ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದೆ. ಮೂರು ದಿನಗಳಿಂದ ನಿಂತ ಕಬ್ಬು ತಂದಿರುವ ಲಾರಿಗಳು, ಟ್ರ್ಯಾಕ್ಟರ್, ಎತ್ತಿನಗಾಡಿಗಳು ನಿಂತಲ್ಲೇ ನಿಂತಿವೆ. ದಿನದಿಂದ ದಿನಕ್ಕೆ ಕಬ್ಬು ಒಣಗುತ್ತಿದೆ. ಹೇಳೋರಿಲ್ಲ, ಕೇಳೋರಿಲ್ಲ ಫ್ಯಾಕ್ಟರಿ ಮಾತ್ರ ನಿಂತಿದೆ.ಹಿಂದೆ ಕಾರ್ಖಾನೆಯಲ್ಲಿ ಎಲ್ಲಾ ಸೆಕ್ಷನ್‌ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಲವೊಂದಿತ್ತು. ಈಗ ಲೂಟಿ ಸೆಕ್ಷನ್ ಮಾತ್ರ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ. ದಿನಕ್ಕೆ ೩೦೦೦ ಟನ್ ಕಬ್ಬು ಅರೆಯಬೇಕಾದ ಜಾಗದಲ್ಲಿ ೮೦೦ರಿಂದ ೧೫೦೦ ಟನ್ ಕಬ್ಬು ಅರೆಯುವುದೇ ದೊಡ್ಡ ಸಾಹಸವಾಗಿದೆ. ಖಾಸಗಿ ಕಾರ್ಖಾನೆಗಳು ಈಗಾಗಲೇ ೨.೫೦ ಲಕ್ಷ ಕಬ್ಬು ನುರಿಸಿದ್ದರೆ, ಮೈಷುಗರ್ ಕೇವಲ ೫೮ ಸಾವಿರ ಟನ್ ಕಬ್ಬು ಅರೆಯುವಷ್ಟರಲ್ಲಿ ಸುಸ್ತೆದ್ದುಹೋಗಿದೆ ಎಂದು ರೈತರು ಕಿಡಿಕಾರಿದ್ದಾರೆ.
ರೈತ ಮುಖಂಡ ಇಂಡುವಾಳು ಚಂದ್ರಶೇಖರ್ ಮಾತನಾಡಿ, ರೈತರ ಕಬ್ಬನ್ನು ಕಾರ್ಖಾನೆ ಸರಿಯಾಗಿ ನುರಿಸುತ್ತಿಲ್ಲ. ಇಳುವರಿ ಕುಸಿತಗೊಂಡಿದೆ. ಅರೆದ ಕಬ್ಬಿನ ರಸವನ್ನೆಲ್ಲಾ ಸಕ್ಕರೆ ಮಾಡಿದ್ದಾರೋ, ಹೆಬ್ಬಳ್ಳಕ್ಕೆ ಹರಿಸಿದ್ದಾರೋ ಗೊತ್ತಿಲ್ಲ. ರೈತರು ಹಗಲು-ರಾತ್ರಿ ಕಷ್ಟಪಟ್ಟು ಕಬ್ಬು ಬೆಳೆದಿದ್ದಾರೆ. ಕಾರ್ಖಾನೆಯವರಿಗೆ ಅದನ್ನು ಅರೆಯುವ ಯೋಗ್ಯತೆ ಇಲ್ಲ. ರೈತರಾದ ನಾವು ನೀರಿಗೂ ಹೋರಾಟ ಮಾಡಬೇಕು. ಕಬ್ಬು ಅರೆಯುವುದಕ್ಕೂ ಹೋರಾಟ ಮಾಡಬೇಕು. ಎಂಥಾ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.ಆಡಳಿತ ಮಂಡಳಿಯವರಿಗೆ ಕಬ್ಬು ಅರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿಗಳೆದುರು ೨೦೦೦ದಿಂದ ೩೦೦೦ ಟನ್ ಕಬ್ಬು ಅರೆಯುತ್ತಿದ್ದೇವೆ ಅಂತಾರೆ. ಇಲ್ಲಿ ನೋಡಿದರೆ ೮೦೦, ೧೦೦೦, ೧೨೦೦ ಟನ್ ಕಬ್ಬು ಅರೆಯುತ್ತಿದ್ದಾರೆ. ಸಾಕಷ್ಟು ಕಬ್ಬಿದ್ದರೂ, ಸರ್ಕಾರ ಹಣ ಕೊಟ್ಟಿದ್ದರೂ ಏಕೆ ಕಬ್ಬು ಅರೆಯುತ್ತಿಲ್ಲ. ಕಾರ್ಖಾನೆಗೆ ಅಧ್ಯಕ್ಷರನ್ನು ಬೇರೆ ಮಾಡಿದಾರೆ. ಕಾರಿನಲ್ಲಿ ಓಡಾಡೋಕಾ ಅಧ್ಯಕ್ಷರನ್ನ ಮಾಡಿರೋದು ಎಂದು ಖಾರವಾಗಿ ಪ್ರಶ್ನಿಸಿದರು.
ನಿತ್ಯ ಕ್ರಮಬದ್ಧವಾಗಿ ಕಬ್ಬು ಅರೆಯದಿದ್ದರೂ ಚೈನ್ ಕ್ಯಾರಿಯರ್ ಜಾಮ್ ಆಗಿದೆ ಎಂಬ ಕಾರಣವೊಡ್ಡಿ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದೆ. ೫೮ ಸಾವಿರ ಟನ್ ಕಬ್ಬು ಅರೆಯುವುದಿರುವುದಕ್ಕೆ ಚೈನ್ ಕ್ಯಾರಿಯರ್ ಜಾಮ್ ಆಗಿದೆ. ಕ್ಲೀನಿಂಗ್ ಮಾಡ್ಬೇಕು ಅಂತಾರೆ. ಹಿಂದೆಲ್ಲಾ ಫೆಬ್ರವರಿವರೆಗೆ ಕಾರ್ಖಾನೆ ಕಬ್ಬು ಅರೆದಿಲ್ಲವೇ. ಮಾರ್ಚ್, ಏಪ್ರಿಲ್‌ನಲ್ಲೇ ಯಂತ್ರೋಪಕರಣಗಳ ದುರಸ್ತಿ ನಡೆಯುತ್ತಿತ್ತು. ಈಗ ಏಕೆ ನಿಯಮಾನುಸಾರ ಮಾಡುತ್ತಿಲ್ಲ. ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಯೇ ಎಂದು ಕಿಡಿಕಾರಿದರು.ಯಾರ್ಡ್‌ನಲ್ಲಿ ಕುಳಿತುಕೊಳ್ಳಲು ಮಲಗುವುದಕ್ಕೆ ಜಾಗ ಇಲ್ಲ, ಹೊಟ್ಟೆಗೆ ಊಟ ಇಲ್ಲ, ಕ್ಯಾಂಟೀನ್ ಇಲ್ಲ, ಸರಿಯಾದ ಊಟ ಇಲ್ಲ. ಈವರೆಗೆ ಒಂದು ಲಕ್ಷ ಕಬ್ಬು ಅರೆಯಲಾಗಿಲ್ಲ. ಇವರು ಒಪ್ಪಿಗೆ ಕಬ್ಬು ೪ ಲಕ್ಷ ಅರಿತಾರೆ ಅನ್ನೋ ಗ್ಯಾರಂಟಿ ಇಲ್ಲವೇ ಇಲ್ಲ. ಅನವಶ್ಯಕವಾಗಿ ಕೆಲವರನ್ನೆಲ್ಲಾ ಕೆಲಸಕ್ಕೆ ತೆಗೆದುಕೊಂಡು ಲಕ್ಷಾಂತರ ರು. ಸಂಬಳ ಕೊಡುತ್ತಿದ್ದಾರೆ. ಬಾಯ್ಲರ್, ಎಲೆಕ್ಟ್ರಿಕ್ ಇಂಜಿನಿಯರ್, ಚೀಫ್ ಕೆಮಿಸ್ಟ್, ವರ್ಕ್‌ಶಾಪ್ ಎಲ್ಲಾ ಚೆನ್ನಾಗಿ ನಡೆಯುತ್ತಿದ್ದವು. ಈಗ ಲೂಟಿ ಸೆಕ್ಷನ್‌ವೊಂದೇ ಚೆನ್ನಾಗಿ ನಡೀತಿರೋದು ಎಂದು ಟೀಕಿಸಿದರು.
ಕನ್ನಡಸೇನೆ ಮಂಜುನಾಥ್ ಮಾತನಾಡಿ, ಆರ್‌ಬಿ ಟೆಕ್ ಕಂಪನಿಯವರು ಕಳ್ಳರನ್ನೆಲ್ಲಾ ಕೆಲಸಕ್ಕೆ ತೆಗೊಂಡಿದಾರೆ. ಸರಿಯಾಗಿ ಕಬ್ಬು ಅರೆಯದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕಮಿಷನ್‌ಗೋಸ್ಕರ ಕೆಲಸ ಮಾಡುತ್ತಿದ್ದಾರೆ. ಇವರಿಂದ ಫ್ಯಾಕ್ಟರಿ ಉದ್ಧಾರ ಸಾಧ್ಯವೇ ಇಲ್ಲ ಎಂದು ನೇರವಾಗಿ ಆರೋಪಿಸಿದರು.ಮುಂದಿನ ನವೆಂಬರ್ ಡಿಸೆಂಬರ್ ವೇಳೆಗೆ ಕಾರ್ಖಾನೆ ಒಪ್ಪಿಗೆ ಕಬ್ಬನ್ನು ನುರಿಸಬೇಕು. ಮುಂದಿನ ತಿಂಗಳು ಬಹುತೇಕ ಕಬ್ಬನ್ನು ನುರಿಸಬೇಕು. ಏಕೆಂದರೆ, ಸೆಪ್ಟೆಂಬರ್ ಮುಗಿಯುತ್ತಿದ್ದಂತೆ ಉತ್ತರ ಕರ್ನಾಟಕದ ಕಾರ್ಖಾನೆಗಳು ಆರಂಭವಾಗುವುದರಿಂದ ಕಬ್ಬು ಕಡಿಯಲು ಬಂದಿರುವ ಕೂಲಿಯಾಳುಗಳು ವಾಪಸ್ ಊರಿಗೆ ಹೋಗಲಿದ್ದಾರೆ. ಅಕ್ಟೋಬರ್ ತಿಂಗಳಿಗೆ ಪೂರ್ಣವಾಗಿ ಹೋಗುವರು. ಯಾವುದೇ ಕಾರಣಕ್ಕೂ ಒಪ್ಪಿಗೆ ಕಬ್ಬನ್ನು ಅರೆಯುವುದಕ್ಕೆ ಇವರಿಂದ ಸಾಧ್ಯವಿಲ್ಲ. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು, ಅಧಿಕಾರಿಗಳೆಲ್ಲಾ ಅಸಮರ್ಥರು. ಇವರಿಗೆ ಕಬ್ಬು ನುರಿಸಲಾಗಲಿಲ್ಲವೆಂದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಆಗ್ರಹಪಡಿಸಿದರು.
ಪ್ರತಿಭಟನೆಯಲ್ಲಿ ಸುನಂದಾ ಜಯರಾಂ, ರೈತ ಯುವ ಮುಖಂಡ ಸಂತೋಷ್, ಶಿವಳ್ಳಿ ಚಂದ್ರಶೇಖರ್, ಎಂ.ಬಿ.ನಾಗಣ್ಣಗೌಡ, ಕನ್ನಡಸೇನೆ ಮಂಜುನಾಥ್, ಎಚ್.ಡಿ.ಜಯರಾಂ ಸೇರಿದಂತೆ ಇತರರಿದ್ದರು.ಸರ್ಕಾರ ಕೂಡಲೇ ಮಧ್ಯಪ್ರವೇಶಿಸಲಿಮೈಷುಗರ್ ಕಾರ್ಯಾಚರಣೆ ಅಸಮರ್ಪಕವಾಗಿರುವುದರಿಂದ ಕೂಡಲೇ ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು. ಸಕಾಲದಲ್ಲಿ ರೈತರ ಕಬ್ಬು ಅರೆಯುವುದಕ್ಕೆ ಕ್ರಮ ವಹಿಸಬೇಕು. ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಕಬ್ಬು ಅರೆಯುವುದಕ್ಕೆ ನಾವು ಅಸಮರ್ಥರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಬ್ಬು ಅರೆಯುವ ಗುತ್ತಿಗೆ ಪಡೆದ ಆರ್.ಬಿ.ಟೆಕ್ ಕಂಪನಿ ಏನು ಮಾಡುತ್ತಿದೆ. ಸಾಕಷ್ಟು ಕಬ್ಬು ಇದ್ದರೂ ಅರೆಯದೆ ಚೆಲ್ಲಾಟವಾಡುತ್ತಿರುವುದೇಕೆ.
- ಸುನಂದಾ ಜಯರಾಂ, ರೈತ ಮುಖಂಡರುಸಭೆ ಕರೆಯಲಿಲ್ಲ
ಆ.೧೫ರಂದು ಸರ್ಕಾರದ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸುವುದಕ್ಕೆ ಸಿದ್ಧರಾಗಿದ್ದೆವು. ಆ ಸಮಯದಲ್ಲಿ ಎಸ್‌ಪಿ ಅವರು ನಮ್ಮನ್ನು ಕರೆದು ಸಭೆ ನಡೆಸಲು ಏರ್ಪಾಡು ಮಾಡುವುದಾಗಿ ಹೇಳಿದರು. ಆನಂತರ ಸಭೆ ಕರೆಯಲೇ ಇಲ್ಲ. ಜಿಲ್ಲಾಧಿಕಾರಿಗಳೂ ಕಬ್ಬನ್ನು ಇನ್ನು ಮುಂದೆ ಸಮರ್ಪಕವಾಗಿ ಅರೆಯುತ್ತೇವೆ ಎಂದಿದ್ದರು. ಆನಂತರ ಕಾರ್ಖಾನೆಯಲ್ಲಿ ಕಬ್ಬಿನ ಹಾಲನ್ನೆಲ್ಲಾ ಹೆಬ್ಬಳ್ಳಕ್ಕೆ ಬಿಟ್ಟರು. ಅದನ್ನು ಪ್ರಶ್ನಿಸಿದಾಗ ಅದು ಕಬ್ಬಿನ ಹಾಲಲ್ಲ, ಬಿಸಿನೀರು ಎಂದು ವಾದಿಸಿದರು. ನಾವು ಅದನ್ನು ಸಂಗ್ರಹಿಸಿ ತಂದು ಡಿಸಿ ಎದುರಿಟ್ಟಾಗ ಮಾತೇ ಆಡಲಿಲ್ಲ.- ಶಿವಳ್ಳಿ ಚಂದ್ರಶೇಖರ್, ರೈತ ಮುಖಂಡ