ಕಳೆದ ಮೂರು ವರ್ಷಗಳಲ್ಲಿ ಕಾರ್ಖಾನೆ ಒಪ್ಪಿಗೆ ಮಾಡಿಕೊಂಡಷ್ಟು ಕಬ್ಬನ್ನು ಅರೆಯುವಲ್ಲಿ ವಿಫಲವಾಗಿದ್ದರೂ ಗುತ್ತಿಗೆ ಕಂಪನಿಗೆ ಒಪ್ಪಿಗೆ ಮಾಡಿಕೊಂಡಷ್ಟೂ ಕಬ್ಬಿಗೆ ಪೂರ್ಣ ಹಣವನ್ನು ಪಾವತಿಸಲಾಗಿದೆ. ಈ ಸಾಲಿನಲ್ಲಿ ಬೋಗಸ್ ಕಂಪನಿಯೊಂದಕ್ಕೆ ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿ ನೀಡಲಾಗಿತ್ತು. ಆ ಕಂಪನಿ ಬಳಿ ಅಧಿಕೃತ ಪರವಾನಗಿ ಇರಲಿಲ್ಲ.
- ಪುನಶ್ಚೇತನ ಹೆಸರಿನಲ್ಲಿ ಹಗಲು ದರೋಡೆ
- ಬೋಗಸ್ ಕಂಪನಿಗಳಿಗೆ ಕಾರ್ಖಾನೆ ಗುತ್ತಿಗೆ- ಕಂಪನಿ ಯಥಾಸ್ಥಿತಿ, ಪ್ರಭಾವಿಗಳ ಆರ್ಥಿಕ ಪ್ರಗತಿ
- ಸಚಿವರು, ಮೂವರು ಶಾಸಕರು ಮೌನ, ರೈತ ಮುಖಂಡರು ಗಪ್‌ಚುಪ್ ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಮಹಾರಾಜರು ನಿರ್ಮಿಸಿದ ಮೈಷುಗರ್ ಕಾರ್ಖಾನೆ ಅಧಿಕಾರಸ್ಥರ ಪಾಲಿಗೆ ಚಿನ್ನದ ಗಣಿಯಾಗಿದೆ. ಪುನಶ್ಚೇತನದ ಹೆಸರಿನಲ್ಲಿ ಹಣ ಲೂಟಿ ಹೊಡೆಯುವ ಕೇಂದ್ರವಾಗಿ ರೂಪಾಂತರಗೊಂಡಿದೆ. ಬೋಗಸ್ ಕಂಪನಿಗಳಿಗೆ ಕಾರ್ಖಾನೆಯನ್ನು ಗುತ್ತಿಗೆ ನೀಡಿ ಹಗಲು ದರೋಡೆ ನಡೆಸಲಾಗುತ್ತಿದೆ. ಕಾರ್ಖಾನೆ ನಷ್ಟದಲ್ಲೇ ಉಳಿದಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿದವರು ಸಿರಿವಂತರಾಗುತ್ತಿದ್ದಾರೆ. ಕಾರ್ಖಾನೆಯೊಳಗೆ ಅಕ್ರಮ-ಅವ್ಯವಹಾರ ತಾಂಡವವಾಡುತ್ತಿದ್ದರೂ ಸಚಿವರು, ಕಾರ್ಖಾನೆ ವ್ಯಾಪ್ತಿಗೆ ಬರುವ ಮೂವರು ಶಾಸಕರು ದಿವ್ಯಮೌನ ವಹಿಸಿದ್ದರೆ, ರೈತ ಮುಖಂಡರು ಗಪ್‌ಚುಪ್ ಆಗಿದ್ದಾರೆ.ನಿತ್ಯ ೫೦೦೦ ಟಿಸಿಡಿ ಕಬ್ಬು ನುರಿಸುವ ಪ್ರಯತ್ನ ಇದುವರೆಗೂ ಸಾಕಾರವಾಗಿಲ್ಲ. ಕಾರ್ಖಾನೆ ಪುನಶ್ಚೇತನದ ಹಾದಿಯಲ್ಲಿ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ. ಆದರೆ, ಸಕ್ಕರೆ ಕಾರ್ಖಾನೆಗೆ ಕಳೆದ ಮೂರು ವರ್ಷಗಳಲ್ಲಿ ೬೦ ಕೋಟಿ ಹಣ ಹರಿದುಬಂದಿದೆ. ಇದೀಗ ಬಾಯ್ಲರ್ ಹೌಸ್‌ಗೆ ೬೦ ಕೋಟಿ ರು. ಬಿಡುಗಡೆಯಾಗುವ ಹಂತದಲ್ಲಿದೆ. ಸಾಲದ ರೂಪದಲ್ಲಿ ಸರ್ಕಾರದಿಂದ ಕಾರ್ಖಾನೆ ಪುನಶ್ಚೇತನಕ್ಕೆ ಬರುವ ಹಣ ಮತ್ತೊಂದು ಕಡೆಯಿಂದ ಅಧಿಕಾರಸ್ಥರು, ಪ್ರಭಾವಿಗಳ ಪಾಲಾಗುತ್ತಿರುವುದು ವಿಪರ್ಯಾಸದ ಸಂಗತಿ.
ಕಳೆದ ಮೂರು ವರ್ಷಗಳಲ್ಲಿ ಕಾರ್ಖಾನೆ ಒಪ್ಪಿಗೆ ಮಾಡಿಕೊಂಡಷ್ಟು ಕಬ್ಬನ್ನು ಅರೆಯುವಲ್ಲಿ ವಿಫಲವಾಗಿದ್ದರೂ ಗುತ್ತಿಗೆ ಕಂಪನಿಗೆ ಒಪ್ಪಿಗೆ ಮಾಡಿಕೊಂಡಷ್ಟೂ ಕಬ್ಬಿಗೆ ಪೂರ್ಣ ಹಣವನ್ನು ಪಾವತಿಸಲಾಗಿದೆ. ಈ ಸಾಲಿನಲ್ಲಿ ಬೋಗಸ್ ಕಂಪನಿಯೊಂದಕ್ಕೆ ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿ ನೀಡಲಾಗಿತ್ತು. ಆ ಕಂಪನಿ ಬಳಿ ಅಧಿಕೃತ ಪರವಾನಗಿ ಇರಲಿಲ್ಲ. ಗುತ್ತಿಗೆ ಕಾರ್ಮಿಕನೊಬ್ಬ ಬಿಸಿನೀರು ಬಾವಿಗೆ ಬಿದ್ದು ಮೃತಪಟ್ಟಿದ್ದರಿಂದ ಶ್ರೇಯಾ ಮ್ಯಾನ್‌ಪವರ್ ಕನ್ಸಲ್ಟೆಂಟ್ ಕಂಪನಿ ಬಳಿ ಪರವಾನಗಿ ಇಲ್ಲದಿರುವುದು ಬಹಿರಂಗಗೊಂಡಿತು.ಈ ಶ್ರೇಯಾ ಮ್ಯಾನ್‌ಪವರ್ ಕನ್ಸಲ್ಟೆಂಟ್ ಕಂಪನಿಯೊಳಗೆ ಸ್ಥಳೀಯ ನಾಯಕ ಪರೋಕ್ಷವಾಗಿ ಪಾತ್ರ ವಹಿಸಿದ್ದು, ಕಾರ್ಖಾನೆಯ ಬಿ-ಮಿಲ್ ಸೇರಿದಂತೆ ಅನುಪಯುಕ್ತ ಕಬ್ಬಿಣ ಸಾಮಗ್ರಿಗಳ ಮಾರಾಟ ಮಾಡಿ ಲಾಭವನ್ನು ಜೇಬಿಗಿಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಿ-ಮಿಲ್ ಅನುಪಯುಕ್ತ ಎಂದಷ್ಟೇ ಪಿಇಎಸ್ ತಾಂತ್ರಿಕ ಕಾಲೇಜಿನಿಂದ ವರದಿ ಪಡೆದುಕೊಂಡಿದ್ದಾರೆಯೇ ವಿನಃ ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯಿಂದ ನಿಖರವಾಗಿ ಬಿ-ಮಿಲ್‌ನ್ನು ತೂಕ ಮಾಡಿಸಿ ಅದರಲ್ಲಿ ಕಬ್ಬಿಣ, ಹಿತ್ತಾಳೆ ಹಾಗೂ ಉಕ್ಕು ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಪಡೆದುಕೊಳ್ಳದೆ ಮಾರಾಟ ಮಾಡಲಾಗಿದೆ. ಜೊತೆಗೆ ಬಿ-ಮಿಲ್‌ನ್ನು ಮಾರಾಟಕ್ಕೆ ಆಡಳಿತ ಮಂಡಳಿ ನಿರ್ಣಯ ಮಾಡಿದೆಯೇ ವಿನಃ ಸರ್ಕಾರದ ಅನುಮತಿ ಪಡೆದುಕೊಂಡಿಲ್ಲ. ಈ ಸಂಬಂಧ ಸರ್ಕಾರ ಕಾರ್ಖಾನೆಗೆ ನೋಟಿಸ್ ಜಾರಿ ಮಾಡಿದೆ.
ಕಾರ್ಖಾನೆಗೆ ಬರುವ ಅಧಿಕಾರಸ್ಥರೆಲ್ಲರೂ ಅವಧಿ ಮುಗಿಯುವಷ್ಟರಲ್ಲಿ ಆರ್ಥಿಕವಾಗಿ ಸದೃಢತೆ ಸಾಧಿಸುತ್ತಿದ್ದರೆ ಕಾರ್ಖಾನೆಗೆ ಸರ್ಕಾರ ಕೋಟಿಗಟ್ಟಲೆ ಹಣ ಸುರಿದರೂ ಕೃಶವಾಗುತ್ತಲೇ ಇದೆ. ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚದೆ ಅರೆ ಜೀವ ಸ್ಥಿತಿಯಲ್ಲೇ ಉಳಿಸಿ ಸ್ವಹಿತಾಸಕ್ತಿ ಸಾಧಿಸಿಕೊಳ್ಳುವುದು ಹಲವರ ಕಾಯಕವಾಗಿದೆ. ಇದು ಮೈಸೂರು ಮಹಾರಾಜರು ಕೊಡುಗೆಯಾಗಿ ನೀಡಿದ ಕಾರ್ಖಾನೆಯ ದೊಡ್ಡ ದುರಂತ.ಆರೋಪಗಳ ಕುರಿತು ತುಟಿಬಿಚ್ಚದ ಜನಪ್ರತಿನಿಧಿಗಳು
ಕಾರ್ಖಾನೆಯೊಳಗಿನ ಅಕ್ರಮ-ಅವ್ಯವಹಾರಗಳ ಕುರಿತು ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಅದರ ಬಗ್ಗೆ ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಕಾರ್ಖಾನೆ ವ್ಯಾಪ್ತಿಗೆ ಸೇರಿದ ಮೂವರು ಶಾಸಕರು ಮೌನವಾಗಿದ್ದಾರೆ. ಒಬ್ಬರೇ ಒಬ್ಬರು ಅದರ ಬಗ್ಗೆ ಮಾತನಾಡುತ್ತಿಲ್ಲ. ಇನ್ನು ಜೆಡಿಎಸ್-ಬಿಜೆಪಿಯವರೂ ಕಾರ್ಖಾನೆ ದುಸ್ಥಿತಿಯ ಕುರಿತಂತೆ ಧ್ವನಿಯನ್ನೇ ಕಳೆದುಕೊಂಡಿದ್ದಾರೆ. ಕೆಲವೊಂದು ಸಂಘಟನೆಯವರು ಮಾತ್ರ ದನಿ ಎತ್ತುತ್ತಿದ್ದರೂ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಷ್ಟೊಂದು ಪರಿಣಾಮಕಾರಿ ಪ್ರಭಾವವನ್ನು ಬೀರದಂತಾಗಿದೆ.ರೈತ ಮುಖಂಡರ ಹೋರಾಟದ ಬಗ್ಗೆ ಅನುಮಾನ
ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕೆಂದು ಹಠ ತೊಟ್ಟು ಹೋರಾಟ ನಡೆಸಿದ ರೈತ ಮುಖಂಡರಂತೂ ಗಪ್‌ಚುಪ್ ಆಗಿದ್ದಾರೆ. ಕಾರ್ಖಾನೆ ವಿರುದ್ಧದ ಆರೋಪಗಳ ಬಗ್ಗ ಮಾತನಾಡುವ ಧೈರ್ಯವನ್ನೇ ಪ್ರದರ್ಶಿಸುತ್ತಿಲ್ಲ. ಕಾರ್ಖಾನೆ ಉಳಿವಿಗೆ ತೋರಿಸಿದ ಮುತುವರ್ಜಿ, ಕಾಳಜಿಯನ್ನು ಕಂಪನಿಯೊಳಗೆ ನಡೆಯುತ್ತಿದೆ ಎನ್ನಲಾದ ಅಕ್ರಮ-ಅವ್ಯವಹಾರಗಳ ಕುರಿತಂತೆ ಹೋರಾಟಕ್ಕೆ ಮುಂದಾಗದಿರುವುದು ಅವರ ಹೋರಾಟವನ್ನೇ ಅನುಮಾನದಿಂದ ನೋಡುವಂತಾಗಿದೆ.ಕಾರ್ಖಾನೆ ಖಾಸಗೀಕರಣಗೊಂಡಿದ್ದರೆ ರೈತರಿಗೆ ಸಕಾಲದಲ್ಲಿ ಕಬ್ಬು ಅರೆದು ಹಣ ಬಟಾವಡೆಯೂ ಆಗುತ್ತಿತ್ತು. ಕಾರ್ಖಾನೆಯನ್ನು ಪ್ರಭಾವಿಗಳು, ಅಧಿಕಾರಸ್ಥರು ಕೊಳ್ಳೆ ಹೊಡೆದರೂ, ಪ್ರಗತಿಯನ್ನು ಕಾಣದಿದ್ದರೂ ಅದು ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕೆಂಬ ಆಸೆ ಅವರಲ್ಲಿರುವುದರ ಹಿಂದಿನ ಮರ್ಮ ಮಾತ್ರ ತಿಳಿಯದಂತಾಗಿದೆ.
ಸರ್ಕಾರ ರಚಿಸಿದ ಸಮಿತಿಗೆ ಬೆಲೆ ಇಲ್ಲಮೈಷುಗರ್ ಕಾರ್ಖಾನೆಯ ಅನುಪಯುಕ್ತ ವಸ್ತುಗಳ ಹರಾಜಿಗೆ ಸಂಬಂಧಿಸಿದಂತೆ ಟೆಂಡರ್ ತಡೆಹಿಡಿಯುವ ಹಾಗೂ ಇತರೆ ದೂರಿನ ಸಂಬಂಧ ಪರಿಶೀಲಿಸಿ ವರದಿ ಸಲ್ಲಿಸಲು ಸರ್ಕಾರ ಮುಡಾ ಆಯುಕ್ತ ಕೃಷ್ಣಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ಸಂಬಂಧ ಚರ್ಚಿಸಲು ಎಲ್ಲಾ ಅಗತ್ಯ ಮಾಹಿತಿ-ಕಡತಗಳೊಂದಿಗೆ ಬರುವಂತೆ ಕಾರ್ಖಾನೆ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು, ಸಮಿತಿಯ ಅಗತ್ಯವಿಲ್ಲವೆಂದು ಸರ್ಕಾರದಿಂದ ಮಾಹಿತಿ ಬಂದಿದೆ. ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದ್ದಾಗಿದ್ದು ಎಲ್ಲವನ್ನೂ ಪಾರದರ್ಶಕವಾಗಿ ಮಾರಾಟ ಮಾಡಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಎಲ್ಲಾ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ನೀಡುವುದಾಗಿ ಪತ್ರ ಬರೆದಿದ್ದಾರೆ.