ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಅತ್ಯಗತ್ಯ

| Published : Jul 26 2025, 12:00 AM IST

ಸಾರಾಂಶ

ಜಯಲಕ್ಷ್ಮೀ ವಿಲಾಸ ಅರಮನೆ ಕೂಡಾ ಅಂತಹ ಐತಿಹಾಸಿಕ ನಿಧಿಯಾಗಿದೆ. ಇದು ವೈಭವಯುತ ಭೂತಕಾಲದ ಸಂಕೇತ.

ಕನ್ನಡಪ್ರಭ ವಾರ್ತೆ ಮೈಸೂರು

ಪಾರಂಪರಿಕ ಕಟ್ಟಡಗಳು ನಾಡಿನ ಹೆಗ್ಗುರುತಾಗಿದ್ದು, ಅವುಗಳನ್ನು ಸಂರಕ್ಷಣೆಯಿಂದ ಇತಿಹಾಸ, ಜ್ಞಾನ ಪರಂಪರೆಯೂ ಉಳಿಯುತ್ತದೆ ಎಂದು ಮುಂಬೈನ ಸಿಗ್ನೆಟ್ ಕ್ಯಾಪಿಟಲ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಹರೀಶ್ ಶಾ ತಿಳಿಸಿದರು.

ಕ್ರಾಫರ್ಡ್ ಭವನದಲ್ಲಿ ಮೈಸೂರು ವಿವಿ ಸಂಸ್ಥಾಪಾನಾ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು, ಪರಂಪರೆಯಿಂದ ಕಲಿಕೆ: ಜಯಲಕ್ಷ್ಮೀ ವಿಲಾಸ ಅರಮನೆ ವಸ್ತು ಸಂಗ್ರಹಾಲಯ ಮತ್ತು ಸಾಂಸ್ಕೃತಿಕ ವೇಗವರ್ಧಕವಾಗಿ ವಿಶ್ವವಿದ್ಯಾನಿಲಯ ಪಾತ್ರ ಕುರಿತು ಮಾತನಾಡಿದರು.

ಮಾನಸಗಂಗೋತ್ರಿ ಆವರಣದಲ್ಲಿರುವ ಜಯಲಕ್ಷ್ಮೀ ವಿಲಾಸ ಅರಮನೆ ಕೂಡಾ ಅಂತಹ ಐತಿಹಾಸಿಕ ನಿಧಿಯಾಗಿದೆ. ಇದು ವೈಭವಯುತ ಭೂತಕಾಲದ ಸಂಕೇತ. ಆದರೆ, ಇಂದು ವಸ್ತು ಸಂಗ್ರಹಾಲಯವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುಃಖಕರ. ಇದನ್ನು ಅದರ ಮೂಲ ಸ್ವರೂಪಕ್ಕೆ ಪುನಃ ಸ್ಥಾಪಿಸುವುದಲ್ಲದೆ, ಒಂದು ಮಹೋನ್ನತ ಸಾಂಸ್ಕೃತಿಕ ಕೇಂದ್ರವಾಗಿ ಮರುಸ್ಥಾಪಿಸಬೇಕು ಎಂದು ಅವರು ಹೇಳಿದರು.

ಇತಿಹಾಸವನ್ನು ಅರಿಯುಲು ಅನುಕೂಲವಾಗುವಂತಹ ಯೋಜನೆಗಳನ್ನು ಸಿದ್ಧಗೊಳಿಸಬೇಕು. ಇದರಿಂದ ಇತಿಹಾಸದ ಪುಸ್ತಕದ ಅಧ್ಯಯನಗಳಿಗಿಂತ ಪರಂಪರೆಯನ್ನು ಕಣ್ಣಾರೆ ನೋಡಿದಂತೆ ಆಗುತ್ತದೆ. ಇದು ಪುಸ್ತಕಗಳನ್ನು ಮೀರಿದ ಅನುಭವವನ್ನು ನೀಡುತ್ತದೆ ಎಂದರು.

ಭಾರತದ ಐತಿಹಾಸಿಕ ನಿರೂಪಣೆಯಲ್ಲಿ ಹೆಚ್ಚಾಗಿ ಉತ್ತರ ಭಾರತ, ದೆಹಲಿ ಮತ್ತು ಮೊಘಲರನ್ನು ಕುರಿತು ಹೆಚ್ಚು ಒತ್ತಿ ಹೇಳಾಗಿದೆ. ಆದರೆ, ದಖ್ಖನ್ ಪ್ರಸ್ಥಭೂಮಿಯ ಭಾಗದವಾಗ ದಕ್ಷಿಣ ಭಾರತದ ಶ್ರೀಮಂತ ಪರಂಪರೆಯನ್ನು ಕಡಿಮೆಯಾಗಿ ಪ್ರತಿನಿಧಿಸಲಾಗಿದೆ. ಹೀಗಾಗಿ, ಈ ಅಸಮತೋಲನವನ್ನು ನಿವಾರಣೆ ಮಾಡಲು ಬಹಮನಿಗಳು, ಚಾಲುಕ್ಯರು, ಒಡೆಯರುಗಳು ಮತ್ತು ಇತರ ದಕ್ಷಿಣ ರಾಜವಂಶಗಳ ಕೊಡುಗೆಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ಮೈಸೂರು ಎಂದರೆ ಈಗಾಗಲೇ ಅರಮನೆಗಳು, ದಸರಾ, ಹಬ್ಬಗಳು, ಮೈಸೂರು ಪಾಕ್ ಮತ್ತು ಮಸಾಲ ದೋಸೆಯಂತಹ ಪರಂಪರೆಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೂ ಮಿಗಿಲಾಗಿ ಇನ್ನೂ ಹೆಚ್ಚಿನ ಮಹತ್ವವಾದ ಐತಿಹಾಸಿಕ ಅಂಶಗಳನ್ನು ಬಹಿರಂಗಪಡಿಸಬೇಕಾಗಿದೆ. ದಖ್ಖನ್ನಿನ ಕಥೆಗಳಲ್ಲಿ ಈ ಕುರಿತು ಆಳವಾಗಿ ಕೆತ್ತಲ್ಪಟ್ಟಿವೆ. ಆದ್ದರಿಂದ ಅವುಗಳನ್ನು ಮುನ್ನೆಲೆಗೆ ತರಬೇಕಾಗಿರುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ ಇದ್ದರು.

----

ಕೋಟ್...

ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಯಶಸ್ಸಿನಿಂದ ಆಚೆಗೂ ಯೋಚಿಸಬೇಕು. ತನ್ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುವ ಮಾರ್ಗಗಳನ್ನು ಆರಿಸಿಕೊಳ್ಳಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಹವಾಮಾನ ವೈಪರೀತ್ಯ, ನಗರ ಮತ್ತು ಗ್ರಾಮೀಣ ಭಾರತದ ನಡುವೆ ಹೆಚ್ಚುತ್ತಿರುವ ಅಸಮಾನತೆಯಂತಹ ಸಮಸ್ಯೆಗಳು ಮನುಕುಲವನ್ನು ಕಾಡುತ್ತಿವೆ. ಇವುಗಳ ಮೇಲೆ ಅಧ್ಯಯನ ಮಾಡಿ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು.

- ಹರೀಶ್ ಶಾ, ಎಂಡಿ, ಸಿಗ್ನೆಟ್ ಕ್ಯಾಪಿಟಲ್ ಪ್ರೈ.ಲಿ. ಮುಂಬೈ

----

ಮೈಸೂರು ವಿವಿ ಹಳೆಯ ವಿದ್ಯಾರ್ಥಿಯಾದ ಹರೀಶ್ ಶಾ ಅವರು ಜಯಲಕ್ಷ್ಮೀ ವಿಲಾಸ ಅರಮನೆಯ ಪುನರುಜ್ಜೀವನಕ್ಕೆ 30 ಕೋಟಿ ರೂ. ನೀಡಿ ನೆರವಾಗಿದ್ದು, ವಿಶ್ವದಲ್ಲಿ ಇಷ್ಟು ದೊಡ್ಡ ಮೊತ್ತದ ನೆರವನ್ನು ಯಾವ ವಿಶ್ವವಿದ್ಯಾಲಯವೊಂದರ ಕಟ್ಟಡದ ಪುನರಜ್ಜೀವನಕ್ಕೆ ನೀಡಿಲ್ಲ. ಹರೀಶ್ ಶಾ ಅವರ ನೆರವಿನಲ್ಲಿ ವಿಶ್ವದಲ್ಲಿ ಬೇರೆಲ್ಲೂ ಇಲ್ಲದ ದೊಡ್ಡ ಜಾನಪದ ವಸ್ತು ಸಂಗ್ರಹಾಲಯವಿರುವ ಅರಮನೆಯ ಜೀರ್ಣೋದ್ಧಾರವಾಗುತ್ತಿದೆ.

- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ