ಸಾರಾಂಶ
ಫೋಟೋ- 15ಎಂವೈಎಸ್8ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ರಾಷ್ಟ್ರೀಯ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ ಇದ್ದರು.----ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ಮುಂದಾಗುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಕಿಡಿಕಾರಿದರು.ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಅರ್ಧ ಸತ್ಯವನ್ನಷ್ಟೇ ಹೇಳುತ್ತಿದ್ದಾರೆ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಲ್ಲಿನ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ ಎನ್ನುತ್ತಾರೆ. ಆದರೆ, ಉತ್ತರದ ರಾಜ್ಯಗಳಲ್ಲಿ ಕ್ಷೇತ್ರಗಳು ಹೆಚ್ಚಾಗುವ ಬಗ್ಗೆ ಮೌನವಾಗಿದ್ದಾರೆ ಎಂದು ದೂರಿದರು.ಎಸ್.ಆರ್. ಬೊಮ್ಮಾಯಿ ಕೇಸ್ ನಲ್ಲಿ ಸುಪ್ರೀಂಕೋರ್ಟ್ ನೀಡಿದ ಒಕ್ಕೂಟ ವ್ಯವಸ್ಥೆಯ ತೀರ್ಪಿಗೆ ವ್ಯತಿರಿಕ್ತವಾಗಿ ಕ್ಷೇತ್ರ ಪುನರ್ ವಿಂಗಡಣೆಯಾಗುತ್ತಿದೆ ಎಂದು ಅವರು ಹೇಳಿದರು.ಇವಿಎಂ ಬಗ್ಗೆ ನಮಗೆ ತಕರಾರು ಇಲ್ಲ. ಬದಲಿಗೆ ಕೆಲವು ಅನುಮಾನಗಳು ಇವೆ. ಚುನಾವಣೆ ಪ್ರಕ್ರಿಯೆಗಳ ಬಗ್ಗೆಯೇ ನಮಗೆ ಅನುಮಾನವಿದೆ. ಈ ಬಗ್ಗೆ ನಾವು ಉತ್ತರ ಬಯಸಿದ್ದೇವೆ. ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇದ್ದಕ್ಕಿದ್ದಂತೆ ಹೆಚ್ಚಾಗಿರುವುದರ ಬಗ್ಗೆ ನಮಗೆ ಅನುಮಾನವಿದೆ. ಚುನಾವಣೆಗೆ ಬಿಜೆಪಿ ಬಳಿ ಹಣವಿದೆ. ಸಿಬಿಐ, ಇಡಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.ಸಿಎಂಗೆ ಕಪ್ಪು ಚುಕ್ಕೆ ತರುವ ಪ್ರಯತ್ನಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದ ಮೇಲೆ ಕಪ್ಪುಚುಕ್ಕೆ ತರುವ ಪ್ರಯತ್ನ ನಡೆಯಿತು. ಸಿದ್ದರಾಮಯ್ಯ ತಪ್ಪು ಇಲ್ಲದಿದ್ದರೂ ವಿವಾದಕ್ಕೆ ಎಳೆದರು. ಬಿಜೆಪಿಯ ಈ ಪ್ರಯತ್ನಗಳು ವಿಫಲವಾದವು. ಇದೀಗ ಲೋಕಾಯುಕ್ತವೂ ಕ್ಲೀನ್ ಚಿಟ್ ಕೊಟ್ಟಿದೆ ಎಂದರು.ಗಾಂಧೀಜಿ, ಬಸವಣ್ಣನವರ ವಿಚಾರ ಮಾರ್ಗದಲ್ಲಿ ಸಿದ್ದರಾಮಯ್ಯ ಸರ್ಕಾರ ಸಾಗಿದೆ. ನುಡಿದಂತೆ ನಡೆಯುವ ಮೂಲಕ ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿ 52 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದು ಸಾಮಾನ್ಯ ಸಂಗತಿಯಲ್ಲ. ಇತ್ತೀಚಿಗೆ ಮಂಡಿಸಿರುವ ಬಜೆಟ್ ಸಹ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿದ್ದು, ಶಿಕ್ಷಣ, ಕೃಷಿ, ಆರೋಗ್ಯಕ್ಕೆ ಆದ್ಯತೆ ನೀಡಲಾಗಿದ್ದು, ರಾಜ್ಯ ಸರ್ಕಾರವು ಉತ್ತಮ ಆಡಳಿತ ನೀಡುತ್ತಿದೆ ಎಂದು ಅವರು ಶ್ಲಾಘಿಸಿದರು.ಮುಸ್ಲಿಂ ಮೀಸಲು ಸಂವಿಧಾನಬದ್ಧಎಸ್ಸಿ, ಎಸ್ಟಿ, ಒಬಿಸಿಯೊಂದಿಗೆ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ನಲ್ಲಿ ಮೀಸಲಾತಿ ಕಲ್ಪಿಸಿರುವುದು ಸಂವಿಧಾನಬದ್ಧವಾಗಿದೆ. ಇದನ್ನು ಧರ್ಮದ ಆಧಾರವಾಗಿ ನೀಡಿಲ್ಲ. ಹಿಂದುಳಿದ ವರ್ಗದಲ್ಲಿರುವ ಕಾರಣಕ್ಕೆ ನೀಡಲಾಗಿದೆ. ಈ ಸೌಲಭ್ಯವನ್ನು ಕದ್ದುಮುಚ್ಚಿ ಏನು ಕೊಟ್ಟಿಲ್ಲ. ಪಾರದರ್ಶಕವಾಗಿ ಜಾರಿ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದನ್ನು ಮಾಡಲು ಅಧಿಕಾರ ಇದೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಲು ಬಿಜೆಪಿ ಮುಂದಾಗಿದ್ದು, ಅಲ್ಲಿ ಇದು ಪರೀಕ್ಷೆಗೆ ಒಳಪಡುವ ಮೂಲಕ ನ್ಯಾಯ ದೊರೆಯುವ ವಿಶ್ವಾಸ ಇದೆ ಎಂದರು.----ಬಾಕ್ಸ್... ಅಧಿಕಾರ ಹಂಚಿಕೆ ಚರ್ಚೆ ಇಲ್ಲ- ಸಿಂಗ್ವಿರಾಜ್ಯದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಕುರಿತು ದೆಹಲಿ ಮಟ್ಟದಲ್ಲಿ ಯಾವುದೇ ಚರ್ಚೆ ಇಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ಈ ವಿಚಾರದ ಕುರಿತು ಪಕ್ಷದ ವರಿಷ್ಠರ ಮಟ್ಟದಲ್ಲಿ ಯಾವುದೇ ಸಮಾಲೋಚನೆ ನಡೆದಿಲ್ಲ. ಆದರೆ, ಮಾಧ್ಯಮಗಳಲ್ಲಿ ದಿನ 24 ಗಂಟೆಯೂ ತೋರಿಸಲಾಗುತ್ತಿದೆ. ರಾಜ್ಯದ ಜನರು ಪಕ್ಷಕ್ಕೆ ಬಹುಮತ ನೀಡಿದ ಬಳಿಕ ಒಮ್ಮತದ ಮೂಲಕ ಜವಾಬ್ದಾರಿ ವಹಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ಗೊಂದಲವೂ ಇಲ್ಲ. ಅಸಮಾಧಾನವೂ ಉಂಟಾಗಿಲ್ಲ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಸ್ಪಷ್ಟಪಡಿಸಿದರು.