ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸುವುದರಿಂದ ಎಲ್ಲಾ ರೈತ ಭಾಂದವರು ಸಹ ನೂತನ ತಳಿಗಳನ್ನು ಬೆಳೆದು ಹೆಚ್ಚಿನ ಇಳುವರಿ ಪಡೆಯುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಅನುಕೂಲವಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕ ವತಿಯಿಂದ ಮೈಸೂರು ತಾಲೂಕಿನ ಕಳಸ್ತವಾಡಿ ಗ್ರಾಮದಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯಲ್ಲಿ ಬೆಳೆದ ಕೆಎಂಪಿ-220 ತಳಿಯ ಭತ್ತದ ಬೆಳೆಯ ಕ್ಷೇತ್ರೋತ್ಸವವನ್ನು ಪ್ರಗತಿಪರ ರೈತ ಸೋಮಣ್ಣ ಅವರ ಜಮೀನಿನಲ್ಲಿ ಏರ್ಪಡಿಸಲಾಗಿತ್ತು.ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಸ್. ಗಣೇಶ್ ಪ್ರಸಾದ್ ಮಾತನಾಡಿ, ಕೃಷಿ ವಿವಿ ಅಭಿವೃದ್ದಿ ಪಡಿಸಿರುವ ಭತ್ತದ ತಳಿಗಳಲ್ಲಿ ಅಧಿಕ ಇಳುವರಿ ನೀಡುವ ತಳಿಗಳಾದ ಕೆಎಂಪಿ-225, ಆರ್.ಎನ್.ಆರ್-15048, ಕೆ.ಆರ್.ಎಚ್-2, ಕೆ.ಆರ್.ಎಚ್-4 ಹಾಗೂ ಸ್ಥಳೀಯ ತಳಿಗಳ ವಿಶೇಷ ಗುಣಗಳನ್ನು ತಿಳಿಸಿದರು.
ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸುವುದರಿಂದ ಎಲ್ಲಾ ರೈತ ಭಾಂದವರು ಸಹ ನೂತನ ತಳಿಗಳನ್ನು ಬೆಳೆದು ಹೆಚ್ಚಿನ ಇಳುವರಿ ಪಡೆಯುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಾತನಾಡಿ, ಕೃಷಿ ವಿವಿ ಅಭಿವೃದ್ದಿ ಪಡಿಸಿದ ಭತ್ತದ ತಳಿಯಾದ ಕೆಎಂಪಿ-220 ತಳಿಯ ಅಕ್ಕಿ ಕೆಂಪು ಬಣ್ಣದಾಗಿದ್ದು, ಭತ್ತದ ಕಾಳುಗಳು ಉದ್ದ ದಪ್ಪವಾಗಿದ್ದು, ಜ್ಯೋತಿ ಭತ್ತದ ಕಾಳುಗಳಿಗೆ ಹೋಲುತ್ತದೆ. ಬೆಂಕಿರೋಗಕ್ಕೆ ಸಾಧಾರಣ ಸಹಿಷ್ಣುತೆಯನ್ನು ಹೊಂದಿರುವುದರಿಂದ, ಬೆಂಕಿ ರೋಗಕ್ಕೆ ತುತ್ತಾಗುವ ಜ್ಯೋತಿ ತಳಿಯ ಬದಲು ಕೆಎಂಪಿ-220 ತಳಿಯನ್ನು ಬೆಳೆಯುವುದು. ಈ ತಳಿಯಲ್ಲಿ ಹೆಚ್ಚಿನ ಹುಲ್ಲು ಹಾಗೂ ಧಾನ್ಯದ ಇಳುವರಿಯನ್ನು ನೀಡುತ್ತದೆ. ಇದು ಮಧ್ಯಮಾವಧಿ ತಳಿಯಾಗಿದ್ದು, 125 ರಿಂದ 130 ಬಿತ್ತನೆಯಿಂದ ಕಟಾವಿನವರೆಗೆ ಕಾಲಾವಧಿ ತೆಗೆದುಕೊಳ್ಳುತ್ತದೆ ಎಂದು ತಿಳಿಸದರು.
ಕೃಷಿ ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್.ಮೌಲ್ಯಾ ಮಾತನಾಡಿ, ಸಾಮಾನ್ಯವಾಗಿ ಭತ್ತದ ಬೆಳೆಯಲ್ಲಿ ಕಂಡು ಬರುವ ಪ್ರಮುಖ ಕೀಟಗಳಾದ ಹಳದಿ ಕಾಂಡ ಕೊರಕ, ಗರಿಮಡಿಸುವ ಹುಳು, ಸುನಿ ನೊಣ, ಹಸಿರು ಮತ್ತು ಕಂದು ಗರಿ, ಜಿಗುಹುಳು ಮತ್ತು ಅವುಗಳ ನಿರ್ವಹಣಾ ಕ್ರಮಗಳ ಬಗ್ಗೆ ಹಾಗೂ ರೋಗಗಳಾದ ದುಂಡಾಣು ಅಂಗಮಾರಿ ರೋಗ, ಕಂದು ಚುಕ್ಕಿ ರೋಗ, ಊದು ಭತ್ತಿ ರೋಗ, ಬೆಂಕಿ ರೋಗ ಮತ್ತು ಕುತ್ತಿಗೆ ಬೆಂಕಿ ರೋಗ ನಿರ್ವಹಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಅವುಗಳ ನಿರ್ವಹಣಾ ಕ್ರಮಗಳ ಬಗ್ಗೆ ವಿವರಿಸಿದರು.ಗ್ರಾಮದ ಮುಖಂಡರಾದ ರಾಜು, ರಮೇಶ್, ರವಿ, ಕ್ಷೇತ್ರ ಸಹಾಯಕ ಧರಣೇಶ್ ಇದ್ದರು.