ಸಾರಾಂಶ
ನೂರಾರು ವಿದ್ಯಾರ್ಥಿಗಳು ಇಂದು ಪದವಿ ಸ್ವೀಕರಿಸಿ ಹೆಮ್ಮೆಯಿಂದ ಜೀವನದಲ್ಲಿ ಸ್ವತಂತ್ರ್ಯವಾಗಿ ಬದುಕಲು ಉತ್ಸುಹಕರಾಗಿದ್ದೀರಿ. ಆದರೆ ಸಮಾಜವು ಅವಕಾಶಗಳೊಂದಿಗೆ ಕಠಿಣ ಸವಾಲುಗಳನ್ನು ತಂದೊಡ್ಡುತ್ತವೆ ಎಂಬುದನ್ನು ಮರೆಯಬಾರದು
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳಿಗೆ ಶಿಕ್ಷಣ ಮುಗಿದ ನಂತರ ಸಹೃದಯತೆಯನ್ನು ಕಲಿಸದ ವಿದ್ಯೆ ವ್ಯರ್ಥ ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಡಿ. ಆನಂದ್ ತಿಳಿಸಿದರು.ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರಸ್ತುತ 2023- 24ನೇ ಸಾಲಿನ ಅಂತಿಮ ವರ್ಷದ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮವನ್ನು ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಅವರು ಉದ್ಘಾಟಿಸಿ ಮಾತನಾಡಿದರು.
ನೂರಾರು ವಿದ್ಯಾರ್ಥಿಗಳು ಇಂದು ಪದವಿ ಸ್ವೀಕರಿಸಿ ಹೆಮ್ಮೆಯಿಂದ ಜೀವನದಲ್ಲಿ ಸ್ವತಂತ್ರ್ಯವಾಗಿ ಬದುಕಲು ಉತ್ಸುಹಕರಾಗಿದ್ದೀರಿ. ಆದರೆ ಸಮಾಜವು ಅವಕಾಶಗಳೊಂದಿಗೆ ಕಠಿಣ ಸವಾಲುಗಳನ್ನು ತಂದೊಡ್ಡುತ್ತವೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.ಶಿಕ್ಷಣವು ನೀವು ಪಡೆಯುತ್ತಿರುವ ಪದವಿಗೆ ಹಾಗೂ ನಿಮ್ಮನ್ನು ನಿರ್ದಿಷ್ಟ ರೀತಿಯ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡಲು ಮಾತ್ರ ಸೀಮಿತವಾಗಿಲ್ಲ. ಅದು ನಿಜವಾದ ಅರ್ಥದಲ್ಲಿ ನಿಮ್ಮ ಸ್ವಂತ ಸಾಮರ್ಥ್ಯವನ್ನು ಮತ್ತು ನಿಮ್ಮ ಸಮಾಜವನ್ನು ಅರಿತುಕೊಳ್ಳಲು ಮುಖ್ಯ ಪಾತ್ರ ನಿರ್ವಹಿಸಬೇಕು ಎಂದರು.
ಸಮಾಜದಲ್ಲಿ ಎಲ್ಲಾ ವರ್ಗ ಒಳಗೊಂಡಂತೆ ಅನ್ಯೋನ್ಯತೆಯಿಂದ ಬದುಕುವುದು ವಿದ್ಯಾರ್ಥಿಯ ಜವಾಬ್ದಾರಿಯಾಗಿದ್ದು, ರಾಷ್ಟ್ರದ ಭವಿಷ್ಯಕ್ಕಾಗಿ ಅವರು ವ್ಯಕ್ತಿತ್ವ ಹಾಗೂ ರಾಷ್ಟ್ರದ ಹಿತಕ್ಕಾಗಿ ಎಲ್ಲವನ್ನು ತ್ಯಜಿಸಿ ಸಮರ್ಪಿತ ಭಾವ ಹೊಂದಿರಬೇಕು ಎಂದು ಅವರು ಕಿವಿಮಾತು ಹೇಳಿದರು.ಈ ವೇಳೆ 525 ವಿದ್ಯಾರ್ಥಿಗಳು ಪದವಿ ಮತ್ತು 199 ವಿದ್ಯಾರ್ಥಿಗಳು ಸ್ನಾತ್ತಕೋತರ ಪದವಿ ಸ್ವೀಕರಿಸಿದರು. 2023-2024 ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ 25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಸಂತ ಫಿಲೋಮಿನಾ ಕಾಲೇಜಿನ ರೆಕ್ಟರ್ ಡಾ. ಬರ್ನಾಡ್ ಪ್ರಕಾಶ್ ಬಾರ್ನಿಸ್, ಪ್ರಾಂಶುಪಾಲ ಡಾ. ರವಿ ಜೆಡಿ ಸಲ್ಡಾನ್ಹಾ, ಉಪ ಪ್ರಧಾನ ಆಡಳಿತ ಅಧಿಕಾರಿ ರೊನಾಲ್ಡ್ ಪ್ರಕಾಶ್ ಕುಟಿನಾ, ಉಪಪ್ರಾಂಶುಪಾಲ ನಾಗರಾಜ ಅರಸ್, ಐಕ್ಯೂಎಸಿ ಸಂಯೋಜಕ ಥಾಮಸ್ ಗುಣಶೀಲನ್ ಮೊದಲಾದವರು ಇದ್ದರು.