ಮೈಸೂರು ಕಂಬಳ ದಸರಾಗೆ ತೆರಳುವ ಕಂಬಳದ ಕೋಣಗಳಿಗೆ ಗುಂಡುರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ವಿಶ್ರಾಂತಿ ಮತ್ತು ಮೇವಿಗೆ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಬರುವ 2000 ಮಂದಿ ಸೇರಿದಂತೆ ಕೋಣಗಳನ್ನು ವೀಕ್ಷಿಸಲು ಆಗಮಿಸುವ ಕುಶಾಲನಗರ ಸುತ್ತಮುತ್ತಲಿನ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಹೇಳಿದರು.
ಕುಶಾಲನಗರ: ಮೈಸೂರು ಕಂಬಳ ದಸರಾಗೆ ತೆರಳುವ ಕಂಬಳದ ಕೋಣಗಳಿಗೆ ಗುಂಡುರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ವಿಶ್ರಾಂತಿ ಮತ್ತು ಮೇವಿಗೆ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಬರುವ 2000 ಮಂದಿ ಸೇರಿದಂತೆ ಕೋಣಗಳನ್ನು ವೀಕ್ಷಿಸಲು ಆಗಮಿಸುವ ಕುಶಾಲನಗರ ಸುತ್ತಮುತ್ತಲಿನ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಮಡಿಕೇರಿ ಮೂಲಕ ಮೈಸೂರು ಕಂಬಳ ದಸರಾಗೆ ತೆರಳುವ ಕಂಬಳದ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆಂದು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ದತೆಗಳ ಬಗ್ಗೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕೊಡಗಿನ ಶಾಸಕದ್ವಯರು ಸೇರಿದಂತೆ ಪುತ್ತೂರು ಕ್ಷೇತ್ರ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕರಾವಳಿ ವಾದ್ಯಗೋಷ್ಠಿ, ಹುಲಿವೇಷ ಕುಣಿತ ಪ್ರದರ್ಶನ ಕೂಡ ಇರುತ್ತದೆ ಎಂದು ಮಾಹಿತಿ ನೀಡಿದರು. 17 ರಂದು ಮಧ್ಯಾಹ್ನ ಅಂದಾಜು 150 ಕ್ಕೂ ಅಧಿಕ ಜೋಡಿ ಕಂಬಳದ ಕೋಣಗಳು ಕುಶಾಲನಗರಕ್ಕೆ ಆಗಮಿಸಲಿದೆ ಎಂದರು.ಗೋಜಾತ್ರೆ ಸಂದರ್ಭ ಕಂಬಳ: ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಮಾತನಾಡಿ, ಕುಶಾಲನಗರ ಭಾಗದ ಜನತೆ ಪ್ರಸಿದ್ದ ಕಂಬಳ ಕೋಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಶಾಸಕ ಮಂತರ್ ಗೌಡ ಕಲ್ಪಿಸಿದ್ದಾರೆ. ನಾವೂ ಕೂಡ ಕಂಬಳದ ಕೋಣಗಳನ್ನು ಸ್ವಾಗತಿಸಿ ಅಲ್ಲಿನ ಕಲೆಯನ್ನು ಪ್ರೋತ್ಸಾಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಮಂದಿ ಅಂದು ಭಾಗಿಯಾಗಬೇಕಿದೆ. ಕುಶಾಲನಗರದ ಪ್ರಸಿದ್ದ ಗೋಜಾತ್ರೆ ಸಂದರ್ಭ ಕಂಬಳ ಏರ್ಪಡಿಸಿದಲ್ಲಿ ಮತ್ತಷ್ಟು ಮೆರಗು ದೊರೆಯುತ್ತದೆ ಎಂದರು.ವಿಶ್ವ ತುಳುವೆರ ಕೂಟದ ಅಧ್ಯಕ್ಷ ಐತಪ್ಪ ರೈ, ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ ಮಾತನಾಡಿ, ಕುಶಾಲನಗರದಲ್ಲಿ ಕಂಬಳದ ಕೋಣಗಳಿಗೆ ವಿಶ್ರಾಂತಿ ವ್ಯವಸ್ಥೆ, ಊಟೋಪಚಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದ ಶಾಸಕ ಡಾ.ಮಂತರ್ ಗೌಡ ಮತ್ತು ಸ್ಥಳೀಯ ಮುಖಂಡರಿಗೆ ಧನ್ಯವಾದ ಸಲ್ಲಿಸಿದರು.
ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮಾಜಿ ಸದಸ್ಯರಾದ ಡಿ ಕೆ ತಿಮಪ್ಪ, ಜಗದೀಶ್, ಸುರಯ್ಯಭಾನು, ತುಳುವರೆ ಕೂಟದ ಪ್ರಕಾಶ್ ಆಚಾರ್ಯ, ಅಪ್ರು ರವೀಂದ್ರ, ಮೊಗೇರ ಸಂಘದ ದಾಮೋದರ್, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಆರೋಗ್ಯ ನಿರೀಕ್ಷಕ ಉದಯಕುಮಾರ್ ಮತ್ತಿತರರು ಇದ್ದರು.