ಸಾರಾಂಶ
ಮುಂಡಗೋಡದ ಶಿವಾಜಿ ಸರ್ಕಲ್‌ನಿಂದ ಹೊರಟ ಮೊಂಬತ್ತಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ತಾಲೂಕು ಪಂಚಾಯಿತಿ ಕಾರ್ಯಾಲಯದವರೆಗೆ ತೆರಳಿ ಜಾಗೃತಿ ಜಾಥಾಗೆ ತೆರೆ ಎಳೆಯಲಾಯಿತು.
ಮುಂಡಗೋಡ: ತಾಲೂಕು ಸ್ವೀಪ್ ಸಮಿತಿ ಆಶ್ರಯದಲ್ಲಿ ಪಟ್ಟಣದಲ್ಲಿ ಮೇಣದ ಬತ್ತಿ ಜಾಥಾ ಮೆರವಣಿಗೆ ನಡೆಸುವ ಮೂಲಕ ಲೋಕಸಭಾ ಚುನಾವಣೆ ೨೦೨೪ರ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ಶಿವಾಜಿ ಸರ್ಕಲ್‌ನಿಂದ ಹೊರಟ ಮೊಂಬತ್ತಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ತಾಲೂಕು ಪಂಚಾಯಿತಿ ಕಾರ್ಯಾಲಯದವರೆಗೆ ತೆರಳಿ ಜಾಗೃತಿ ಜಾಥಾಗೆ ತೆರೆ ಎಳೆಯಲಾಯಿತು.ತಹಸೀಲ್ದಾರ್ ಶಂಕರ ಗೌಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ನಾವೆಲ್ಲರೂ ನಮ್ಮ ಮತದಾನ ಶ್ರೇಷ್ಠ ಅಧಿಕಾರವನ್ನು ಚಲಾಯಿಸಲು ಒಂದು ಅತ್ಯುತ್ತಮ ಅವಕಾಶ ಎಂದರು.
ನನ್ನ ಮತ ನನ್ನ ಹಕ್ಕು ಎಂಬ ಸಿದ್ಧಾಂತವನ್ನು ಎಲ್ಲರೂ ಪಾಲಿಸಬೇಕು ಎಂದರು.ತಾಪಂ ಇಒ ಟಿ.ವೈ. ದಾಸನಕೊಪ್ಪ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಿನ ಮತದಾನವಾಗಬೇಕು ಎಂಬ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಜಾಗ್ರತೆ ಮೂಡಿಸಿದ್ದೇವೆ ಎಂದರು. ಇದೇ ರೀತಿ ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ಮೇ ೭ರ ತನಕ ಹಮ್ಮಿಕೊಳ್ಳತ್ತೇವೆ ಎಂದರು.
ಬಿಇಒ ಜಕಣಾಚಾರಿ ಸ್ವಾಗತಿಸಿದರು. ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಪಪಂ ಸಮುದಾಯ ಸಂಘಟನಾಧಿಕಾರಿ ಕುಮಾರ ನಾಯ್ಕ, ತಾಲೂಕು ಚುನಾವಣಾ ರಾಯಭಾರಿ ಬಿನ್ನಿ ಜೋಸೆಫ್, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಸನ್‌ಸಿಂಗ ಹಜೇರಿ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಸ್ವೀಪ್ ಅಧಿಕಾರಿ ಅಲಿಅಹ್ಮದ ಗೋಕಾವಿ, ಸಮಾಜಕಲ್ಯಾಣ ಅಧಿಕಾರಿ ಬಿ.ಎಸ್. ಸಿದ್ದಯ್ಯನವರ, ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ್ ಪಟ್ಟಣಶೆಟ್ಟಿ, ಲೊಯೋಲಾ ವಿಕಾಸ ಸಂಸಥೆ ನಿರ್ದೇಶಕ ಅನಿಲ ಡಿಸೋಜಾ, ಪ್ರೌಢಶಾಲೆಯ ಶಿಕ್ಷಣ ಸಂಯೋಜಕ ಪಾಂಡುರಂಗ ಟಿಕ್ಕೋಜಿ, ತಹಸೀಲ್ದಾರ್ ಕಚೇರಿಯ ಪ್ರಶಾಂತ ಹೊಸಮನಿ, ಜ್ಯೋತಿ ಆರೋಗ್ಯ ಕೇಂದ್ರದ ಆಯರೀನ ಡಿಸೋಜಾ ಸೇರಿದಂತೆ ಮುಂತಾದವರು ಇದ್ದರು.