ಮೈಸೂರು ಆಕಾಶವಾಣಿ 90ರ ಹುಟ್ಟುಹಬ್ಬ ಆಚರಣೆ

| Published : Mar 09 2025, 01:51 AM IST

ಸಾರಾಂಶ

ಬೆಳಗ್ಗೆ ಕೋಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಸೈಕಲ್‌ಜಾಥಾದಿಂದ ಪ್ರಾರಂಭ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಆಕಾಶವಾಣಿಯು ತನ್ನ ಮನೆಯಂಗಳದಲ್ಲೇ ಶುಕ್ರವಾರ 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿತು.ಸವಿ ಸವಿ ನೆನಪಿನ ಚಿತ್ತಾರ ನೂರಾರು ಕೇಳುಗರ ಮನದಲ್ಲಿ ಮೂಡಿತು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಕೇಳುತ್ತಿದ್ದ ಅನೇಕ ಕೇಳುಗರು 90ರ ಸಂಭ್ರಮದಲ್ಲಿ ಆಕಾಶವಾಣಿಗೆ ಹೋದಾಗ ಅಲ್ಲಿನ ಕಾರ್ಯಕ್ರಮಗಳು ಬೆಳಗ್ಗೆಯಿಂದ ರಾತ್ರಿವರೆಗೂ ಕೂಡ ವರ್ಣಿಸಲಸದಳ ಅನುಭವ ನೀಡಿದವು.ಬೆಳಗ್ಗೆ ಕೋಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಸೈಕಲ್‌ಜಾಥಾದಿಂದ ಪ್ರಾರಂಭಗೊಂಡು, ಸಂಗೀತ ಸಂಜೆವರೆಗೂ ಕೂಡ ಕಾರ್ಯಕ್ರಮಗಳ ಮಹಾಪೂರ ನಡೆಯಿತು.ಕಾಳಿಹುಂಡಿ ಶಿವಕುಮಾರ್ ಸಂಗ್ರಹಿಸಿದ ಆಕಾಶವಾಣಿಯ ಚಿತ್ರ- ಲೇಖನಗಳ ಸ್ಪರ್ಧೆ ನಡೆಯಿತು. ಇನ್ನಿತರ ಮಳಿಗೆಗಳು ಕೂಡ ಅನೇಕ ಉಪಯುಕ್ತ ಸಲಹೆ ಸೂಚನೆ ನೀಡಿದವು.ಆಕಾಶವಾಣಿ ಕಟ್ಟಡವೆಲ್ಲ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿತ್ತು. ವೇದಿಕೆಯಲ್ಲಿ ತುಂಬಿ ಹೋಗಿದ್ದ ಸಬೀಕರು ಆಕಾಶವಾಣಿಯ 90ರ ಸಂಭ್ರಮದ ವಿಶೇಷವಾಗಿ ನೇರವಾಗಿ ಕಾರ್ಯಕ್ರಮ ಸವಿದರು.ಆಕಾಶವಾಣಿ ನವ- ವಧುವಿನಂತೆ ಸಿಂಗಾರಗೊಂಡಿತ್ತು. ಅಲ್ಲಿಗೆ ಬಂದಿದ್ದ ಎಲ್ಲರೂ ಕೂಡ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮರೆತು ಆಕಾಶವಾಣಿಯ ಹುಟ್ಟುಹಬ್ಬದ ಆಚರಣೆಯಲ್ಲಿ ಒಂದಾದರು. ವಿವಿಧ ಕಾಲೇಜು ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನದವರೆಗೂ ಕೂಡ ಸಾಗಿತು.ಕಾರ್ಯಕ್ರಮವನ್ನು ಆಕಾಶವಾಣಿಯ ಸುದ್ದಿ ವಿಭಾಗದ ಮಹಾನಿರ್ದೇಶಕ ಡಾ. ಪ್ರಜ್ಞಾ ಪಾಲೀವಾಲ್ ಗೌರ್ ಉದ್ಘಾಟಿಸಿದರು. ಇಂದಿಗೂ ಕೂಡ ಆಕಾಶವಾಣಿ ತನ್ನ ದಿನಚರಿಯನ್ನ ಬೆಳಗ್ಗೆ 5.55 ರಿಂದ ಪ್ರಾರಂಭಿಸಿ ರಾತ್ರಿ 11.10 ರವರೆಗೆ ಒಂದಲ್ಲ ಒಂದು ರೀತಿಯ ಸಂಗ್ರಹ ಯೋಗ್ಯ ಮಾಹಿತಿಯನ್ನು ಪ್ರಸಾರ ಮಾಡುತ್ತದೆ. ಕಾರ್ಯಕ್ರಮವನ್ನು ಕೇಳುತ್ತಾ, ಕೇಳುತ್ತಾ ನಮ್ಮ ಇನ್ನಿತರ ಕೆಲಸಗಳನ್ನು ಮಾಡಲು ಒಂದು ರೀತಿಯಲ್ಲಿ ಸ್ಫೂರ್ತಿಯ ಸೆಲೆಯಾಗಿದೆ ಎಂದರು.''''''''ಬಹುಜನ ಹಿತಾಯ:.... ಬಹುಜನ ಸುಖಾಯ....'''''''' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಆಕಾಶವಾಣಿಯು ಅಂದಿಗೂ.... ಇಂದಿಗೂ..... ಎಂದೆಂದಿಗೂ...... ಸಹ ನಿತ್ಯ ನೂತನ!. ಜಗದ ಜಗುಲಿ ಈ ಬಾನುಲಿ!. ಆಕಾಶವಾಣಿಯ ಜೊತೆಗೆ ಸುಮಧುರ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಆಕಾಶವಾಣಿಯ ಕೇಳುಗರ ಬಳಗವಾದ ಸಮುದ್ಯತಾ ಶ್ರೋತೃ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಸದಸ್ಯರೆಲ್ಲರೂ ಕೂಡ ಸಮವಸ್ತ್ರಧಾರಿಗಳಾಗಿ ಪಾಲ್ಗೊಂಡಿದ್ದರು.ತಂದೆ ಹಿರಿಯ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಮತ್ತು ಅವರ ಪುತ್ರ, ಆಕಾಶವಾಣಿಯ ಸಹಾಯಕ ನಿರ್ದೇಶಕ ಟಿ.ವಿ. ವಿದ್ಯಾಶಂಕರ್ ಇಬ್ಬರೂ ಒಂದೇ ವೇದಿಕೆಯಲ್ಲಿದ್ದರು.ಇವರೊಟ್ಟಿಗೆ ಸಹಾಯಕ ಅಭಿಯಂತರ ಪಿ. ಆನಂದನ್ ಇದ್ದರು. ಮುಖ್ಯ ಅತಿಥಿಯಾಗಿ ಮೈಸೂರು ಆಕಾಶವಾಣಿ ಉಪ ನಿರ್ದೇಶಕ ಎಸ್‌.ಎಸ್‌. ಉಮೇಶ್ ಭಾಗವಹಿಸಿದ್ದರು.ಆಕಾಶವಾಣಿ ಜತೆ ನಿಕಟ ಸಂಪರ್ಕ ಹೊಂದಿರುವ ಡಾ.ಎಂ.ವಿ. ಗೋಪಾಲಸ್ವಾಮಿ, ನಾ. ಕಸ್ತೂರಿ ಕುಟುಂಬಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಬಳಿಕ ಲಕ್ಷ್ಮಿ ನಾಗರಾಜ್ ಅವರ ಶಾಸ್ತ್ರೀಯ ಮತ್ತು ಸುಗಮ ಸಂಗೀತದ ಕಚೇರಿ, ಎಚ್.ಎಲ್. ಶಿವಶಂಕರಸ್ವಾಮಿ ಮತ್ತು ತಂಡದವರಿಂದ ಫ್ಯೂಷನ್ ಸಂಗೀತ ಕಾರ್ಯಕ್ರಮ ನಡೆಯಿತು.