ಮೈಸೂರಿನ ಕೆರೆಗಳು ಇಲ್ಲಿನ ಶ್ವಾಶಕೋಶ. ಜೀವವೈವಿಧ್ಯತೆಯ ತಾಣವಾಗಿರುವ ಕೆರೆಗಳು ಅಳಿವಿನಂಚಿನಲ್ಲಿದ್ದು, ಅವುಗಳ ಸಂರಕ್ಷಣೆ ಕೇವಲ ಸರ್ಕಾರಿ ಕಡತಕ್ಕೆ ಸೀಮಿತವಾಗಬಾರದು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಪರಿಸರ, ಹಸಿರು ವಲಯ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಇಲ್ಲವಾದರೆ ಭವಿಷ್ಯ ಕಷ್ಟಕರವಾಗಲಿದೆ ಎಂದು ಮೇಜರ್ ಜನರಲ್‌ಸುಧೀರ್ ಒಂಬತ್ಕೆರೆ ಅಭಿಪ್ರಾಯಪಟ್ಟರು.ನಗರದಲ್ಲಿ ನಡೆಯುತ್ತಿರುವ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಅವರು ಮೈಸೂರಿನ ಪರಿಸರ, ಕೆರೆಗಳ ರಕ್ಷಣೆಯಲ್ಲಿ ನಾಗರೀಕರ ಹೊಣೆಗಾರಿಕೆ ವಿಷಯ ಕುರಿತು ಅವರು ಮಾತನಾಡಿದರು.
ನಗರದ ಮಣಿಪಾಲ್ ಆಸ್ಪತ್ರೆ ಮತ್ತು ಕುಕ್ಕರಹಳ್ಳಿ ಕೆರೆ ಬಳಿ ನಡೆಯುತ್ತಿರುವ ಮೇಲ್ಸೇತುವೆಯಂತಹ ಯೋಜನೆಗಳು ಮೈಸೂರಿನ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಮೈಸೂರಿನ ಕೆರೆಗಳು ಇಲ್ಲಿನ ಶ್ವಾಶಕೋಶ. ಜೀವವೈವಿಧ್ಯತೆಯ ತಾಣವಾಗಿರುವ ಕೆರೆಗಳು ಅಳಿವಿನಂಚಿನಲ್ಲಿದ್ದು, ಅವುಗಳ ಸಂರಕ್ಷಣೆ ಕೇವಲ ಸರ್ಕಾರಿ ಕಡತಕ್ಕೆ ಸೀಮಿತವಾಗಬಾರದು. ಅದು ನಾಗರಿಕರ ಹೊಣೆಗಾರಿಕೆಯೂ ಆಗಬೇಕು ಎಂದರು.ಪರಿಸರವಾದಿ ಪರಶುರಾಮೇಗೌಡ ಮಾತನಾಡಿ, ಅತಿಯಾದ ರಸಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ಮಣ್ಣೂ ವಿಷವಾಗಿದೆ. ಇದೆಲ್ಲವೂ ನೀರಿಗೆ ಸೇರಿ ಕುಡಿಯಲು ಯೋಗ್ಯವಲ್ಲದಂತಾಗಿವೆ. ಅಂತರ್ಜಲ ಕುಸಿದಿದೆ. ಪ್ಲಾಸ್ಟಿಕ್, ಕಸ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದೆಲ್ಲದರ ತಡೆಗೆ ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಜಲತಜ್ಞ ಯು.ಎನ್. ರವಿಕುಮಾರ್ ಮಾತನಾಡಿ, ಪಾಂಡವರ ಪತ್ನಿ ದ್ರೌಪದಿಯಂತೆ ನಮ್ಮ ಕೆರೆಗಳು. ಅನೇಕ ಗಂಡಂದಿರು. ಆದರೆ, ದ್ರೌಪದಿಯ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳಲ್ಲ. ಹಾಗೆಯೇ, ಅನೇಕ ಇಲಾಖೆಗಳಿವೆ. ಆದರೆ, ಯಾವುದೂ ಕೆರೆಗಳ ಸಂರಕ್ಷಣೆ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಎಲ್ಲೆಂದರಲ್ಲಿ ಕಸ ಬೀಸಾಕುವ ಸಂಸ್ಕೃತಿಯಿಂದಲೇ ಜೀವ ಜಲಕ್ಕೆ ಕುತ್ತು ಬಂದಿದೆ. ಮೊದಲು ಇದನ್ನು ಬಿಡಬೇಕು. ಕೆರೆಗಳು ಅವಶ್ಯವಾಗಿಯೂ ಬೇಕು. ಅದು ಮನರಂಜನೆಗಾಗಿ ಅಲ್ಲ. ನಮ್ಮ ಪರಿಸರಕ್ಕಾಗಿ. ಕೆರೆ, ಪ್ರಕೃತಿಯ ಸೇವೆ ತಾಯಿ ಸೇವೆಯಂತೆ ಎಂದು ಅವರು ವಿವರಿಸಿದರು.
ಪರಿಸರ ರಕ್ಷಣೆ ವಿಷಯದಲ್ಲಿ ರಾಜಕಾರಣಿಗಳಿಗೆ ತೀವ್ರ ನಿರ್ಲಕ್ಷ್ಯವಿದೆ. ಈ ಬಗ್ಗೆ ಯಾವುದೇ ಗಟ್ಟಿ ನಿಲುವು ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ಪರಿಸರ ಉಳಿವು, ವೋಟಿನ ನಿಲುವು ಆಗಲಿ. ಆಗಲೇ ಪರಿಸರ ಉಳಿಯಲಿದೆ ಎಂದರು. ಡಾ.ಎಚ್.ಎಸ್. ಚಂಪಾ ಸಂವಾದ ನಡೆಸಿಕೊಟ್ಟರು.