ಸಾರಾಂಶ
ಎರಡು ದಿನಗಳ ಕಾಳು ಮೇಳದಲ್ಲಿ 100 ಹೆಚ್ಚಿನ ಕಾಳಿನ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಅಪರೂಪದ ರೆಕ್ಕೆ ಅವರೆ, ಅಕ್ಕಿ ಅವರೆ, ಚಪ್ಪರದವರೆ, ಚುಕ್ಕಿ ಶೇಂಗಾ, ತಮ್ಮೇ ಬೀಜ, ಕಪ್ಪು ಮತ್ತು ಹಸಿರು ಕಡಲೆ, ಕಪ್ಪು ಹುರುಳಿ ಮೊದಲಾದ ಕಾಳುಗಳು ಪ್ರದರ್ಶನಕ್ಕೆ ಬರಲಿವೆ. ಜಿಐ ಟ್ಯಾಗ್ ಪಡೆದ ಗುಲ್ಬರ್ಗಾ ತೊಗರಿ ಮತ್ತು ಉತ್ತರ ಕರ್ನಾಟಕದ ಜವಾರಿ ತೊಗರಿ ಪ್ರದರ್ಶನ ಹಾಗೂ ಮಾರಾಟಕ್ಕೆ ಬರುತ್ತಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ಆಹಾರ ಸಂಸ್ಕೃತಿಯ ಬೆನ್ನೆಲುಬಾದ ಬೇಳೆ ಕಾಳುಗಳು ನಮ್ಮ ಪರಂಪರೆಯನ್ನು ಶ್ರೀಮಂತಗೊಳಿಸುತ್ತವೆ. ಹಿಮಾಲಯದ ಬಣ್ಣ ಬಣ್ಣದ ಬೀನ್ಸ್ ಗಳಿಂದ ಹಿಡಿದು ಕರ್ನಾಟಕದ ಅವರೆ, ಮಡಕೆ ಕಾಳು ಮತ್ತು ಪಿಳ್ಳೆ ಪೆಸರು, ಪಶ್ಚಿಮ ಬಂಗಾಳದ ಮಸೂರ್, ಒಡಿಶಾದ ಹಲಸಂದೆ, ಮಹಾರಾಷ್ಟ್ರದ ತೊಗರಿ, ಆಂಧ್ರಪ್ರದೇಶದ ಹುರುಳಿಕಾಳು, ತಮಿಳುನಾಡಿನ ತಟ್ಟಪೈರು, ಮಧ್ಯಪ್ರದೇಶದ ಹೆಸರು, ಉತ್ತರಪ್ರದೇಶದ ಉದ್ದಿನಕಾಳು ಮತ್ತು ರಾಜಸ್ಥಾನದ ವಲಾರ್ ಪಾಪಡಿ ಮೊದಲಾದ ಕಾಳುಗಳು ಭಾರತದ ಬೀಜ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ.ಈ ಅಮೂಲ್ಯ ಪರಂಪರೆಯನ್ನು ಸಂಭ್ರಮಿಸಲು, ಸಹಜ ಸಮೃದ್ಧ, ವಿಶ್ವ ಅಗ್ರೋ ಟೆಕ್ ಮತ್ತು ಬಯೋ ಟೆಕ್ ಸಹಯೋಗದಲ್ಲಿ ಏ.5 ಮತ್ತು 6 ರಂದು ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಜವಾರಿ ಕಾಳು ಮೇಳ’ ವನ್ನು ಆಯೋಜಿಸಿದೆ.
ಎರಡು ದಿನಗಳ ಕಾಳು ಮೇಳದಲ್ಲಿ 100 ಹೆಚ್ಚಿನ ಕಾಳಿನ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಅಪರೂಪದ ರೆಕ್ಕೆ ಅವರೆ, ಅಕ್ಕಿ ಅವರೆ, ಚಪ್ಪರದವರೆ, ಚುಕ್ಕಿ ಶೇಂಗಾ, ತಮ್ಮೇ ಬೀಜ, ಕಪ್ಪು ಮತ್ತು ಹಸಿರು ಕಡಲೆ, ಕಪ್ಪು ಹುರುಳಿ ಮೊದಲಾದ ಕಾಳುಗಳು ಪ್ರದರ್ಶನಕ್ಕೆ ಬರಲಿವೆ. ಜಿಐ ಟ್ಯಾಗ್ ಪಡೆದ ಗುಲ್ಬರ್ಗಾ ತೊಗರಿ ಮತ್ತು ಉತ್ತರ ಕರ್ನಾಟಕದ ಜವಾರಿ ತೊಗರಿ ಪ್ರದರ್ಶನ ಹಾಗೂ ಮಾರಾಟಕ್ಕೆ ಬರುತ್ತಿವೆ.ರಾಜ್ಯದ ವಿವಿಧ ಭಾಗಗಳಿಂದ ರೈತರು ಮತ್ತು ಬೀಜ ಸಂರಕ್ಷಕರು ಜವಾರಿ ಕಾಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತರಲಿದ್ದಾರೆ. ಬೆಳಗಾವಿಯ ಬೀಜ ಸಂರಕ್ಷಕ ಶಂಕರ ಲಂಗಟಿ ಮೂತ್ರಕೋಶ ಕಲ್ಲು ಕರಗಿಸುವ ಔಷಧೀಯ ಗುಣಲಕ್ಷಣ ಹೊಂದಿರುವ ಕಪ್ಪು ಕಡಲೆ ಮತ್ತು ಅಪರೂಪದ ಹಸಿರು ಕಡಲೆ ತಳಿಯನ್ನು ತರಲಿದ್ದಾರೆ. ಧಾರವಾಡದ ದೇವಧಾನ್ಯ ರೈತ ಕಂಪನಿಯವರು ಕಪ್ಪು ಹುರುಳಿಕಾಳು ಮತ್ತು ಇತರ ಸ್ಥಳೀಯ ಬೇಳೆಗಳನ್ನು ತರಲಿದ್ದಾರೆ. ಹಾವೇರಿಯ ಮಹಿಳಾ ಗುಂಪು 18 ಪ್ರಕಾರದ ಕಡಲೆ ಕಾಯಿ ತಳಿಗಳನ್ನು ಪ್ರದರ್ಶಿಸಲಿದ್ದಾರೆ.
ಈ ಮೇಳವನ್ನು ಚಿತ್ರ ನಟಿ ಮತ್ತು ರಂಗಕರ್ಮಿ ಅಕ್ಷತಾ ಪಾಂಡವಪುರ ಉದ್ಘಾಟಿಸಲಿದ್ದಾರೆ. ಕಾಳು ಸಂರಕ್ಷಣೆಯ ಪ್ರಾತ್ಯಕ್ಷತೆ ಮತ್ತು ಬೇಳೆ ಮಾಡುವ ಯಂತ್ರಗಳ ಪರಿಚಯ ಇರುತ್ತದೆ. ಸಾವಯವ ಉತ್ಪನ್ನಗಳು, ಸಿರಿಧಾನ್ಯ, ದೇಸಿ ಬೀಜಗಳು, ಹಣ್ಣು- ತರಕಾರಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳು ಮಾರಾಟಕ್ಕೆ ಸಿಗುತ್ತವೆ. ಬಾಯಿ ಚಪ್ಪರಿಸಲು ಜವಾರಿ ಕಾಳಿನ ಅಡುಗೆ ಇರಲಿದೆ. ಹೆಚ್ಚಿನ ಮಾಹಿತಿಗೆ ಮೊ. 70900 09944 ಸಂಪರ್ಕಿಸಬಹುದು.