ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಹಾದುಹೋಗಿರುವ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಪರಿಶೀಲನೆ ನಡೆಸಿದರು.ಶ್ರಿರಂಗಪಟ್ಟಣ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಪೂರ್ಣವಾದ ಒಳಚರಂಡಿ ಕಾಮಗಾರಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಹಾಗೂ ಇದೇ ರೀತಿಯಾಗಿ ಜಿಲ್ಲಾದ್ಯಂತ ಇರುವ ಅಪೂರ್ಣವಾದ ಒಳಚರಂಡಿಗಳ ಕಾಮಗಾರಿಗಳನ್ನೂ ಸಹ ತುರ್ತಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.
ತೂಬಿನಕೆರೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ನಿರ್ಗಮನ ಕೇಂದ್ರದ ಬಳಿ ಅತಿ ಹೆಚ್ಚು ವಾಹನಗಳ ದಟ್ಟಣೆಯಾಗುತ್ತಿದ್ದು, ಇದರಿಂದ ನಿರಂತರವಾಗಿ ಹೆಚ್ಚಿನ ಅಪಘಾತಗಳಾಗುತ್ತಿದೆ ಇದರಿಂದ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ನಿಖರವಾಗಿ ಹಾಗೂ ಸ್ಪಷ್ಟವಾಗಿ ಸೂಚನೆ ನೀಡುವ ವಸ್ತು ವಿಷಯವುಳ್ಳ ಸೂಚನಾ ಫಲಕ ಅಳವಡಿಸುವಂತೆ ತಿಳಿಸಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಂಡರ್‌ಪಾಸ್‌ಗಳಲ್ಲಿ ಚಾಲಕರಿಗೆ ವಾಹನ ಚಾಲನೆಯ ಸಮಯದಲ್ಲಿ ಅತಿ ಹೆಚ್ಚಿನ ಬೆಳಕಿನ ವ್ಯವಸ್ಥೆಗಾಗಿ ಸೂಕ್ತ ಲೈಟಿಂಗ್ಸ್ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯ ಅಕ್ಕ-ಪಕ್ಕದ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾದಚಾರಿ ಸೇತುವೆಗಳನ್ನು ನಿರ್ಮಾಣ ಮಾಡುವ ಸಂಬಂಧ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.ರಾಷ್ಟ್ರೀಯ ಹೆದ್ದಾರಿಯು ಜಿಲ್ಲೆಯ ಸಾರಿಗೆ, ಪ್ರವಾಸೋದ್ಯಮ ವಲಯಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಜಿಲ್ಲೆಯ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸುರಕ್ಷಿತ ರಸ್ತೆ ಪ್ರಯಾಣಕ್ಕೆ ಅನುಕೂಲವಾಗಿರುವ ಹೆದ್ದಾರಿಗೆ ಸಂಬಂಧಿಸಿದಂತೆ ಅಪೂರ್ಣವಾಗಿರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ, ಜೊತೆಗೆ ಅಪಘಾತಗಳನ್ನು ತಪ್ಪಿಸುವಲ್ಲಿ ಸೂಕ್ತ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ಪರಿಶೀಲನೆ ವೇಳೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲೆಯ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಆರಕ್ಷಕ ಅಧೀಕ್ಷಕ ತಿಮ್ಮಯ್ಯ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಎಂ.ಎಸ್ ಒಬಲೇ ಹಾಜರಿದ್ದರು.