ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೈಸೂರು ಮಾದರಿಯ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.

ರಾಮಮೂರ್ತಿ ನವಲಿ

ಗಂಗಾವತಿ: ತಾಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೈಸೂರು ಮಾದರಿಯ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ಹೇಮಗುಡ್ಡದ ದುರ್ಗಾಪರಮೇಶ್ವರಿ ದೇಗುಲದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ನೇತೃತ್ವದಲ್ಲಿ ದಸರಾ ಮಹೋತ್ಸವ ಜರುಗುತ್ತಾ ಬಂದಿದೆ.

ಹೇಮಗುಡ್ಡದಲ್ಲಿ ಕಳೆದ 42 ವರ್ಷಗಳಿಂದ ನವರಾತ್ರಿ ಉತ್ಸವ ಜರುಗುತ್ತಾ ಬಂದಿದ್ದು, 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿವೆ. ನವರಾತ್ರಿಯ ಪ್ರತಿಪದೆಯ ದಿನವಾಗಿರುವ ಭಾನುವಾರ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ದಿನ ನಿತ್ಯ ವಿವಿಧ ಹೋಮಗಳು ಜರುಗಲಿದ್ದು, ಸಹಸ್ರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆಯುತ್ತಿದ್ದಾರೆ. ದಿನ ನಿತ್ಯ ಸಾಯಂಕಾಲ ದೇವಿಯ ರಥೋತ್ಸವ ಜರುಗಲಿದೆ.

ಮೈಸೂರು ಮಾದರಿಯಲ್ಲಿ ದಸರಾ ಸಂಭ್ರಮ ಜರುಗುತ್ತಿದ್ದು, ಇದಕ್ಕೆ ಸಾಕ್ಷಿಯಂತೆ ವಿಜಯ ದಶಮಿ ದಿನದಂದು ಆನೆಯ ಮೇಲೆ ಅಂಬಾರಿ ಸಿಂಗರಿಸಿ ದೇವಿಯ ಮೆರವಣಿಗೆ ಜರುಗಲಿದೆ. ಆನೆಗಳು, ರಥ, ಕುದರೆಗಳು ಹಾಗೂ ಸಾಂಸ್ಕ್ರತಿಕ ಪ್ರತೀಕವಾಗಿರುವ ಡೊಳ್ಳು ಕುಣಿತ, ಕುದುರೆ ಕುಣಿತ, ನಂದಿ ಕೋಲು, ಹೆಜ್ಜೆ ಮೇಳ ಸೇರಿದಂತೆ ವಿವಿಧ ವೈವಿಧ್ಯಮಯ ಆಕರ್ಷಕ ಕಲಾ ತಂಡಗಳು ಭಾಗವಹಿಸಲಿವೆ. ಸುಮಾರು 4 ಕಿಮೀ ದೂರದ ವರೆಗೆ ಮೆರವಣಿಗೆ ಜರುಗಲಿದ್ದು, ಈ ದಸರಾ ಸಂಭ್ರಮಕ್ಕೆ ವಿವಿಧ ಜಿಲ್ಲೆಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಆಗಮಿಸುತ್ತಿದ್ದಾರೆ.

ಸಾಮೂಹಿಕ ವಿವಾಹ: 42 ವರ್ಷಗಳಿಂದ ಹೇಮಗುಡ್ಡದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಜಿ ಸಂಸದ ಎಚ್.ಜಿ. ರಾಮುಲು ಕುಟುಂಬ ಏರ್ಪಡಿಸುತ್ತಾ ಬಂದಿದೆ. ವಿವಾಹ ಕಾರ್ಯಕ್ರಮದಲ್ಲಿ ವಧು, ವರರಿಗೆ ವಸ್ತ್ರಗಳು, ಮಾಂಗಲ್ಯ ಮತ್ತು ಅತಿಥಿಗಳಿಗೆ ಊಟದ ವ್ಯವಸ್ಥೆಯಲ್ಲಿ ಎಚ್.ಜಿ. ರಾಮುಲು ಕುಟುಂಬ ಕೈಗೊಳ್ಳುತ್ತಾ ಬಂದಿದೆ. ಇಲ್ಲಿಯವರೆಗೆ 20 ಸಾವಿರಕ್ಕೂ ಹೆಚ್ಚು ಕುಟುಂಬದವರು ಈ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಈ ದಸರಾ ಉತ್ಸವ ಎರಡನೇ ಮೈಸೂರು ದಸರಾ ಎಂದೇ ಖ್ಯಾತಿಯಾಗಿದೆ.9 ದಿನ ಉತ್ಸವ: ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಕಳೆದ 42 ವರ್ಷಗಳಿಂದ ಮೈಸೂರು ಮಾದರಿಯಲ್ಲಿ ದಸರಾ ಉತ್ಸವ ನಡೆಯುತ್ತಿದೆ. ಮೈಸೂರು ದಸರಾ ಪ್ರಾರಂಭಕ್ಕಿಂತ ಪೂರ್ವದಲ್ಲಿ ಹೇಮಗುಡ್ಡದಲ್ಲಿ ದಸರಾ ಉತ್ಸವ ಆರಂಭವಾಯಿತು ಎನ್ನುವುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. 9 ದಿನಗಳ ಕಾಲ ಉತ್ಸವಗಳು ನಡೆಯುತ್ತವೆ ಎಂದು ಹೇಮಗುಡ್ಡ ದಸರಾ ಉತ್ಸವದ ವ್ಯವಸ್ಥಾಪಕ ಎಚ್.ಆರ್. ಶ್ರೀನಾಥ ಹೇಳಿದರು.