ಮೈಸೂರು ದಸರಾ ಕಂಬಳದ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿದ್ದು, ಶನಿವಾರ ಬೆಳಗ್ಗೆ 9 ಗಂಟೆಗೆ ಪುತ್ತೂರಿನಿಂದ 160 ಜೋಡಿ ಕೋಣಗಳು ಹಾಗೂ ಮಾಲಕರು ಮೈಸೂರಿಗೆ ತೆರಳಲಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಬಳದ ರೂವಾರಿಯಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಪುತ್ತೂರು: ಮೈಸೂರು ದಸರಾ ಕಂಬಳದ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿದ್ದು, ಶನಿವಾರ ಬೆಳಗ್ಗೆ 9 ಗಂಟೆಗೆ ಪುತ್ತೂರಿನಿಂದ 160 ಜೋಡಿ ಕೋಣಗಳು ಹಾಗೂ ಮಾಲಕರು ಮೈಸೂರಿಗೆ ತೆರಳಲಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಬಳದ ರೂವಾರಿಯಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಅವರು ಶುಕ್ರವಾರ ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಬೆಳಗ್ಗೆ 8.30ಕ್ಕೆ ಎಲ್ಲಾ ಕೋಣಗಳು ಹಾಗೂ ಮಾಲಕರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಸೇರಲಿದ್ದಾರೆ. ಬಳಿಕ ಹೊರಟ ವಾಹನಗಳು ಕೊಡಗು ಜಿಲ್ಲೆಯ ಕುಶಾಲನಗರಕ್ಕೆ 1 ಗಂಟೆಗೆ ತಲುಪಲಿದೆ. ಕುಶಾಲನಗರದಲ್ಲಿ ಕೋಣಗಳು ಮತ್ತು ಮಾಲಕರನ್ನು ವೈಭವದಿಂದ ಸ್ವಾಗತ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿ ಸುಮಾರು 7ರಿಂದ 8ಸಾವಿರ ಮಂದಿ ಸೇರಲಿದ್ದಾರೆ. ಕಾರ್ಯಕ್ರಮಕ್ಕಾಗಿ ದೊಡ್ಡ ಪೆಂಡಾಲ್ ಹಾಕಲಾಗಿದೆ. ಅಲ್ಲದೆ ಏಕಕಾಲದಲ್ಲಿ 50 ಕೋಣಗಳನ್ನು ವಾಹನಗಳಿಂದ ಇಳಿಸಲು ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದೆ. 20 ಸಾವಿರ ಚದರ ಅಡಿಯ ದೊಡ್ಡ ಪೆಂಡಾಲ್ ನಿರ್ಮಿಸಲಾಗಿದೆ. ಅಲ್ಲಿ ಹಬ್ಬದ ರೀತಿಯಲ್ಲಿ ಕೋಣಗಳಿಗೆ ಸ್ವಾಗತ ಮಾಡಲಿದ್ದಾರೆ.

ಕುಶಾಲನಗರದ ಜನರ ಬೇಡಿಕೆಯಂತೆ ಕೋಣಗಳನ್ನು ಇಳಿಸುವ ಸ್ಥಳದಲ್ಲಿ ಪಿಲಿ ನಲಿಕೆ (ಹುಲಿ ಕುಣಿತ) ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದಲೇ ಪಿಲಿ ನಲಿಕೆ ಆರಂಭಗೊಳ್ಳಲಿದೆ. ಸಾಗಾಟದ ವೇಳೆಯಲ್ಲಿ ದಾರಿ ಮದ್ಯೆ ಯಾವುದೇ ವಾಹಗಳಿಗೆ ತೊಂದರೆಯಾದಲ್ಲಿ ಪರ್ಯಾಯ ವ್ಯವಸ್ಥೆಯಾಗಿ ಇತರ ಮೂರು ವಾಹನದ ವ್ಯವಸ್ಥೆ, 3 ವಾಹನಗಳಲ್ಲಿ ಯುವಕರ ತಂಡ ಸಿದ್ಧವಿರುತ್ತದೆ. ದಾರಿಯುದ್ದಕ್ಕೂ ಪೊಲೀಸ್ ಬೆಂಗಾವಲಿನೊಂದಿಗೆ ಸಾಗಲಿದೆ. ಹೋಗುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವ ಬಗ್ಗೆಯೂ ಕೇಳಿಕೊಳ್ಳಲಾಗಿದೆ. ಕೋಣಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಯಜಮಾನರೇ ಮಾಡಿಕೊಳ್ಳಲಿದ್ದಾರೆ.ಮೈಸೂರಿಗೆ ಬೆಳಗ್ಗೆ 7ರಿಂದ 8 ಗಂಟೆ ಒಳಗೆ ತಲುಪಲಿದ್ದು, ಅಲ್ಲಿ ಕೋಣದ ಯಜಮಾನರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹಾಕಿ, ಸರ್ಟಿಫಿಕೇಟ್ ನೀಡಿ ಅಧಿಕಾರಿಗಳು ಸ್ವಾಗತ ಮಾಡಲಿದ್ದಾರೆ. ಅಲ್ಲಿ ವಿಶ್ರಾಂತಿ ಮತ್ತು ಊಟ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಕಂಬಳ ವೀಕ್ಷಣೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ನಿನ್ನೆ ನಡೆದ ಟ್ರಯಲ್ ಸಂದರ್ಭದಲ್ಲಿ ಸುಮಾರು 2 ಸಾವಿರ ಮಂದಿ ಪಾಲ್ಗೊಂಡಿದ್ದರು. ಕಂಬಳದ ವಿಜೇತ ಕೋಣಗಳಿಗೆ ಇಲ್ಲಿ ನೀಡುವ ಮಾದರಿಯಲ್ಲಿಯೇ ಬಹುಮಾನ ನೀಡಲಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ.