ತುಳಜಾ ಭವಾನಿ ಪ್ರತ್ಯಕ್ಷಳಾಗಿ ಶಿವಾಜಿಗೆ ಖಡ್ಗ ನೀಡುವುದು, ತಿರುಪತಿಯ ತಿಮ್ಮಪ್ಪನ ದರ್ಶನ, ಉಜ್ಜಯಿನಿ ಮಹಾಕಾಳನ ಸನ್ನಿಧಿ, ಅಯ್ಯಪ್ಪನ ಬಾಲಲೀಲೆಯನ್ನು ಭಕ್ತರಿಗೆ ತಿಳಿಸಲು ಗಣೇಶೋತ್ಸವ ಮಹಾಮಂಡಳ ಸಿದ್ಧತೆ ಪೂರ್ಣಗೊಳಿಸಿವೆ.

ಹುಬ್ಬಳ್ಳಿ:

ಗಣೇಶೋತ್ಸವಕ್ಕೆ ಹೆಸರಾದ ಹುಬ್ಬಳ್ಳಿಯಲ್ಲಿ ಈ ಬಾರಿ ಪೌರಾಣಿಕ ಪ್ರಸಂಗ ಬಿತ್ತಿರಿಸುವ ಹಾಗೂ ಸಾಮಾಜಿಕ ಸಂದೇಶ ಸಾರುವ ವಿಶಿಷ್ಠ ಲೋಕ ಅನಾವರಣವಾಗಲಿದ್ದು ಭಕ್ತರನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.

ತುಳಜಾ ಭವಾನಿ ಪ್ರತ್ಯಕ್ಷಳಾಗಿ ಶಿವಾಜಿಗೆ ಖಡ್ಗ ನೀಡುವುದು, ತಿರುಪತಿಯ ತಿಮ್ಮಪ್ಪನ ದರ್ಶನ, ಉಜ್ಜಯಿನಿ ಮಹಾಕಾಳನ ಸನ್ನಿಧಿ, ಅಯ್ಯಪ್ಪನ ಬಾಲಲೀಲೆಯನ್ನು ಭಕ್ತರಿಗೆ ತಿಳಿಸಲು ಗಣೇಶೋತ್ಸವ ಮಹಾಮಂಡಳ ಸಿದ್ಧತೆ ಪೂರ್ಣಗೊಳಿಸಿವೆ.

ಸೆ. 14ರಂದು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಾದರೆ, ವಿಶೇಷ ರೂಪಕ, ಧ್ವನಿ-ಬೆಳಕು ಪ್ರದರ್ಶನ ಸೆ.16ರ ಬಳಿಕ ಜನರ ವೀಕ್ಷಣೆಗೆ ಮುಕ್ತವಾಗಲಿವೆ. ಸೆ. 19ರಿಂದ ನಗರದಲ್ಲಿ ಗಣೇಶೋತ್ಸವದ ಜತೆಗೆ "ದೇವರ ದರ್ಶನದ ಪ್ರವಾಸ "ವೇ ತೆರೆದುಕೊಳ್ಳಲಿದೆ.

ಶಿವಾಜಿಗೆ ಖಡ್ಗ ನೀಡುವ ಭವಾನಿ:

ಸ್ಟೇಷನ್ ರಸ್ತೆಯ ಶ್ರೀಗಣೇಶೋತ್ಸವ ಮಂಡಳಿ ಟ್ರಸ್ಟ್‌ ಈ ಬಾರಿ ತುಳಜಾಪುರದ ಶ್ರೀತುಳಜಾಭವಾನಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರಸಂಗವನ್ನು ಕಟ್ಟಿಕೊಡುತ್ತಿದೆ. ಮೊಘಲರ ವಿರುದ್ಧ ಹೋರಾಡುತ್ತಿದ್ದ ಶಿವಾಜಿ ಮಹಾರಾಜರಿಗೆ ತುಳಜಾಭವಾನಿ ಪ್ರತ್ಯಕ್ಷಳಾಗಿ ಖಡ್ಗ ನೀಡುವ ಸನ್ನಿವೇಶ ಪ್ರಮುಖ ಆಕರ್ಷಣೆಯಾಗಲಿದೆ.

ಕಲಿಯುಗದಿಂದ ಕಲ್ಕಿ ಅವತಾರ:

ಶೀಲವಂತರ ಓಣಿಯಲ್ಲಿ ಕಲಿಯುಗದ ಆರಂಭದ ರೂಪಕದ ಮೂಲಕ ಭ್ರಷ್ಟಾಚಾರ, ಅನಾಚಾರ ಹಾಗೂ ಪ್ರಕೃತಿ ವಿಕೋಪಗಳಂತಹ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಲಾಗುತ್ತಿದೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ಸತತ 5ನೇ ಬಾರಿಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ದೊರೆತಿದ್ದು, 5.5 ಅಡಿ ಗಣೇಶನ ಮುಂದೆ ಕಲ್ಕಿ ಅವತಾರದ ರೂಪಕ ಅನಾವರಣಗೊಳ್ಳಲಿದೆ. ಕಲಿಯುಗದ ಅರಾಜಕತೆಯ ನಡುವೆ ಕಲ್ಕಿ ಆಗಮಿಸಿ ಸತ್ಯಯುಗಕ್ಕೆ ನಾಂದಿ ಹಾಡುವ ಸಂದೇಶ ಇಲ್ಲಿದೆ. ಸಿಂಪಿಗಲ್ಲಿಯ ಶ್ರೀಮಾರುತಿ ಯುವಕ ಸೇವಾ ಸಂಘ 61 ಕೆಜಿ ಬೆಳ್ಳಿಯ ಗಣೇಶನೊಂದಿಗೆ "ಮಿನಿ ತಿರುಪತಿ " ನಿರ್ಮಿಸುತ್ತಿದೆ.

ಮಹಾಕಾಳನ ಸನ್ನಿಧಿಯಲ್ಲಿ ರುದ್ರಭಕ್ತಿ:

ಹಿರೇಪೇಟೆ ಕಂಚಗಾರಗಲ್ಲಿಯಲ್ಲಿ ಉಜ್ಜಯಿನಿ ಮಹಾಕಾಳನ ಸನ್ನಿವೇಶ ಮೂಡಿಬರಲಿದೆ. ರಾಕ್ಷಸರ ಸಂಹಾರದ ಬಳಿಕ ಭಕ್ತರ ಬೇಡಿಕೆಗೆ ಮಣಿದು ಶಿವನು ಲಿಂಗರೂಪದಲ್ಲಿ ಉಜ್ಜಯಿನಿಯಲ್ಲಿ ನೆಲೆಸುವ ಪ್ರಸಂಗವನ್ನು ಕಣ್ಣಮುಂದೆ ಕಟ್ಟಿಕೊಡಲಾಗುತ್ತಿದೆ.

ಅಯ್ಯಪ್ಪನ ಬಾಲಲೀಲೆ:

ದುರ್ಗದ ಬಯಲಿನಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗುತ್ತಿದೆ. ತಾಯಿಯ ಉದರಬಾಧೆ ನೀಗಿಸಲು ಬಾಲಸ್ವರೂಪಿ ಅಯ್ಯಪ್ಪ ಕಾಡಿಗೆ ತೆರಳಿ ಹುಲಿ ಹಾಲು ತರುವ ಪ್ರಸಂಗ ಇಲ್ಲಿ ರೂಪುಗೊಳ್ಳಲಿದೆ. ಸರಾಫ ಕಟ್ಟಿಯ ವೃತ್ತದ ಬೃಹತ್ ಪೆಂಡಾಲ್‌ನಲ್ಲಿ 151 ಕೆಜಿ ಬೆಳ್ಳಿ ಗಣೇಶ ವಿರಾಜಮಾನನಾಗಲಿದ್ದಾನೆ. ಮೂಷಿಕನ ಕಿವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯನ್ನೂ ಇಲ್ಲಿ ವಿಶೇಷವಾಗಿ ಬಿಂಬಿಸಲಾಗುತ್ತಿದೆ.

25 ಅಡಿ ಮಹಾರಾಜಾ:

ದಾಜಿಬಾನ್ ಪೇಟೆಯ "ಹುಬ್ಬಳ್ಳಿ ಕಾ ರಾಜಾ " 24 ಅಡಿ ಎತ್ತರ ಹೊಂದಿದ್ದರೆ, ಮರಾಠಾ ಗಲ್ಲಿಯ "ಹುಬ್ಬಳ್ಳಿ ಕಾ ಮಹಾರಾಜಾ " 25 ಅಡಿ ಎತ್ತರದೊಂದಿಗೆ ನಗರದ ಅತಿ ಎತ್ತರದ ಗಣೇಶ ವಿಗ್ರಹವಾಗಲಿದೆ. ವಿವಿಧ ಗಣೇಶೋತ್ಸವ ಮಂಡಳಿಗಳು ಸನ್ನಿವೇಶ, ಪೆಂಡಾಲ್ ಹಾಗೂ ಅಲಂಕಾರಕ್ಕೆ ₹10ರಿಂದ ₹15 ಲಕ್ಷದ ವರೆಗೆ ವೆಚ್ಚ ಮಾಡುತ್ತಿವೆ. ಹೀಗಾಗಿ ಈ ಬಾರಿಯ ಗಣೇಶೋತ್ಸವ ಭಕ್ತಿ, ಪೌರಾಣಿಕತೆ, ಇತಿಹಾಸ ಮತ್ತು ಸಾಮಾಜಿಕ ಸಂದೇಶಗಳ ಸಂಗಮವಾಗಿ ರೂಪುಗೊಳ್ಳುತ್ತಿದೆ.

₹2.25 ಕೋಟಿ ವೆಚ್ಚದಲ್ಲಿ ಜನರಿಗೆ ಸೌಲಭ್ಯ

ಗಣೇಶೋತ್ಸವ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಸುಮಾರು ₹2.25 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ, ಬಾವಿಗಳ ಸ್ವಚ್ಛತೆ, ವಿದ್ಯುತ್ ದೀಪ, ಸಿಸಿಟಿವಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಿದೆ. ಉಣಕಲ್ಲನಲ್ಲಿ ಕೃತಕ ಬಾವಿ ನಿರ್ಮಿಸಿದ್ದು ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಾರ್ಗಗಳ ತೆಗ್ಗು-ಗುಂಡಿ ದುರಸ್ತಿಗೆ ₹25 ಲಕ್ಷ ಮೀಸಲಿಡಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಸುಮಾರು 400 ಸಿಸಿ ಕ್ಯಾಮೆರಾ, ಡ್ರೋನ್ ಹಾಗೂ ಕ್ರೇನ್‌ ವ್ಯವಸ್ಥೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.