣವೇ ಮುಖ್ಯ, ಮಾನವೀಯತೆಗೆ ಮೊದಲ ಆದ್ಯತೆ ಎಂಬ ಸಿದ್ಧಾಂತದಡಿ ಸೇವೆ ಸಲ್ಲಿಸಿದೆ. ಈಗ ರಾಜಕಾರಣಕ್ಕೆ ಬಂದ ಮೇಲೆ ಮತದಾನ ಮೊದಲು, ಸೇವೆ ನಿರಂತರ ಎಂಬ ತತ್ವದಡಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನಾನು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಾಗ ಚಿಕಿತ್ಸೆ ಮೊದಲು ಹಣ ಪಾವತಿ ನಂತರ, ಕಡತಕ್ಕಿಂತ ಪ್ರಾಣವೇ ಮುಖ್ಯ, ಮಾನವೀಯತೆಗೆ ಮೊದಲ ಆದ್ಯತೆ ಎಂಬ ಸಿದ್ಧಾಂತದಡಿ ಸೇವೆ ಸಲ್ಲಿಸಿದೆ. ಈಗ ರಾಜಕಾರಣಕ್ಕೆ ಬಂದ ಮೇಲೆ ಮತದಾನ ಮೊದಲು, ಸೇವೆ ನಿರಂತರ ಎಂಬ ತತ್ವದಡಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಹೇಳಿದರು.

ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಕೂಟಗಲ್ ಹೋಬಳಿಯ ಜೆಡಿಎಸ್ ಬಿಜೆಪಿ ಮುಖಂಡರು ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅಂಗಾಂಗದಾನ, ನೇತ್ರದಾನವನ್ನು ನೆನೆಯುತ್ತೇವೆ. ಅದೇ ರೀತಿ ಮತದಾನವೂ ತುಂಬಾ ಪವಿತ್ರವಾದದ್ದು. ಮತಗಳು ಮಾರಾಟದ ವಸ್ತು ಆಗಬಾರದು. ಮತಗಳು ಮಾರಾಟವಾದರೆ ಪ್ರಜಾಪ್ರಭುತ್ವ ಕಗ್ಗೋಲೆ ಆದಂತೆ. ತಮ್ಮ ಅಮೂಲ್ಯವಾದ ಮತದಾನವನ್ನು ನನಗೆ ನೀಡಿದರೆ ದೇಶದ ಸುಭದ್ರತೆ, ಸಮಗ್ರತೆಗೆ ನಂದಾದೀಪ ಆಗುತ್ತದೆ ಎಂದರು.

ನಾನು ರಾಜಕೀಯಕ್ಕೆ ಬರುತ್ತೇನೆಂದು ಕನಸಲ್ಲು ಅಂದುಕೊಂಡಿರಲಿಲ್ಲ. ರಾಜಕೀಯದ ನಡುವೆ ಇದ್ದರೂ ನಾವು ಯಾರ ಜೊತೆ ಒಡನಾಟ ಇಟ್ಟುಕೊಳ್ಳುತ್ತೇವೆಯೊ ಅದರ ನೇರ ಪರಿಣಾಮ ನಮ್ಮ ಮೇಲೆ ಬೀರುತ್ತದೆ. ಅದು ನನ್ನ ವಿಚಾರದಲ್ಲಿಯೂ ಆಗಿದೆ ಎಂದು ರಾಜಕೀಯ ಪ್ರವೇಶದ ಅನಿವಾರ್ಯತೆಯನ್ನು ತಿಳಿಸಿದರು.

ನಾವು ಕಲಿತ ಶಿಕ್ಷಣ ಎಷ್ಟು ಸಂಸ್ಕಾರ ಕಲಿಸಿದೆ, ಎಷ್ಟು ಜನರ ಮುಖದಲ್ಲಿ ನಗು ತರಿಸಿದೆ, ಎಷ್ಟು ಜನರ ಮನೆಯಲ್ಲಿ ಬೆಳಕು ಚೆಲ್ಲಿದೆ ಎಂಬುದು ಮುಖ್ಯವಾಗುತ್ತದೆ. ಯಾವ ಪ್ರತಿಫಲವನ್ನು ಬಯಸದೆ ನಾವು ಮಾಡುವ ಸಹಾಯವೇ ನಿಜವಾದ ಸಮಾಜ ಸೇವೆ ಆಗಿದೆ. ದ್ವೇಷ ಮತ್ಸರ ಕಳೆದು ಪ್ರೀತಿ ಹಂಚಬೇಕು. ಆರೋಗ್ಯಕರ ಚುನಾವಣೆ ನಡೆಯಬೇಕು ಎಂದು ಮಂಜುನಾಥ್ ಹೇಳಿದರು.

ಬಡವರ ಕಣ್ಣೀರು, ರೈತರ ಬೆವರಿಗೆ ಬಹಳ ಬೆಲೆ ಇದೆ. ನಾವು ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಕಣ್ಣೀರು ಬರೆಸುವ ಕೆಲಸ ಮಾಡಬಾರದು. ಬಡತನ ಮನಸ್ಸಿಗೆ ಇರಬಾರದು, ದೇಹಕ್ಕೆ ಇರಬೇಕು. ಮನಸ್ಸು ನಿರ್ಮಲವಾಗಿದ್ದರೆ ಅದು ಸಾಕ್ಷತ್ಕಾರ, ಮಾತು ಮಧುರವಾಗಿದ್ದರೆ ಅದು ಚಮತ್ಕಾರ, ನಡೆನುಡಿ ಚೆನ್ನಾಗಿದ್ದರೆ ಪುರಸ್ಕಾರ, ನಿಮ್ಮ ಅಭಿಮಾನ, ಸರಳತೆಗೆ ಅದಕ್ಕೊಂದು ನನ್ನ ನಮಸ್ಕಾರ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದರು.

ನಿಮ್ಮೆಲ್ಲರ ಉತ್ಸವ ನೋಡಿದರೆ ನನ್ನ ಗೆಲುವು ನಿಶ್ಚಿತವಾಗಿದೆ. ಮೊದಲು ಇದು ಜೆಡಿಎಸ್ ಭದ್ರಕೋಟೆಯಾಗಿತ್ತು, ಈಗ ಬಿಜೆಪಿ ಕೈ ಜೋಡಿಸಿರುವುದರಿಂದ ಸುಭದ್ರ ಕೋಟೆಯಾಗಿದೆ. ಪ್ರಮುಖ ಮುಖಂಡರ ಸಭೆಯಲ್ಲಿನ ವಿಚಾರಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಮಂಜುನಾಥ್ ತಿಳಿಸಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಡಿಕೆ ಸಹೋದರರು ಜೆಡಿಎಸ್ - ಬಿಜೆಪಿ ಕಾರ್ಯಕರ್ತರಿಗೆ ಆಮಿಷವೊಡ್ಡಿ ವಿಫರಾಗುತ್ತಿರುವ ದೊಡ್ಡ ಪಟ್ಟಿಯೇ ಇದೆ. ಮೂರು ಬಾರಿ ಸಂಸದರಾಗಿರುವ ನೀವು ಕನಕಪುರ ಹೊರತು ಪಡಿಸಿ ಉಳಿದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಕೆಲಸ ಮಾಡಿದ್ದರೆ ಏಕೆ ಆಮಿಷ ಒಡ್ಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಈ ಕ್ಷೇತ್ರಕ್ಕೆ ಇಎಸ್ ಐ ಆಸ್ಪತ್ರೆ, ಹೊಸ ರೈಲು, ರೈಲು ಅಂಡರ್ ಪಾಸ್, ಮೇಲ್ಸೋತುವೆ ಯಾವುದಾದರು ಮಾಡಿದ್ದೀರಾ. ದೆಹಲಿ ಬಿಟ್ಟು ಗ್ರಾಮ ಪಂಚಾಯಿತಿಯಲ್ಲಿ ಕುಳಿತರೆ ಯಾವ ಕೆಲಸವೂ ಆಗುವುದಿಲ್ಲ. ದೆಹಲಿಯಲ್ಲಿ ಕುಳಿತು ಆರೋಗ್ಯ, ಶಿಕ್ಷಣ ಕ್ಕಾಗಿ ಹೋರಾಟ ಮಾಡಬೇಕಿತ್ತು. ಆದರೆ, ನೀವು ಹಗಲು ದರೋಡೆ ಮಾಡುತ್ತೀದಿರಿ. ನಿಮ್ಮ ಸ್ವಾರ್ಥ ಕ್ಕಾಗಿ ಜಿಲ್ಲೆ ಜನರು ಬಲಿ ಆಗುತ್ತಿದ್ದಾರೆ. ಈ ಜನರನ್ನು ಕಾಪಾಡಲು ಸಾಕ್ಷಾತ್ ಮಂಜುನಾಥ ಸ್ವಾಮಿ ಧರೆಗೆ ಇಳಿದು ಬಂದಿದ್ದಾರೆ. ವೈದ್ಯರು ಸೋತರೆ ಅವರಿಗೇನು ನಷ್ಟವಾಗಲ್ಲ. ನಮಗೆ ನಷ್ಟವಾಗುತ್ತದೆ. ಅವರ ಗೆಲುವಿನ ಲಾಭ ದೇಶಕ್ಕೆ ಸಿಗುತ್ತದೆ. ಮೂರು ಬಾರಿ ಸಂಸದರಾಗಿ ಏನು ಮಾಡದವರು ನಾಲ್ಕನೇ ಬಾರಿ ಗೆದ್ದು ಏನು ಮಾಡುತ್ತಾರೆ ಎಂದು ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ , ಮುಖಂಡರಾದ ಸುಬ್ಬಾಶಾಸ್ತ್ರಿ, ಗೌತಮ್ ಗೌಡ, ಪ್ರಸಾದ್ ಗೌಡ, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.ಬಿಜೆಪಿ-ಜೆಡಿಎಸ್‌ ಸಹೋದರರಿದ್ದಂತೆ: ಸಿಪಿವೈದೇಶದ ಹಿತದೃಷ್ಟಿಯಿಂದ ಮೋದಿರವರು ಮತ್ತೊಮ್ಮೆ ಪ್ರಧಾನಿ ಅಗಬೇಕೆಂಬ ಉದ್ದೇಶದಿಂದ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಕನಿಷ್ಠ 25 ಸ್ಥಾನಗಳಲ್ಲಿ ಎನ್ ಡಿಎ ಮೈತ್ರಿಕೂಟ ಗೆಲವು ಸಾಧಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ರಾಮಕೃಷ್ಣಹೆಗಡೆ, ಬೊಮ್ಮಾಯಿ, ಜೆ.ಎಚ್.ಪಟೇಲ್ ಅವರೊಂದಿಗೆ ಸೇರಿ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ಜನತಾ ಪರಿವಾರ ಕಟ್ಟಿದರು. ಕಾಲ ಕ್ರಮೇಣ ಜನತಾದಳ ಇಬ್ಬಾಗವಾಗಿ ಜೆಡಿಎಸ್ ಅಸ್ತಿತ್ವಕ್ಕೆ ಬಂದಿತು. ಮೊದಲಿನಿಂದಲೂ ಜೆಡಿಎಸ್ - ಬಿಜೆಪಿ ಪಕ್ಷಗಳು ಕಾಂಗ್ರೆಸ್ ವಿಚಾರಧಾರೆ ವಿರೋಧಿಸಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದೇವೆ. ಎರಡೂ ಪಕ್ಷಗಳು ಸಹೋದರರು ಇದ್ದಂತೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಕೆದಾಟು ನಿರ್ಮಾಣ ಮಾಡುತ್ತೇವೆಂದು ಪಾದಯಾತ್ರೆ ಮಾಡಿ ಜನರನ್ನು ನಂಬಿಸಿದರು. ಈಗ ಕಾಂಗ್ರೆಸ್ ನ ಪಾಟ್ನರ್ಸ್ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಯಾವ ಕಾರಣಕ್ಕೂ ಮೇಕೆದಾಟು ನಿರ್ಮಾಣವಾಗಲು ಬಿಡುವುದಿಲ್ಲ ಎಂದಿದ್ದಾರೆ. ಇದು ಕಾಂಗ್ರೆಸ್ ನ ದ್ವಿಮುಖ ನೀತಿ ತೋರಿಸುತ್ತಿದೆ ಎಂದು ಟೀಕಿಸಿದರು.

ಡಿ.ಕೆ.ಸುರೇಶ್ ಪಟಾಲಂ ಕೆಲಸ ಕಾರ್ಯ ಬಿಟ್ಟು ಕುಕ್ಕರ್, ಸೀರೆಗಳಂತಹ ಆಸೆ ಆಮಿಷದ ಮೇಲೆ ವೋಟು ಕೇಳುತ್ತಿದ್ದಾರೆ. ಡಿಕೆ ಸಹೋದರರು ದೌರ್ಜನ್ಯ ಮಾಡಿಯಾದರು ಪಾರದರ್ಶಕವಾಗಿ ಚುನಾವಣೆ ಮಾಡಲು ಬಿಡುವುದಿಲ್ಲ. ಜೆಡಿಎಸ್ - ಬಿಜೆಪಿ ಮೈತ್ರಿ ಸಹೋದರರಲ್ಲಿ ನಡುಕ ಸೃಷ್ಟಿಸಿದೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಡಾ.ಸಿ.ಎನ್ .ಮಂಜುನಾಥ್ ಮೈತ್ರಿ ಅಭ್ಯರ್ಥಿಯಾಗಿರುವ ಕಾರಣ 8 ಕ್ಷೇತ್ರದಲ್ಲು ಪಕ್ಷತೀತ ವಾತಾವರಣ ಇದೆ. ಕೇಂದ್ರದಲ್ಲಿ ಮಂತ್ರಿಯಾದರೆ ದೇಶದ ಆರೋಗ್ಯ ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಯೋಗೇಶ್ವರ್ ಹೇಳಿದರು.