‘ವಿದ್ಯಾರ್ಥಿಗಳು ನೀಡುವ ಈ ಗೌರವವೇ ನಮಗೆ ನಿಜವಾದ ಆಸ್ತಿ. ನಮಗೆ ಹಣ, ಸಂಪತ್ತಿಗಿಂತ ಶಿಷ್ಯರ ಈ ಪ್ರೀತಿಯೇ ಮುಖ್ಯ. ನಾವು ಉಪನ್ಯಾಸಕರಾಗಿದ್ದಕ್ಕೆ ಇಂದು ಸಾರ್ಥಕತೆ ಸಿಕ್ಕಂತಾಗಿದೆ’.

ಮೈಸೂರು: ಕಾಲದ ಚಕ್ರ ಉರುಳಿ ಬರೋಬ್ಬರಿ 18 ವರ್ಷಗಳು ಕಳೆದಿರಬಹುದು, ಆದರೆ ಅಂದು ತರಗತಿಯ ಕೋಣೆಯಲ್ಲಿ ಮೂಡಿದ ಸ್ನೇಹ ಮತ್ತು ಗುರುವಿನ ಮೇಲಿನ ಗೌರವ ಮಾತ್ರ ಕಿಂಚಿತ್ತೂ ಮಾಸಿಲ್ಲ ಎಂಬುದನ್ನು ಮೈಸೂರಿನ ಲಕ್ಷ್ಮೀಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ.

ನಗರದ ಬಲ್ಲಾಳ್ ಸರ್ಕಲ್ ಬಳಿ ಇರುವ ಲಕ್ಷ್ಮೀಪುರಂ ಪಿಯು ಕಾಲೇಜಿನ 2008ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶನಿವಾರ ಹಿನಕಲ್ ಬಳಿಯಿರುವ ‘ಗ್ರ್ಯಾಂಡ್ ಮೌರ್ಯ’ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ‘ಗುರುವಂದನೆ ಮತ್ತು ಸ್ನೇಹ ಸಮ್ಮಿಲನ’ ಕಾರ್ಯಕ್ರಮವು ಅಪರೂಪದ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. 18 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಉಪನ್ಯಾಸಕರು ಹಾಗೂ ಸಹಪಾಠಿಗಳು ಮತ್ತೆ ಒಂದೆಡೆ ನೆರೆದು, ತಮ್ಮ ಪಿಯುಸಿ ದಿನಗಳ ಮಧುರ ನೆನಪುಗಳನ್ನು ಮೆಲುಕು ಹಾಕಿದರು.

ವಿದ್ಯಾರ್ಥಿಗಳ ಇಂದಿನ ಸಾಧನೆ ಮತ್ತು ಉನ್ನತ ಸ್ಥಾನಗಳನ್ನು ಕಂಡು ಉಪನ್ಯಾಸಕರು ಹೆಮ್ಮೆಯಿಂದ ಹರಸಿದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಭೌತಶಾಸ್ತ್ರ ಉಪನ್ಯಾಸಕ ಎಲ್‌.ಸಿ. ಶಂಕರ್ ‘ಇಷ್ಟು ವರ್ಷಗಳ ನಂತರವೂ ನಮ್ಮನ್ನು ನೆನಪಿನಲ್ಲಿಟ್ಟುಕೊಂಡು, ಪ್ರೀತಿಯಿಂದ ಆಹ್ವಾನಿಸಿ ಗೌರವ ಸಲ್ಲಿಸಿದ್ದು ಮನಸ್ಸಿಗೆ ತುಂಬ ಖುಷಿ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ನಿವೃತ್ತ ಡಿಡಿಪಿಯು ಚಿದಾನಂದ ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ನೀಡುವ ಈ ಗೌರವವೇ ನಮಗೆ ನಿಜವಾದ ಆಸ್ತಿ. ನಮಗೆ ಹಣ, ಸಂಪತ್ತಿಗಿಂತ ಶಿಷ್ಯರ ಈ ಪ್ರೀತಿಯೇ ಮುಖ್ಯ. ನಾವು ಉಪನ್ಯಾಸಕರಾಗಿದ್ದಕ್ಕೆ ಇಂದು ಸಾರ್ಥಕತೆ ಸಿಕ್ಕಂತಾಗಿದೆ’ ಎಂದರು.

ಇದೇ ವೇಳೆ ನಿವೃತ್ತ ಪ್ರಾಂಶುಪಾಲರಾದ ನವೀನ ಮಾತನಾಡಿ, ಲಕ್ಷ್ಮೀಪುರಂ ಕಾಲೇಜಿನೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ನೆನೆದು ಭಾವುಕರಾದರು. ಗಣಿತಶಾಸ್ತ್ರದ ಉಪನ್ಯಾಸಕಿ ರೇಖಾ ಮಾತನಾಡಿ, ಸಮಾಜದಲ್ಲಿ ಉತ್ತಮವಾದ ವ್ಯಕ್ತಿಗಳಾಗಿ ನನ್ನ ವಿದ್ಯಾರ್ಥಿಗಳು ರೂಪುಗೊಂಡಿದ್ದು ನನ್ನ ವೃತ್ತಿಗೆ ಸಿಕ್ಕಿದ ಸಾರ್ಥಕತೆ ಎಂದರು.

ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಹಾಲಿ ಪ್ರಾಂಶುಪಾಲ ತಿಮ್ಮೇಗೌಡರು ಮಾತನಾಡಿ, ‘ಗುರು ಪರಂಪರೆಯು ಮುಂದಿನ ಪೀಳಿಗೆಗೂ ವ್ಯಾಪಿಸಬೇಕು. ಸಮಾಜಕ್ಕೆ ಇದೊಂದು ಅತ್ಯುತ್ತಮ ಮತ್ತು ಮಾದರಿ ಕಾರ್ಯಕ್ರಮ. ಇಂತಹ ಅದ್ಭುತ ಗೌರವವನ್ನು ನಮಗೆ ನೀಡಿ ಮನಸ್ಸು ತುಂಬಿಸಿದ್ದೀರಾ. ನೀವೆಲ್ಲರೂ ಜೀವನದಲ್ಲಿ ಇನ್ನೂ ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ’ ಎಂದು ಹರಸಿದರು.

ಸನ್ಮಾನದ ಬಳಿಕ ತಿಮ್ಮೇಗೌಡರು 18 ವರ್ಷಗಳ ಹಿಂದೆ ತಾವು ಮಾಡುತ್ತಿದ್ದ ಪಾಠದ ಶೈಲಿಯನ್ನು ಮರುಪ್ರಸಾರ ಮಾಡುವ ಮೂಲಕ ಹಳೆಯ ತರಗತಿಯ ದಿನಗಳನ್ನು ಮರುಸೃಷ್ಟಿಸಿದ್ದು ವಿಶೇಷವಾಗಿತ್ತು.

ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ವೇದಿಕೆಗೆ ಬಂದು ತಮ್ಮ ಕಿರುಪರಿಚಯ ಮಾಡಿಕೊಳ್ಳುತ್ತಾ, ಅಂದಿನ ತುಂಟಾಟ, ತರಗತಿಯ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟಾಗ ಇಡೀ ಸಭಾಂಗಣದಲ್ಲಿ ನಗೆಯ ಅಲೆ ಎದ್ದಿತು. ಬಳಿಕ ಎಲ್ಲರೂ ಒಟ್ಟಾಗಿ ಮಧ್ಯಾಹ್ನದ ಔತಣಕೂಟದಲ್ಲಿ ಭಾಗಿಯಾಗಿ ಹರಟೆ ಹೊಡೆಯುತ್ತಾ ಸಂತೋಷಪಟ್ಟರು.

ಕಾರ್ಯಕ್ರಮದಲ್ಲಿ ಲಕ್ಷ್ಮೀಪುರಂ ಕಾಲೇಜಿನ ಎಫ್ಡಿಎ ನೌಕರ ನಂದೀಶ್, ಹಳೇ ವಿದ್ಯಾರ್ಥಿಗಳಾದ ಪತ್ರಕರ್ತ ಮಹೇಶ್ ಕೆಬ್ಬೆ, ನವೀನ್, ವಿನೋದ್, ವಿಜಯ್ ಬಿ.ಕೆ., ಮಹೇಶ್, ಹರೀಶ್, ಚಾಮರಾಜ, ಮಂಜುನಾಥ್, ಶ್ರೀಧರ್, ಹೇಮ, ಅರುಣಾಕ್ಷಿ, ರಾಮಚಂದ್ರ, ಉಮೇಶ್ ಸೇರಿದಂತೆ ಹಲವು ಸಹಪಾಠಿಗಳು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.