ಸಾರಾಂಶ
ಕನ್ನಡಪ್ರಭವಾರ್ತೆ ಬೀರೂರು
ಒಲಿದರೆ ಹೊನ್ನು ಎನ್ನುವ ಗಾದೆ ಮಾತಿನಂತೆ ಶ್ರೀ ಮೈಲಾರಲಿಂಗೇಶ್ವರ ಮಹಾಸ್ವಾಮಿಯು ನೀಡಿದ ಅಭಯದಿಂದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸ್ವಾಮಿಯ ಆಶೀರ್ವಾದ ಸಹಕಾರಿಯಾಯಿತು ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಹೇಳಿದರು.ಮಂಗಳವಾರ ಮದ್ಯಾಹ್ನ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಕಾರ್ಣೀಕದೊಡೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಅಂಗವಾಗಿ ಪೂಜೆ ಸಲ್ಲಿಸಿ ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಸರಸ್ವತಿಪುರಂ ಬಡಾವಣೆಗೆ ರಾತ್ರಿ 11.45ರ ಸುಮಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪವಾಡದ ಬಗ್ಗೆ ತಿಳಿಸಿದ ಹಿನ್ನಲೆ ಅಂದು ಚುನಾವಣೆಯಲ್ಲಿ ಹಲವು ಬಾರಿ ಸೋತು ಕುಗ್ಗಿದ ನನಗೆ ಇದೊಂದು ಬಾರಿ ಕೈಹಿಡಿದು ಅವಕಾಶ ಮಾಡಿಕೊಡು ಎಂದು ಬೇಡಿದ ಸಂದರ್ಭದಲ್ಲಿ ಸ್ವಾಮಿಯು ಮದ್ಯರಾತ್ರಿಯ ಸಂದರ್ಭದಲ್ಲೂ ಕೂಡ ಬಲಗಡೆ ಅಪ್ಪಣೆ ನೀಡಿ ಆಶೀರ್ವಾದ ಮಾಡಿದ್ದು ಇನ್ನು ಮರೆಯಲಾಗದ್ದು, ಆ ಸಮಯದಿಂದ ನನ್ನ ಕುಗ್ಗಿದ್ದ ಮನಸ್ಸು ಚೇತರಿಸಿಕೊಂಡು ಗೆಲ್ಲುವ ಉತ್ಸಾಹಕ್ಕೆ ಪುಷ್ಠಿ ನೀಡಿತ್ತು ಎಂದು ಹೇಳಿದರು.ಚುನಾವಣೆಯಲ್ಲಿ ಸ್ವಾಮಿಯ ಆಶೀರ್ವಾದದ ಫಲವಾಗಿ ಕಡೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಗಳಿಸಿ ಜಯಶೀಲನಾದೆ. ತದನಂತರದ ವಿಜಯೋತ್ಸವ, ಸಂಸತ್ ಕಲಾಪದಲ್ಲಿ ಭಾಗಿ, ಹೀಗೆ ಹಲವಾರು ಒತ್ತಡದ ಕಾರ್ಯಕ್ರಮಗಳಲ್ಲಿ ತಲ್ಲೀನನಾಗಿ ಸ್ವಾಮಿದರ್ಶನಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇಂದು ಶ್ರೀಸ್ವಾಮಿಯೇ ಕಡೂರು ಕ್ಷೇತ್ರದ ಮೊದಲ ಭೇಟಿಗೆ ಅವಕಾಶ ನೀಡಿ ಮುಂದುವರೆಸಿ ವಿವಿಧ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾನೆ ಎಂದರು.
ನಂತರ ದೇವಾಲಯದ ಪರವಾಗಿ ಮಾತನಾಡಿದ ಬಿ.ಟಿ.ಚಂದ್ರಶೇಖರ್, ದಸರಾ ಹಬ್ಬ ಬಹಳ ಹತ್ತಿರವಿದೆ. ಸ್ವಾಮಿಯ ಕಾರ್ಣಿಕಕ್ಕೆ ಕರೆದೊಯ್ಯುವ ಮುಂಚೆ ಪಾದದಕೆರೆ ಬಳಿ ಕೆರೆದೊಯ್ದು ಅಲ್ಲಿ ಪೂಜೆ ಸಲ್ಲಿಸಿ ಕರೆತರಬೇಕು. ಮಳೆ ಹೆಚ್ಚಾದ ಕಾರಣ ಗಾಳಿಹಳ್ಳಿ ಕೆರೆ ಕೋಡಿ ಬಿದ್ದಿದ್ದು ಒಂದೆಡೆಯಾದರೆ, ಸ್ವಾಮಿಯನ್ನು ಹೊತ್ತು ಭಕ್ತರು ಕೋಡಿ ದಾಟಲು ಆಗುವುದಿಲ್ಲ. ಆ ಸ್ಥಳಕ್ಕೆ ಸೇತುವೆ ಮಾಡಿಸಿಕೊಟ್ಟರೆ ಒಳಿತಾಗುತ್ತದೆ. ಜೊತೆಗೆ ದೋಣಿಸೇವೆ ನಡೆಸಲು ದೇವಾಲಯ ಒಳಾಂಗಣದಲ್ಲಿ ಜಾಗ ಸಾಲುವುದಿಲ್ಲ, ನಿಮ್ಮ ಅನುದಾನದಲ್ಲಿ ಮೇಲ್ಚಾವಣಿ ಹಾಕಿಸಿದರೆ ಮಳೆಗಾಲದಲ್ಲಿ ಅನುಕೂಲವಾಗುತ್ತದೆ ಎಂಬ ಬೇಡಿಕೆ ಇಟ್ಟರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್‌ಜನ್ಮ ನೀಡಿದ್ದು ಚಿಕ್ಕಮಗಳೂರು ಜಿಲ್ಲೆ. ಅಂತಹ ಕ್ಲಿಸ್ಟಕರ ಸಂದರ್ಭದಲ್ಲಿ ಇಂದಿರಾಗಾಂಧಿ ಯವರು ಬೀರೂರಿಗೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಈ ಸ್ವಾಮಿಗೆ ಬೇಡಿಕೊಂಡ ಫಲವಾಗಿ ಸಂಸದರಾಗಿ ದೇಶದ ಪ್ರಧಾನಿಯಾದರು. ಅಂತೆಯೆ ಬಾಬು ಜಗಜೀವನ್ ರಾಂ, ಶ್ರೀಕಂಠಪ್ಪ, ಹಾಗೂ ಕೆ.ಎಚ್.ಮುನಿಯಪ್ಪರಂತವರು ಸಹ ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ವಿಜಯಿಶಾಲಿಯಾಗಿದ್ದರು ಅದರಂತೆಯೇ ನಮ್ಮ ಸಂಸದರಾದ ಶ್ರೇಯಸ್ ಕೂಡ ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ದ ಫಲವಾಗಿ ಜಯಶೀಲರಾಗಿದ್ದಾರೆ ಸ್ವಾಮಿಯ ವರ ನಮ್ಮೆಲ್ಲರ ದಯೆ ಎಂದರು.
ಬರುವ ಅಕ್ಟೋಬರ್ 13ರ ಬೆಳಗಿನ ಜಾವ ಮೈಲಾರಸ್ವಾಮಿಯ ಕಾರ್ಣಿಕದ ಭವಿಷ್ಯನುಡಿ ನಡೆಯುತ್ತದೆ. ಸಂಸದರಾದ ತಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಾಮಿಯ ಆಶೀರ್ವಾದ ಪಡೆಯುವಂತೆ ದೇಗುಲದ ಗೌಡರು ಸಂಸದರು ಮತ್ತು ಶಾಸಕರಿಗೆ ಮನೊಲಿಸಿದಾಗ , ತಪ್ಪದೇ ಆ ಕಾರ್ಣಿಕಕ್ಕೆ ಬರುವುದಾಗಿ ತಿಳಿಸಿದರು.ಈ ವೇಳೆ ಶಾಸಕ ಕೆ.ಎಸ್.ಆನಂದ್, ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್, ಪುರಸಭಾ ಸದಸ್ಯರಾದ ಬಿ.ಕೆ.ಶಶಿಧರ್, ಲೋಕೇಶಪ್ಪ, ದೇಗುಲದ ಗೌಡರಾದ ಶಿವಣ್ಣ, ಕಾಂಗ್ರೆಸ್ ಮುಖಂಡ ಬಿ.ಎನ್.ಮಲ್ಲಿಕಾರ್ಜುನ್, ಕೀರ್ತಿ ಯತೀಶ್,ಎನ್.ಗಿರೀಶ್, ದೇಗುಲದ ಪೂಜಾರರಾದ ಧಶರಥ, ವಿಜೇತ್ ಸೇರಿ ಇತರರಿದ್ದರು.