ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಸರ್ವಾಧಿಕಾರಿ ಧೋರಣೆಯಿಂದಾಗಿ ಅಂಧ ಮತ್ತು ಅಂಗವಿಕಲ ಮಕ್ಕಳು ಸಂಗೀತ ಪರೀಕ್ಷೆಯಿಂದ ದೂರ ಉಳಿಯುವಂತಾಗಿದೆ. ಶಾಸಕರು ಹೇಳಿದರೂ ಕೇಳಲಿಲ್ಲ, ಸಚಿವರ ಮನವಿಗೂ ವಿವಿಯಿಂದ ಸ್ಪಂದನೆ ಸಿಗಲಿಲ್ಲ. ಇದು ಜನರು ಆಕ್ರೋಶಕ್ಕೆ ಕಾರಣವಾಗಿದೆ.
ಯಾವ ಪರೀಕ್ಷೆ?:
ಸಂಗೀತ ವಿಷಯದಲ್ಲಿ ಜ್ಯೂನಿಯರ್, ಸಿನಿಯರ್, ವಿದ್ವತ್ ಪೂರ್ವ, ವಿದ್ವತ್ ಅಂತಿಮ ಹೀಗೆ ವಿವಿಧ ಪರೀಕ್ಷೆ ನಡೆಸುತ್ತದೆ. ಇದನ್ನು ಮೊದಲು ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯೇ ನಡೆಸುತ್ತಿತ್ತು. ಆದರೆ ಸಂಗೀತ ವಿಷಯಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ನಡೆಸುತ್ತಿದೆ. ಹಾಗೆ ನೋಡಿದರೆ ಈ ಪರೀಕ್ಷೆಗೆ ಎಲ್ಲ ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಾರೆ. ಆದರೆ ಅಂಧ ಮಕ್ಕಳು, ಅಂಗವಿಕಲ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗೆ ಕುಳಿತುಕೊಳ್ಳುವುದು ಮಾಮೂಲಿ. ಪ್ರತಿ ವರ್ಷ ನಡೆಯುವ ಈ ಪರೀಕ್ಷೆಯೂ ಈ ವರ್ಷ ಶನಿವಾರ (ಜು.27) ಹಾಗೂ ಭಾನುವಾರ (ಜು.28) ರಂದು ನಡೆಯುತ್ತಿದೆ. ಮೊದಲ ದಿನದ ಪರೀಕ್ಷೆಗಳು ರಾಜ್ಯದಲ್ಲಿ ನಡೆದಿವೆ.
ಸಮಸ್ಯೆಯೇನು?:
ಬೇರೆ ಬೇರೆ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದು, ಅದರಂತೆ ಹುಬ್ಬಳ್ಳಿಯ ಕನಕದಾಸ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ತೆರೆದಿದೆ. ಇಲ್ಲಿ ಧಾರವಾಡ ಹಾಗೂ ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲಾಗುತ್ತದೆ. ಗದಗ ಜಿಲ್ಲೆಯ ವೀರೇಶ್ವರ ಪುಣ್ಯಾಶ್ರಮ ಹಾಗೂ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ 125 ವಿದ್ಯಾರ್ಥಿಗಳು (ಅಂಧ ಮತ್ತು ಅಂಗವಿಕಲ) ಪರೀಕ್ಷೆ ಬರೆಯಬೇಕಿತ್ತು. ಆದರೆ, ಹೊಳೆಆಲೂರಿನಿಂದ ಹುಬ್ಬಳ್ಳಿ 130 ಕಿಮೀ, ಗದಗ ನಗರದಿಂದ 60 ಕಿಲೋ ಮೀಟರ್ ಇದೆ. ಇಷ್ಟು ದೂರವಿರುವ ಪರೀಕ್ಷಾ ಕೇಂದ್ರಕ್ಕೆ ಆ ಮಕ್ಕಳನ್ನು ಕರೆತರುವುದು ಸುಲಭದ ಮಾತಲ್ಲ. ಜತೆಗೆ ಪರೀಕ್ಷೆ ಬರೆಯುವ ಮಕ್ಕಳಿಗೆ ಸಹಾಯಕರನ್ನು ನೇಮಿಸಿದ್ದು ಇವರನ್ನು ಕರೆದುಕೊಂಡು ಬರಬೇಕು. ಇತ್ತ ಪರೀಕ್ಷಾ ಕೇಂದ್ರ ಅಂಗವಿಕಲ, ಅಂಧ ಮಕ್ಕಳ ಸ್ನೇಹಿಯಾಗಿರಬೇಕು. ಪರೀಕ್ಷಾ ಕೇಂದ್ರದಲ್ಲಿ ರ್ಯಾಂಪ್ ಇರಬೇಕು. ಒಂದು ಮಹಡಿ ಮೇಲಿದ್ದರೆ ಲಿಫ್ಟ್ ಇರಬೇಕು. ಹೀಗೆ ವಿವಿಧ ನಿಯಮಗಳಿವೆ. ಆದರೆ ಇವುಗಳನ್ನು ವಿಶ್ವವಿದ್ಯಾಲಯ ಪರಿಶೀಲಿಸಿಲ್ಲ. ನೇರವಾಗಿ ಕನಕದಾಸ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ತೆರೆದು ಕೈತೊಳೆದುಕೊಂಡಿದೆ.
ಪರೀಕ್ಷಾ ಕೇಂದ್ರ ಅಂಧ ಮಕ್ಕಳ ಸ್ನೇಹಿಯಾಗಿಲ್ಲ. ಜತೆಗೆ ದೂರವೂ ಆಗುತ್ತದೆ. ಆದಕಾರಣ ಪರೀಕ್ಷಾ ಕೇಂದ್ರ ಬದಲಿಸಿ ಗದಗದಲ್ಲೇ ಪರೀಕ್ಷಾ ಕೇಂದ್ರ ತೆರೆಯಿರಿ ಎಂದು ಅಂಧ ಮಕ್ಕಳು 15 ದಿನಗಳಿಂದ ಜಿಲ್ಲಾಧಿಕಾರಿ ಮೂಲಕ ಸಂಬಂಧಪಟ್ಟ ವಿವಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಈ ಎರಡು ಶಾಲೆಗಳ ಸಿಬ್ಬಂದಿ ಕೂಡ ಉನ್ನತ ಶಿಕ್ಷಣ ಇಲಾಖೆಗೂ ಮನವಿ ಕೊಟ್ಟಿದ್ದು ಆಗಿದೆ. ಗದಗ ಜಿಲ್ಲಾ ಉಸ್ತುವಾರಿ ಎಚ್.ಕೆ. ಪಾಟೀಲ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ವಿಷಯ ತಿಳಿಸಿದ್ದರು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಕೂಡ ವಿವಿ ಕುಲಪತಿಗಳೊಂದಿಗೆ ಚರ್ಚಿಸಿದ್ದರು. ಆದರೆ ಯಾವುದಕ್ಕೂ ವಿವಿ ಮಾತ್ರ ಸ್ಪಂದಿಸಲಿಲ್ಲ. ಹೀಗಾಗಿ ಅಂಧ ಮಕ್ಕಳು ಪರೀಕ್ಷೆಯಿಂದ ವಂಚಿತರಾಗಬೇಕಾಯಿತು.
ಬೇಡಿಕೆಯೇನು?:
ಪರೀಕ್ಷಾ ಕೇಂದ್ರ ದೂರವಾದರೆ ನಾವು ಪರೀಕ್ಷೆಗೆ ಹೋಗಿ ಕುಳಿತುಕೊಳ್ಳುವುದು ಕಷ್ಟ. ಆದಕಾರಣ ಗದಗ ಜಿಲ್ಲೆಯಲ್ಲೇ ಅಂಧ ಹಾಗೂ ಅಂಗವಿಕಲ ಮಕ್ಕಳ ಸ್ನೇಹಿಯಾಗಿರುವಂಥ ಕಟ್ಟಡದಲ್ಲಿ ಪರೀಕ್ಷಾ ಕೇಂದ್ರ ತೆರೆದು ಪರೀಕ್ಷೆ ನಡೆಸಬೇಕು ಎಂಬ ಬೇಡಿಕೆ ಮಕ್ಕಳದ್ದು.
ಒಟ್ಟಿನಲ್ಲಿ ಸಂಗೀತ ವಿವಿ ಸಂಗೀತ ಕಲಿಯುವ ಮಕ್ಕಳನ್ನು ಪ್ರೋತ್ಸಾಹಿಸುವ ಬದಲು ಈ ರೀತಿ ಸರ್ವಾಧಿಕಾರಿ ಧೋರಣೆಯಿಂದ ಸಂಗೀತ ಕಲೆಯನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶ.
ನಮ್ಮ ಸ್ಕೂಲಿನಿಂದಲೂ ಮನವಿ ಕೊಟ್ಟಿದ್ದೇವು. ಸಚಿವರು, ಶಾಸಕರು ಪರೀಕ್ಷಾ ಕೇಂದ್ರ ಬದಲಿಸಲು ಶ್ರಮಪಟ್ಟರು. ಆದರೆ ಪ್ರಯೋಜನವಾಗಲಿಲ್ಲ. ಇದೀಗ ಮತ್ತೊಮ್ಮೆ ಪರೀಕ್ಷಾ ದಿನಾಂಕ ನಿಗದಿಪಡಿಸಿ ಗದಗದಲ್ಲೇ ಕೇಂದ್ರ ತೆರೆದು ನಡೆಸಬೇಕು ಎಂದು ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ ಕಾರ್ಯದರ್ಶಿ ಶಿವಾನಂದ ಕೆಲೂರ ಹೇಳಿದರು.
;Resize=(128,128))
;Resize=(128,128))