ರೈತರಿಗೆ ಮಣಿದ ಮೈಲಾರ ಸಕ್ಕರೆ ಕಾರ್ಖಾನೆ

| Published : Nov 09 2025, 03:15 AM IST

ಸಾರಾಂಶ

ಕಬ್ಬಿನ ದರ ನಿಗದಿ ಹೋರಾಟ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಖಾಂತ್ಯ ಕಂಡಿದೆ.

ಹೂವಿನಹಡಗಲಿ: ಕಳೆದ ಎರಡು ದಿನಗಳಿಂದ ಕಬ್ಬಿನ ದರ ನಿಗದಿಗಾಗಿ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹದಿಂದ ರೈತರಿಗೆ ಪ್ರತಿ ಟನ್‌ಗೆ ₹2770 ದರ ನಿಗದಿಯಿಂದ ರೈತರು ತುಸು ನೆಮ್ಮದಿಯಾಗಿ ಧರಣಿಯನ್ನು ಹಿಂಪಡೆದಿದ್ದಾರೆ.

ಹೌದು, ತಾಲೂಕಿನ ಬೀರಬ್ಬಿ ಬಳಿಯ ಮೈಲಾರ ಸಕ್ಕರೆ ಕಾರ್ಖಾನೆಯ ಮುಂದೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಕಬ್ಬಿನ ದರ ನಿಗದಿ ಹೋರಾಟ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಖಾಂತ್ಯ ಕಂಡಿದೆ.

ಬೆಳಗಿನಿಂದ ರೈತರ ಬೇಡಿಕೆಗೆ ತಕ್ಕಂತೆ ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್‌ ಜಿ.ಸಂತೋಷಕುಮಾರ, ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ ಮೂರು ಬಾರಿ ಕಾರ್ಖಾನೆ ಮಾಲಕರೊಂದಿಗೆ ಸಂಧಾನ ಸಭೆ ವಿಫಲವಾಗಿತ್ತು. ಕೊನೆಗೆ ರೈತರು ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಬಂದ್‌ ಮಾಡುತ್ತೇವೆ, ಸೋಮವಾರ ಹೂವಿನಹಡಗಲಿ ಪಟ್ಟಣ ಬಂದ್‌ ಕರೆ ನೀಡುತ್ತೇವೆಂದು ಎಚ್ಚರಿಕೆ ನೀಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಕಾರ್ಖಾನೆ ಮಾಲಿಕರು ಕೊನೆ ತೀರ್ಮಾನಕ್ಕೆ ಬಂದರು.

ಕಾರ್ಖಾನೆ ಮಾಲಕರ ಪರ ಟಿ.ರಾಘವೇಂದ್ರ ಮಾತನಾಡಿ, ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆ ನೀಡುವ ದರಕ್ಕಿಂತ ಹೆಚ್ಚಿನ ಬೆಲೆಯನ್ನು ರೈತರಿಗೆ ನೀಡುತ್ತಿದ್ದೇವೆ ಎಂದು ಹೇಳಿದಾಗ, ಅದು ಯಾವ ರೀತಿ ಹೆಚ್ಚಿನ ಬೆಲೆ ನೀಡುತ್ತಿದ್ದೀರಿ. ಅದರಿಂದ ಎಷ್ಟು ಮಂದಿ ರೈತರಿಗೆ ಲಾಭವಾಗಿ ಎಂದು ತೋರಿಸಿ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಹರಪನಹಳ್ಳಿ ಎಸಿ ಚಿದಾನಂದ ಗುರುಸ್ವಾಮಿ ಮಾತಮಾಡಿ, ಸರ್ಕಾರದ ಆದೇಶದಂತೆ 9.5 ರಿಕವರಿ ಎಫ್‌ಆರ್‌ಪಿ ಬೆಲೆ ₹3290 ಇದೆ. ಇದರಲ್ಲಿ ಸಾಗಣೆ ಮತ್ತು ಕಬ್ಬು ಕಟಾವು ಸೇರಿದೆ. ಇದಕ್ಕೆ ಒಪ್ಪದ ರೈತರು ₹2762 ನೀಡುತ್ತೇವೆಂದು ಕಾರ್ಖಾನೆ ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ, ಧರಣಿ ಕೈ ಬಿಟ್ಟು ಕಾರ್ಖಾನೆ ಆರಂಭಕ್ಕೆ ಅವಕಾಶ ನೀಡಬೇಕೆಂದು ಹೇಳಿದರು.

ಇದಕ್ಕೆ ರೈತರು ಒಪ್ಪಿಗೆ ಸೂಚಿಸದೇ ರೈತ ಮುಖಂಡ ಅಶೋಕ ಬಳಗಾನೂರು ಸರ್ಕಾರದ ನಿರ್ದೇಶನದಂತೆ 9.5 ರಿಕವರಿ ಕಬ್ಬಿಗೆ ₹2965 ದರ ಕೊಡಿ ಎಂದು ಪಟ್ಟು ಹಿಡಿದರು.

ಕಾರ್ಖಾನೆಯ ರಾಘವೇಂದ್ರ ಸಿಟ್ಟಿಗೆದ್ದು, ಕಾರ್ಖಾನೆಗೆಯ ಗೇಟ್‌ ಬೀಗ ಹಾಕಿ ನಿಮ್ಮ ಕೈಗೆ ಕೊಡುತ್ತೇವೆ. ನೀವು ಕಬ್ಬು ಅರೆಯಿರಿ, ಅದರ ಸಾಧಕ, ಬಾಧಕ ನಿಮ್ಮಗೆ ಅರ್ಥವಾಗುತ್ತದೆ, ನಮಗೆ ಬೆಳಗಾವಿ ಸುದ್ದಿ ಹೇಳಬೇಡಿ. ನಮ್ಮ ಕಾರ್ಖಾನೆ ಸುದ್ದಿ ಮಾತನಾಡಿ ಎಂದು ರೈತರಿಗೆ ಹೇಳಿದರು.

ಸರ್ಕಾರದ ಆದೇಶದಂತೆ ದರ ನಿಗದಿ ಮಾಡಿ ಅಧಿಕಾರಿಗಳು ನೀವು ಕಾರ್ಖಾನೆಯ ಕೈಗೊಂಬೆಗಳಾಗಿದ್ದೀರಾ, ರೈತರ ಪರವಾಗಿ ಕೆಲಸ ಮಾಡಿ ರೈತರು ದಡ್ಡರಲ್ಲ, ಪ್ರತಿಭಟನೆ ವಿಕೋಪಕ್ಕೆ ಹೋಗುವ ಮೊದಲೇ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ರಾಜ್ಯ ಹೆದ್ದಾರಿ ಬಂದ್‌ ಮಾಡುವ ಎಚ್ಚರಿಕೆ ನೀಡಿದರು.

ರೈತರ ಹಿತ ಕಾಪಾಡಲು ನಾವು ಪ್ರತಿ ಟನ್‌ ಕಬ್ಬಿಗೆ ₹2763 ನೀಡುತ್ತೇವೆಂದು ಕಾರ್ಖಾನೆ ಪರವಾಗಿ ರಾಘವೇಂದ್ರ ಹೇಳುತ್ತಾ, ಕಬ್ಬಿ ಕಟಾವು ಮಾಡಲು 600 ಕಾರ್ಮಿಕರ ಬ್ಯಾಚ್‌ ತಂದಿದ್ದೇವೆ. ಧರಣಿ ಹೀಗೆ ಮುಂದುವರೆದರೆ ಕಾರ್ಮಿಕರನ್ನು ಕಟಾವಿಗೆ ತರಲು ಅಸಾಧ್ಯ, ನೀವೇ ಯೋಚಿಸಿ, ಅದಕ್ಕೆ ನಾವು ಜವಾಬ್ದಾರಲ್ಲ ಎಂದು ರೈತರಿಗೆ ಕಬ್ಬು ಕಟಾವಿನ ಬೆದರಿಕೆ ಹಾಕಿದರು.

ಇದಕ್ಕೆ ಜಗ್ಗದ ರೈತರು, ಬೆಳೆದ ಕಬ್ಬನ್ನು ನಿಮ್ಮ ಕಾರ್ಖಾನೆಗೆ ಕಳಿಸಬೇಕೆಂಬ ನಿಯಮವಿಲ್ಲ. ದರ ಹೆಚ್ಚು ಇರುವ ಕಡೆಗೆ ಕಳಿಸುತ್ತೇವೆ ಎಂದು ರೈತರು ಹೇಳಿದಾಗ, ನಮ್ಮ ಕಾರ್ಖಾನೆಗೆ ಕಬ್ಬು ಕೊಟ್ಟರೂ ಅಷ್ಟೇ ಬಿಟ್ಟರೂ ಅಷ್ಟೇ ನೀವು ನಮಗೆ ಟಾರ್ಗೆಗ್‌ ಮಾಡುತ್ತೀರಿ, ಏನು ಬೇಕಾದರೂ ಆಗಲಿ ಎಂದು ಕಾರ್ಖಾನೆಯ ರಾಘವೇಂದ್ರ ರೈತರಿಗೆ ಹೇಳಿದರು.

ಕೊನೆಗೆ ರೈತರು ₹2812 ದರ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ಕಾರ್ಖಾನೆಗೆ ಮಾಲಕರು, ಅಧಿಕಾರಿಗಳ ಜತೆಗೆ ಗೂಡಿ ಕೊನೆಗೆ ಒಂದು ಸಂಧಾನಕ್ಕೆ ಬಂದು ₹2770 ದರ ನಿಗದಿ ಮಾಡಲಾಗಿದೆ. ಇದು ಕಟಾವು ಹಾಗೂ ಸಾಗಣೆ ವೆಚ್ಚ ಹೊರತು ಪಡಿಸಿದ ದರವಾಗಿದೆ ಎಂದು ಸಹಾಯಕ ಆಯುಕ್ತ ಚಿದಾನಂಗ ಗುರುಸ್ವಾಮಿ ಹೇಳಿದಾಗ, ರೈತರು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು, ಧರಣಿಯಿಂದ ಹಿಂದೆ ಸರಿದರು.

ಪ್ರತಿಭಟನೆಯಲ್ಲಿ ಕೋಡಬಾಳ ಹನುಮಂತಪ್ಪ, ಕೋಡಬಾಳ ಚಂದ್ರಪ್ಪ, ಹರವಿ ಪ್ರಕಾಶ, ಅಶೋಕ ಬಳಗಾನೂರು, ಎಚ್.ಮಂಜುನಾಥ, ವೀರಣ್ಣ, ಹುಳ್ಳಿ ನಾಗರಾಜ, ನಿಂಗಪ್ಪ, ಜಾಹೀರ್‌ ಬಾಷ, ಪ್ರವೀಣ ಡಂಬಳ, ದಿನಕರ್‌, ಗಂಗಪ್ಪ, ಗೋಣೇಗೌಡ, ಪ್ರಕಾಶ, ಚಂದ್ರಪ್ಪ, ಎಚ್‌.ಡಿ.ಜಗ್ಗೀನ್‌, ಹಾವೇರಿ ಬಸವರಾಜ, ಪ್ರಭಣ್ಣ, ಶಿವಣ್ಣ, ಪುನೀತ್‌, ಹಾಲೇಶ ಬೆನ್ನೂರು, ಮಲ್ಲಿಕಾರ್ಜುನ ಗೌಡ, ಬಿ.ಎಂ. ಮಹೇಶ್ವರ ಸ್ವಾಮಿ, ಜಯಣ್ಣ ಗದ್ದಿಗೌಡರ್‌, ಶಿವಣ್ಣ, ಎಂ.ಬಸವರಾಜ ಸೇರಿದಂತೆ 200ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿದ್ದರು.