ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಆಕಾಶವಾಣಿ ಕೇಂದ್ರ ೯೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಫೆ.೭ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಕಲಾಮಂದಿರದಲ್ಲಿ ಮೈಸೂರು ಆಕಾಶವಾಣಿ-೯೦ ಭಾವ ಜನಪದ ರಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಉಪ ನಿರ್ದೇಶಕ ಎಸ್.ಎಸ್.ಉಮೇಶ್ ತಿಳಿಸಿದರು.ಮೈಸೂರು ಆಕಾಶವಾಣಿ ಕೇಂದ್ರಕ್ಕೆ ೯೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅದರಂತೆ ಈಗಾಗಲೇ ಚಾಮರಾಜನಗರ, ಮೈಸೂರಿನಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಮಂಡ್ಯದಲ್ಲೂ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಪ್ರತಿಭೆಗಳನ್ನು ಪೋಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ತಿಂಗಳು ಇದರ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.ಭಾವ ಜನಪದ ರಂಗ ಕಾರ್ಯಕ್ರಮವನ್ನು ಜಿಲ್ಲಾಕಾರಿ ಡಾ.ಕುಮಾರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಭಾಗವಹಿಸುವರು. ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಅಬ್ದುಲ್ ರಶೀದ್, ಟಿ.ವಿ.ವಿದ್ಯಾಶಂಕರ್, ಸಹಾಯಕ ಅಭಿಯಂತರ ಪಿ.ಆನಂದ್ ಉಪಸ್ಥಿತರಿರಲಿದ್ದು, ಉಪನಿರ್ದೇಶಕ ಎಸ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಮೈಸೂರು ಆಕಾಶವಾಣಿ ಕೇಂದ್ರದ ಫ್ರೀಕ್ವೆನ್ಸಿ ಕಡಿಮೆಯಾಗಿದ್ದು, ಬೆಟ್ಟದಂತಹ ಎತ್ತರದ ಪ್ರದೇಶಗಳಲ್ಲಿ ನಮ್ಮ ಟವರ್‌ಗಳನ್ನು ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ. ಬಳಿಕ ತರಂಗಾತರಗಳು ಸುಲಭವಾಗಿ ತಲುಪುತ್ತವೆ ಎಂದರು.ಸಹಾಯಕ ನಿರ್ದೇಶಕ ಟಿ.ವಿ.ವಿದ್ಯಾಶಂಕರ್, ಹಿರಿಯ ಉದ್ಘೋಷಕ ಮೈಸೂರು ಉಮೇಶ್ ಗೋಷ್ಠಿಯಲ್ಲಿದ್ದರು.
ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿಗೆ ನಾಮ ನಿರ್ದೇಶನಕ್ಕೆ ಆಹ್ವಾನಮಂಡ್ಯ: ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಪಂಗಡದ ಮೇದಾರ ಅಲೆಮಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 2 ವರ್ಷಗಳವರೆಗೆ ಚಾಲ್ತಿಯಲ್ಲಿರುವಂತಹ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿಗೆ ಅಧಿಕಾರೇತರ ಸದಸ್ಯರುಗಳ ಆಯ್ಕೆಗೆ ನಾಮ ನಿರ್ದೇಶನಕ್ಕೆ ಆಹ್ವಾನಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಪೂರ್ಣ ವಿವರವನ್ನು ನಮೂದಿಸಿ ಫೆ.15 ರೊಳಗೆ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಅವಧಿ ಮೀರಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.