ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುನಂಜನಗೂಡು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಆದೇಶದ ಮೇರೆಗೆ ಬಿಜೆಪಿ ನಗರ ಸಮಿತಿ ಸದಸ್ಯರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವ 4 ಜನ ಬಿಜೆಪಿ ನಗರಸಭಾ ಸದಸ್ಯರ ಮನೆ ಬಾಗಿಲಿಗೆ ವಿಪ್ ಪತ್ರವನ್ನು ಅಂಟಿಸಿದರು.ಬಿಜೆಪಿ ನಗರಾಧ್ಯಕ್ಷ ಸಿದ್ದರಾಜು ಮಾತನಾಡಿ, ಸೆ. 3 ರಂದು ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಯೊಂದಿಗೆ ಪಕ್ಷದ ಆದೇಶದ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಪಿ. ದೇವು, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ರಿಯಾನಾ ಬಾನು ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ 1ನೇ ವಾರ್ಡ್ ನ ಸದಸ್ಯ ಗಿರೀಶ್, 12ನೇ ವಾರ್ಡ್ ನ ಸದಸ್ಯೆ ಗಾಯತ್ರಿ ಮುರುಗೇಶ್, 22ನೇ ವಾರ್ಡ್ನ ಸದಸ್ಯೆ ಮೀನಾಕ್ಷಿ ನಾಗರಾಜ್, 27ನೇ ವಾರ್ಡ್ನ ಸದಸ್ಯೆ ವಿಜಯಲಕ್ಷ್ಮಿ ಎಸ್. ಕುಮಾರ್ ಅವರು ಬಿಜೆಪಿ ಪಕ್ಷದ ಯಾವುದೇ ಸಭೆಗಾಗಲೀ, ದೂರವಾಣಿ ಸಂಪರ್ಕಕ್ಕಾಗಲಿ ಸಿಗದೆ ಕಾಂಗ್ರೆಸ್ ಪಕ್ಷದವರೊಂದಿಗೆ ಸೇರಿ ಪ್ರವಾಸ ಕೈಗೊಂಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ನಾಲ್ವರು ಸದಸ್ಯರಿಗೆ ಪಕ್ಷದ ಸೂಚನೆ ಹಾಗೂ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರ ಆದೇಶದ ಮೇರೆಗೆ ಈ ನಾಲ್ವರು ಸದಸ್ಯರಿಗೆ ವಿಪ್ ಜಾರಿಗೊಳಿಸಲಾಗಿದೆ. ಅವರು ಮನೆಯಲ್ಲೂ ಯಾರೂ ಲಭ್ಯವಾಗದ ಹಿನ್ನೆಲೆಯಲ್ಲಿ ಅವರ ಮನೆ ಬಾಗಿಲಿಗೆ ವಿಪ್ ಜಾರಿ ಆದೇಶದ ಪ್ರತಿಯನ್ನು ಅಂಟಿಸಲಾಗಿದೆ.ಈ ನಾಲ್ವರು ಸದಸ್ಯರೂ ಕೂಡ ಸೆ. 3 ರಂದು ನಗರಸಭೆಯಲ್ಲಿ ನಡೆಯುವ ಚುನಾವಣೆಯಲ್ಲಿ ಭಾಗವಹಿಸಿ ಪಕ್ಷ ಸೂಚಿಸಿದ ಅಭ್ಯರ್ಥಿ ಪರವಾಗಿ ಮತ ಚಲಾವಣೆ ಮಾಡಬೇಕು. ಇಲ್ಲವಾದಲ್ಲಿ ಪಕ್ಷ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ಕಾನೂನು ಕ್ರಮ ಜರುಗಿಸಲು ಮುಂದಾಗುತ್ತದೆ ಎಂದರು.ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ ಮಾತನಾಡಿ, ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ, ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕ್ಷೇತ್ರದಲ್ಲೂ ಅಧಿಕಾರ ಹಿಡಿಯಲಿದೆ. ನೀವು ಪಕ್ಷದ ಕಾರ್ಯಕರ್ತರು ಮತ್ತು ನಿಮ್ಮ ಶ್ರಮದಿಂದ ಈಗಾಗಲೇ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದೀರಿ, ಇನ್ನು ಉಳಿದಿರುವುದು ಕೇವಲ 1 ವರ್ಷ ಮಾತ್ರ ನೀವು ಹಣಕ್ಕಾಗಿ ಆಸೆ ಪಟ್ಟು ಪಕ್ಷದ ನಿಯಮಗಳಿಗೆ ವಿರುದ್ದವಾಗಿ ವಿಪ್ ಉಲ್ಲಂಘಿಸಿ ಬೇರೆ ಪಕ್ಷದ ಪರ ಮತ ಚಲಾಯಿಸಿದಲ್ಲಿ ಚುನಾವಣಾ ನೀತಿ ಸಂಹಿತೆ ಮತ್ತು ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ನಿಮ್ಮ ಮೇಲೆ ಕ್ರಮ ಕೈಗೊಂಡಲ್ಲಿ ಸದಸ್ಯತ್ವ ಅನರ್ಹಗೊಂಡು ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳದೆ ತಪ್ಪದೇ ಬಂದು ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ವೇಳೆ ಬಿಜೆಪಿ ಒಬಿಸಿ ಮೊರ್ಚಾ ಜಿಲ್ಲಾಧ್ಯಕ್ಷ ಬಾಲಚಂದ್ರು, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ಮುಖಂಡರಾದ ಡಾ. ಚಿದಾನಂದ, ರಾಘವೇಂದ್ರ, ಮಧುರಾಜ್, ರತ್ನಾಕರ, ಧನರಾಜ್ ಬೂಲ, ಮಹದೇವು, ನಗರಸಭಾ ಮಾಜಿ ಅಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ, ಸದಸ್ಯರಾದ ಮಹೇಶ್ ಅತ್ತಿಖಾನೆ, ಬಿಜೆಪಿ ಮಾಜಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ ಇದ್ದರು.