ಮೈಸೂರು ದಸರಾ: ಬಾನು ಮುಷ್ತಾಕ್ ಬದಲಿಸಲು ಆಗ್ರಹ

| Published : Aug 29 2025, 01:00 AM IST

ಮೈಸೂರು ದಸರಾ: ಬಾನು ಮುಷ್ತಾಕ್ ಬದಲಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಿದ್ದರೆ, ತಮ್ಮ ಮನೆಯ ಕಾರ್ಯಕ್ರಮದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆಯಿಸಿಕೊಳ್ಳಲಿ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ರಾಜ್ಯ ಸರ್ಕಾರ ದಸರಾ ಉದ್ಘಾಟನೆಯಿಂದ ಬಾನು ಮುಷ್ತಾಕ್ ಅವರನ್ನು ಕೈಬಿಟ್ಟು ಬೇರೆಯವರನ್ನು ಉದ್ಘಾಟನೆಗೆ ಆಹ್ವಾನಿಸಬೇಕು. ಇಲ್ಲದಿದ್ದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮದಂದು ಕಪ್ಪು ಭಾವುಟ ಪ್ರದರ್ಶಿಸಬೇಕಾಗುತ್ತದೆ ಎಂದು ಆಜಾದ್ ಬ್ರಿಗೇಡ್ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಗಜೇಂದ್ರ ಸಿಂಗ್ ಎಚ್ಚರಿಕೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಿದ್ದರೆ, ತಮ್ಮ ಮನೆಯ ಕಾರ್ಯಕ್ರಮದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆಯಿಸಿಕೊಳ್ಳಲಿ. ನಮ್ಮ ಸಂಸ್ಕೃತಿಯ ಹಾಗೂ ಭಾಷೆಯ ಕುರಿತು ಗೌರವವಿಲ್ಲದವರನ್ನು ದಸರಾ ಉದ್ಘಾಟನೆಯಿಂದ ಕೈಬಿಡಲಿ ಎಂದು ಆಗ್ರಹಿಸಿದರು. ಮುಸ್ಲಿಂ ಎಂಬ ಕಾರಣಕ್ಕೆ ಭಾನು ಮುಷ್ತಾಕ್‌ ಅವರನ್ನು ನಾವು ವಿರೋಧಿಸುತ್ತಿಲ್ಲ. 2017ರಲ್ಲಿ ನಿತ್ಯೋತ್ಸವ ಕವಿ ಎಂತಲೇ ಖ್ಯಾತರಾಗಿದ್ದ ಕೆ.ಎಸ್. ನಿಸಾರ್ ಅಹ್ಮದ್ ಅವರನ್ನು ದಸರಾ ಉದ್ಘಾಟಕರಾಗಿ ಆಹ್ವಾನಿಸಿದಾಗ ಹಿಂದುಗಳೆಲ್ಲರೂ ಮುಕ್ತವಾಗಿ ಒಪ್ಪಿಕೊಂಡಿದ್ದರು. ಅವರು ದಸರಾ ಉದ್ಘಾಟನೆಗೆ ಅರ್ಹರಾಗಿದ್ದರು. ತದ್ವಿರುದ್ಧವಾಗಿ ಭಾನು ಮುಷ್ಟಾಕ್ ಭುವನೇಶ್ವರಿಯನ್ನೇ ಅವಹೇಳನ ಮಾಡಿದ್ದರು. ಆದ ಕಾರಣ ಇಡೀ ಕನ್ನಡಪರ ಸಂಘಟನೆಗಳು ಭಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸಬೇಕಾಗಿದೆ ಎಂದರು. ಬೂಕರ್ ಪ್ರಶಸ್ತಿ ಲಭಿಸಿರುವುದು ಬಾನು ಮುಷ್ತಾಕ್‌ರವರ ಕಥಾಸಂಕಲನವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದಕ್ಕೆ, ಆದರೆ ಹಿಂದೂ ವಿರೋಧಿ ರಾಜ್ಯ ಸರ್ಕಾರ ದೀಪಾ ಭಸ್ತಿ ಅವರನ್ನು ದಸರಾ ಉದ್ಘಾಟನೆಗೆ ಪರಿಗಣಿಸಿಯೇ ಇಲ್ಲ. ಕೇವಲ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಹಿಂದೂ ವಿರೋಧಿ ರಾಜ್ಯ ಸರ್ಕಾರದ ಆಷಾಡಭೂತಿತನವನ್ನು ಸಂಘಟನೆ ವಿರೋಧಿಸುತ್ತದೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಮುಂಡಿ ಬೆಟ್ಟ ಹಿಂದುಗಳಿಗೆ ಅಷ್ಟೇ ಸೇರಿದ್ದಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಇದೇ ಡಿ.ಕೆ. ಶಿವಕುಮಾರ್ ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿರುವ ಮುನೇಶ್ವರ ಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಏಸು ಪ್ರತಿಮೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದರಲ್ಲ ಮುನೇಶ್ವರ ಬೆಟ್ಟವೇನು ಅವರ ಪಿತ್ರಾರ್ಜಿತ ಆಸ್ತಿಯೇ? ಎಂದು ಪ್ರಶ್ನಿಸಿದರು.

ಈ ವೇಳೆ ಆಜಾದ್ ಬ್ರಿಗೇಡ್ ಸಂಘಟನೆಯ ಪದಾಧಿಕಾರಿಗಳಾದ ರಘು ಮಂಗಳವಾರಪೇಟೆ, ಆನಂದ್ ಕುಮಾರ್.ಎಂ.ಪಿ, ಶ್ರೀಹರಿ, ವಡ್ಡರಹಳ್ಳಿ ಹನುಮಂತು, ಶ್ರೀನಿವಾಸ್, ಚಿದಾನಂದ್, ಸಂದೀಪ್, ಸುರೇಶ ರಾಮಕೃಷ್ಣ , ನಿಸರ್ಗ ನಾಗರಿಕ ಸೇವಾ ಸಮಿತಿಯ ಪುಟ್ಟಸ್ವಾಮಿಗೌಡ, ಮದನ್, ಮಾಯಿಗೆಗೌಡ, ಬಸವರಾಜ್, ಮಾಸ್ಟರ್ ನಾಗಪ್ಪ ಮೊದಲಾದವರು ಉಪಸ್ಥಿತರಿದ್ದರು.

ಪೊಟೋ೨೮ಸಿಪಿಟಿ೧: ನಗರದ ಪ್ರವಾಸಿ ಮಂದಿದಲ್ಲಿ ಆಜಾದ್ ಬ್ರಿಗೇಡ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು.