ಸಾರಾಂಶ
ಶಿವಮೊಗ್ಗ : ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವ ಬಿಜೆಪಿ ಪಕ್ಷದ ಕುತಂತ್ರ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದುಳಿದ ವರ್ಗಗಳ ಒಕ್ಕೂಟ- ಅಹಿಂದ ಒಕ್ಕೂಟ- ಜನಪರ ಸಂಘಟನೆಗಳ ಒಕ್ಕೂಟ-ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಗುರುವಾರ ಧರಣಿ ನಡೆಯಿತು.
ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ, ಆದರೂ ಮೈಸೂರು ಪಾದಯಾತ್ರೆ ನಡೆಸುತ್ತಿರುವುದು ಸರ್ಕಾರ ಬೀಳಿಸುವ ಹುನ್ನಾರ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ನಿಗಮದ ಎಂಡಿ ಹಾಗೂ ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಲಾಗಿದೆ. ಹೀಗಿದ್ದರೂ ಸಿದ್ದರಾಮಯ್ಯ ಅವರನ್ನು ವಿನಾಕಾರಣ ಇದರಲ್ಲಿ ಸಿಲುಕಿಸುವ ಯತ್ನ ನಡೆದಿದೆ. ತಮ್ಮ ಮೇಲೆ ಆರೋಪ ಬಂದಾಗ ಸ್ವಂತ ಮುಖ್ಯ ಮಂತ್ರಿಗಳು ತನಿಖಾ ಆಯೋಗ ರಚಿಸಿದ್ದರೂ, ಬಿಜೆಪಿ ಯವರು ಸಲ್ಲದ ಷಡ್ಯಂತ್ರ ಮಾಡುತ್ತಿದ್ದಾರೆ.ದೇಶದ ಅತ್ಯುತ್ತಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸುದ್ದಿ ಸಂಸ್ಥೆಗಳೇ ವರದಿ ಮಾಡಿವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರ ಇಲ್ಲಿಗೆ ನಿಲ್ಲಬೇಕು. ಇಲ್ಲದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು. ಶೀಘ್ರದಲ್ಲಿಯೇ ರಾಜ್ಯಮಟ್ಟದ ಶೋಷಿತರ ಅಹಿಂದ ಮತ್ತು ಹಿಂದುಳಿದ ವರ್ಗದವರ ಎಚ್ಚರಿಕೆ ಸಮಾವೇಶ ಜೊತೆಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಬಿಜಿಪಿ ಮತ್ತು ಜೆಡಿಎಸ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎಸ್.ಪಿ.ಶೇಷಾದ್ರಿ, ಅಹಿಂದ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಇಕ್ಕೆರಿ ರಮೇಶ್ ಅಹಿಂದ ಜಿಲ್ಲಾದ್ಯಕ್ಷ ಚಂದ್ರಭೂಪಲ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ಪ್ರಮುಖರಾದ ಕಲಗೋಡು ರತ್ನಾಕರ್, ಕೆ.ರಂಗನಾಥ, ಶರತ್ ಮರಿಯಪ್ಪ, ಕೆ.ಪಿ.ಬಾಲಪ್ಪ, ಎಸ್.ಬಿ.ಆಶೋಕ್ ಕುಮಾರ್, ಮಮತಾ ಸಿಂಗ್, ಸ್ಟೇಲಾ ಮಾರ್ಟಿನ್, ಅಫ್ರೀದಿ, ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.