ಕೆ.ಬಿ.ಗಣಪತಿ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

| Published : Jul 15 2025, 01:00 AM IST

ಸಾರಾಂಶ

ದೇವರಾಜ ಮಾರುಕಟ್ಟೆಯಲ್ಲಿ ರೈತರ ಸಮಸ್ಯೆ ತಿಳಿಸಿ, ಅಂದಿನ ಮಂತ್ರಿಗಳ ಕೈಲೂ ಸೈ ಎನಿಸಿಕೊಂಡವರು ಗಣಪತಿ. ಶಂಕರಲಿಂಗೇಗೌಡರನ್ನ ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದೇ ಮೈಸೂರು ಮಿತ್ರ ಪತ್ರಿಕೆ ಗಣಪತಿಯವರು. ಒಳ್ಳೆ ಕೆಲಸ ಮಾಡಿದ್ರೆ ಪ್ರಶಂಸೆ ಮಾಡಿದ್ದಾರೆ. ಆ ಹೊಗಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೊರತಲ್ಲ. ಗಣಪತಿಯವರ ಮಾತಿಗೆ ಎಲ್ಲರೂ ಗೌರವಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಭಾನುವಾರ ನಿಧನರಾದ ಹಿರಿಯ ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಅವರಿಗೆ ಸೋಮವಾರ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗಣ್ಯರು ತಮ್ಮ ಹಾಗೂ ಗಣಪತಿ ಅವರ ನಡುವೆ ಇದ್ದ ಒಡನಾಟ ಸ್ಮರಿಸಿ, ಅವರ ಅಗಲಿಕೆಗೆ ಕಂಬನಿ ಮಿಡಿದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ನಾವೆಲ್ಲರೂ ಗಣಪತಿ ಅವರಿಂದ ಪ್ರೇರಣೆ, ಸ್ಪೂರ್ತಿ ಪಡೆದವರೇ ಆಗಿದ್ದೇವೆ. ಅವರು ಎಲ್ಲರನ್ನೂ ನೇರವಾಗಿ ಪ್ರಶ್ನೆ ಮಾಡುತ್ತಿದ್ದರು. ಜೊತೆಗೆ ಪ್ರಶಂಸೆಯನ್ನೂ ಮಾಡುತ್ತಿದ್ದರು. ಎಲ್ಲಾ ಜನರ ಬಗ್ಗೆ ಪ್ರೀತಿ, ನಂಬಿಕೆ ಇರಿಸಿಕೊಂಡಿದ್ದರು. ಕೊಡಗು ಜನ್ಮಭೂಮಿ ಆದರೂ ಮೈಸೂರು ಕರ್ಮಭೂಮಿ ಆಗಿತ್ತೆಂದು ಸ್ಮರಿಸಿದರು.

ರಾಜಕೀಯ ಕ್ಷೇತ್ರದಲ್ಲಿರುವ ತಾವೆಲ್ಲರೂ ಕೆ.ಬಿ. ಗಣಪತಿ ಅವರಿಗೆ ಕೃತಜ್ಞರಾಗಿರಬೇಕು. ಅವರು ನೀಡಿದ ಮಾರ್ಗದರ್ಶನ ಅಮೂಲ್ಯವಾದದ್ದು. ಅವರು ಮಹಾಜ್ಞಾನಿ ಮಾತ್ರವಲ್ಲ, ಶಿಸ್ತಿನ ವ್ಯಕ್ತಿ ಕೂಡ ಆಗಿದ್ದರು. ಮೈಸೂರು ನಗರದ ಸರ್ವತೋಮುಖ ಬೆಳವಣಿಗೆಗೆ ಅಪಾರ ಕಾಳಜಿ ವಹಿಸಿದ್ದಾಗಿ ಅವರು ತಿಳಿಸಿದರು.

ದೇವರಾಜ ಮಾರುಕಟ್ಟೆಯಲ್ಲಿ ರೈತರ ಸಮಸ್ಯೆ ತಿಳಿಸಿ, ಅಂದಿನ ಮಂತ್ರಿಗಳ ಕೈಲೂ ಸೈ ಎನಿಸಿಕೊಂಡವರು ಗಣಪತಿ. ಶಂಕರಲಿಂಗೇಗೌಡರನ್ನ ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದೇ ಮೈಸೂರು ಮಿತ್ರ ಪತ್ರಿಕೆ ಗಣಪತಿಯವರು. ಒಳ್ಳೆ ಕೆಲಸ ಮಾಡಿದ್ರೆ ಪ್ರಶಂಸೆ ಮಾಡಿದ್ದಾರೆ. ಆ ಹೊಗಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೊರತಲ್ಲ. ಗಣಪತಿಯವರ ಮಾತಿಗೆ ಎಲ್ಲರೂ ಗೌರವಿಸುತ್ತಿದ್ದರು.ಅವರ ಮಾತು ಅರ್ಥಪೂರ್ಣವಾಗಿರುತ್ತಿತ್ತು. ಮೈಸೂರಿನ ಮೆಟ್ರೋ ರೈಲು ಏರ್ಪೋರ್ಟ್ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸದ ಬಗ್ಗೆ ಆಶಯ ಇಟ್ಟಿದ್ದವರು ಎಂದು ಹೇಳಿದರು.

ವಿಧಾನ ಪರಿಷತ್‌ಮಾಜಿ ಸದಸ್ಯ ಡಿ. ಮಾದೇಗೌಡ ಮಾತನಾಡಿ, ಪತ್ರಿಕೆ ನಡೆಸುವ ವ್ಯಕ್ತಿ ಸಮಾಜಮುಖಿ ಆಗಿದ್ದರೆ ಸಮಾಜವನ್ನು ಏಳಿಗೆಗೆ ಕೊಂಡೊಯ್ಯಬಹುದು ಎಂಬುದಕ್ಕೆ ಕೆ.ಬಿ. ಗಣಪತಿ ಸಾಕ್ಷಿಯಾಗಿದ್ದಾರೆ. ಅವರ ಪತ್ರಿಕೆಯಲ್ಲಿ ನಾಳೆ ಏನು ಬರುತ್ತದೋ ಎಂಬ ಅಂಜಿಕೆಯಿಂದ ಹಲವಾರು ರಾಜಕಾರಣಿಗಳು ಸದಾ ಉತ್ತಮ ಕೆಲಸವನ್ನೇ ಮಾಡುತ್ತಿದ್ದರು ಎಂಬುದಾಗಿ ಸ್ಮರಿಸಿದರು.

ಹಿರಿಯ ವಕೀಲ ಅರುಣ್‌ ಕುಮಾರ್, ಸಂಘದ ಅಧ್ಯಕ್ಷ ಕೆ. ದೀಪಕ್, ವಿಶ್ರಾಂತ ಕುಲಪತಿ ಪ್ರೊ.ಕೆ.ಸಿ. ಬೆಳ್ಳಿಯಪ್ಪ ಮೊದಲಾದವರು ಗಣಪತಿ ಅವರ ಕೊಡುಗೆ, ವ್ಯಕ್ತಿತ್ವವನ್ನು ಸ್ಮರಿಸಿದರು.

ಡಾ.ಎಸ್‌.ಪಿ.ಯೋಗಣ್ಣ, ಎಸ್‌.ಕೆ. ಮಿತ್ತಲ್‌, ಸಿಂಧೆ, ವಿಕ್ರಾಂತ್‌ಪಿ. ದೇವೇಗೌಡ, ಟಿ.ಗುರುರಾಜ್‌, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಉಪಾಧ್ಯಕ್ಷ ರವಿ ಪಾಂಡವಪುರ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಪದಾಧಿಕಾರಿಗಳಾದ ಕವಿತಾ, ಹಂಪಾ ನಾಗರಾಜ್‌, ಎಂ.ಟಿ. ಯೋಗೇಶ್‌, ದೊಡ್ಡನಹುಂಡಿ ರಾಜಣ್ಣ, ಸೋಮಶೇಖರ ಚಿಕ್ಕಮರಳಿ, ಅಪ್ಸರ್‌ಪಾಷ, ಹೊಮ್ಮ ಮಂಜುನಾಥ್‌, ಮೂಗೂರು ನಂಜುಂಡಸ್ವಾಮಿ, ಪ್ರಗತಿ ಗೋಪಾಲಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.ಕೆ.ಬಿ.ಗಣಪತಿ ನಿಧನಕ್ಕೆ ಡಾ.ಜಿ. ಪರಮೇಶ್ವರ್‌ಸೇರಿದಂತೆ ಸೇರಿ ಹಲವರ ಸಂತಾಪ

ಕನ್ನಡಪ್ರಭ ವಾರ್ತೆ ಮೈಸೂರು

ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಅವರ ನಿಧನಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ಅವರು, ಮೈಸೂರಿನ ಹಿರಿಯ ಪತ್ರಕರ್ತ, ಅಂಕಣಕಾರ ಕೆ.ಬಿ. ಗಣಪತಿ ಅವರ ಅಗಲಿಕೆಯ ಸುದ್ದಿ ತಿಳಿದು ದುಃಖಿತನಾಗಿದ್ದೇನೆ.

ಗಣಪತಿ ಅವರು ವರದಿಗಾರಿಕೆ, ಅಂಕಣಗಳ ಮೂಲಕ ತಮ್ಮ ಛಾಪು ಮೂಡಿಸಿದ್ದರು. ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರು ದಿನಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾಗಿ ಕಳೆದ 50 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಯು ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.

ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ದುಃಖತಪ್ತ ಕುಟುಂಬವರ್ಗ, ಓದುಗ ಅಭಿಮಾನಿಗಳಿಗೆ ಹಾಗೂ ಪತ್ರಕರ್ತ ಮಿತ್ರರ ಬಳಗಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ ಎಂದು ತಿಳಿಸಿದ್ದಾರೆ.

ಸುಗಮ ಸಂಗೀತ ಗಾಯಕಿ ಎಚ್.ಆರ್‌. ಲೀಲಾವತಿ,,ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಪಿಯುಸಿಎಲ್‌ನ ಅಧ್ಯಕ್ಷ ಕಮಲ್‌ಗೋಪಿನಾಥ್‌, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಶಿವಣ್ಣ, ಸುಯೋಗ್‌ ಆಸ್ಪತ್ರೆ ಸಂಸ್ಥಾಪಕ ಡಾ.ಎಸ್‌.ಪಿ. ಯೋಗಣ್ಣ, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಶ್ರೀಧರ್‌ಕೂಡ ಸಂತಾಪ ಸೂಚಿಸಿದ್ದಾರೆ.