ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪ್ರತಿಭಟನೆ

| Published : Nov 23 2024, 01:18 AM IST / Updated: Nov 23 2024, 07:18 AM IST

ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಭೂಮಿ, ನಮ್ಮ ಹಕ್ಕು ಅಭಿಯಾನ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್‌ ಖಾನ್‌ ವಿರುದ್ಧ ಘೋಷಣೆ ಕೂಗಿದ

  ಮೈಸೂರು : ರೈತರ ಜಮೀನು, ಸರ್ಕಾರಿ ಶಾಲೆ, ಸ್ಮಶಾನ, ಮಠದ ಭೂಮಿ ವಕ್ಫ್ ಬೋರ್ಡ್ ಆಸ್ತಿಯೆಂದು ನೋಟಿಸ್ ನೀಡುತ್ತಿರುವ ಕ್ರಮ ಖಂಡಿಸಿ ಹಾಗೂ ರಾಜ್ಯ ಸರ್ಕಾರದ ದ್ವಿಮುಖ ನಡೆ ವಿರೋಧಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ನಮ್ಮ ಭೂಮಿ, ನಮ್ಮ ಹಕ್ಕು ಅಭಿಯಾನ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್‌ ಖಾನ್‌ ವಿರುದ್ಧ ಘೋಷಣೆ ಕೂಗಿದರು. ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ರೈತರ ಭೂಮಿ, ಮಠ, ಸರ್ಕಾರಿ ಶಾಲೆಯ ಭೂಮಿಯನ್ನು ವಕ್ಫ್‌ ಆಸ್ತಿ ಎಂದು ನೋಂದಾಯಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ರೈತರನ್ನು ಕತ್ತಲೆಗೆ ದೂಡುತ್ತಿದೆ ಎಂದು ಅವರು ಆರೋಪಿಸಿದರು.

ಈ ವೇಳೆ ಶಾಸಕ ಟಿ.ಎಸ್‌. ಶ್ರೀವತ್ಸ ಮಾತನಾಡಿ, ಜನ ವಕ್ಫ್‌ ಹೆಸರು ಕೇಳಿದಾಗ ಜನರು ಹೆದರುವ ವಾತಾವರಣವನ್ನು ಜಮೀರ್ ಖಾನ್ ಸೃಷ್ಟಿಸಿದ್ದಾರೆ. ರಾಜ್ಯದ ಜನರಿಗೆ ಕಾಂಗ್ರೆಸ್‌ ಸರ್ಕಾರ ತೊಂದರೆ ನೀಡುತ್ತಿದ್ದು, ವಕ್ಫ್‌ ಹೆಸರಿನಲ್ಲಿ ಆಸ್ತಿ ನೋಂದಣಿ ಅದರ ಮುಂದುವರಿದ ಭಾಗ ಆಗಿದೆ. ಜನಸಾಮಾನ್ಯರಿಗೆ ಆಡಳಿತ ಪಕ್ಷ ನೀಡುತ್ತಿರುವ ನೋವಿಗೆ ಜನರೇ ಉತ್ತರ ನೀಡುತ್ತಾರೆ ಎಂದರು.

ಕೆ.ಆರ್. ಕ್ಷೇತ್ರ‌ದ ಶ್ರೀರಾಂಪುರ ವ್ಯಾಪ್ತಿಯ ಮುನೇಶ್ವರನಗರದಲ್ಲಿನ ಸರ್ವೆ ನಂಬರ್ 153 ರಲ್ಲಿ ವಕ್ಫ್‌ ಬೋರ್ಡ್ ಸುಮಾರು 12 ಎಕರೆ ಭೂಮಿಯನ್ನು ವಾಪಸ್ ಕೊಡುವಂತೆ ಕೇಳುತ್ತಿದೆ. ಇಲ್ಲಿ 173 ಮನೆಯಿದ್ದು, 800 ಜನ ವಾಸವಿದ್ದಾರೆ. ಹತ್ತಾರು ವರ್ಷಗಳಿಂದ ಜೀವನ ನಡೆಸುತ್ತಿರುವವರ ಭೂಮಿಗೆ ವಕ್ಫ್‌ ಬೋರ್ಡ್‌ ತೊಂದರೆ ನೀಡುತ್ತಿದ್ದು, ಮುನೇಶ್ವರನಗರದ ನಿವಾಸಿಗಳು ಖಾತೆ ಕಂದಾಯವನ್ನು ಕಟ್ಟಿದ್ದರೂ ಆತಂಕ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.

ಒಂದಿಂಚು ಜಾಗವನ್ನು ವಕ್ಫ್ ಬಿಡಲ್ಲ

ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಸರ್ಕಾರಿ ಶಾಲೆಗಳು, ಜಮೀನುಗಳನ್ನ ವಕ್ಫ್ ಆಸ್ತಿಯಾಗಿ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ಮೂಲ ಕಾರಣ ಸಚಿವ ಜಮೀರ್ ಅಹಮ್ಮದ್. ಅವರ ಬೆನ್ನಿಗೆ ನಿಂತಿರೋದು ಸಿಎಂ ಸಿದ್ದರಾಮಯ್ಯ. ಯಾವುದೇ ಕಾರಣಕ್ಕೂ ನಮ್ಮ ಒಂದಿಂಚು ಜಾಗವನ್ನು ವಕ್ಫ್ ಗೆ ನಾವು ಬಿಟ್ಟು ಕೊಡುವುದಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದು ಹೇಳಿದರು.

ಈ ಸರ್ಕಾರ ಯಾವಾಗ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಾಳಿನ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮಹತ್ತರ ಬದಲಾವಣೆ ಆಗುತ್ತದೆ. ಅವರದೇ ಸರ್ಕಾರದ ವಿರುದ್ಧ ಸಚಿವರು ಮುಗಿ ಬೀಳುತ್ತಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್. ರಘು, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ಮಾಜಿ ಮೇಯರ್‌ ಗಳಾದ ಶಿವಕುಮಾರ್, ಸಂದೇಶ್ ಸ್ವಾಮಿ, ಮುಖಂಡರಾದ ಹೇಮಂತ್ ಕುಮಾರ್ ಗೌಡ, ಕೇಬಲ್ ಮಹೇಶ್, ಮಂಜುನಾಥ್, ಗಿರಿಧರ್, ರಘು, ಹೇಮಾ ನಂದೀಶ್, ಸರ್ವಮಂಗಳಾ, ಮಿರ್ಲೆ ಶ್ರೀನಿವಾಸಗೌಡ, ಮಹೇಶ್ ರಾಜೇ ಅರಸ್, ರಾಕೇಶ್ ಗೌಡ ಮೊದಲಾದವರು ಇದ್ದರು.

ವಕ್ಫ್‌ ಬೋರ್ಡ್ ಕಾಯ್ದೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ. ‌ರೈತರ ಜಮೀನನ್ನು, ಮಠಗಳ ಧಾರ್ಮಿಕ ನಂಬಿಕೆಗಳನ್ನು ಹಾಳು ಮಾಡುತ್ತಿರುವ ಹಾಗೂ ಬೆದರಿಕೆಯೊಡ್ಡುತ್ತಿರುವ ವಕ್ಫ್‌ ನಡೆಗೆ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರ ಅಧಿವೇಶನದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿ ಕೇಂದ್ರಕ್ಕೆ ನಿರ್ಣಯ ಕಳುಹಿಸಬೇಕು.

- ಟಿ.ಎಸ್. ಶ್ರೀವತ್ಸ, ಶಾಸಕರು