ಸಾರಾಂಶ
ಹುಬ್ಬಳ್ಳಿ: ಎನ್. ಚೆಲುವರಾಯಸ್ವಾಮಿ ಕೃಷಿ ಸಚಿವರಾಗಲು ಅನ್‌ಫಿಟ್. ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದೆ. ರಾಜ್ಯಕ್ಕೆ ಎಷ್ಟು ಪ್ರಮಾಣದ ಗೊಬ್ಬರ ಬೇಕು ಎಂಬ ಕನಿಷ್ಠ ಜ್ಞಾನ ಕೃಷಿ ಸಚಿವ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಕಿಡಿಕಾರಿದರು.ರಾಜ್ಯ ಸರ್ಕಾರ 12.95 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇಟ್ಟಿತ್ತು. ಅದರಲ್ಲಿ ಕೇಂದ್ರ ಸರ್ಕಾರ 11.17 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ. ಜುಲೈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಪೂರೈಕೆ ಮಾಡಿದೆ. ಅದರಲ್ಲಿ ರಾಜ್ಯ ಸರ್ಕಾರ 7.73 ಲಕ್ಷ ಮೆಟ್ರಿಕ್ ಟನ್ ರೈತರಿಗೆ ವಿತರಿಸಿದೆ. ಒಂದು ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಸಂಗ್ರಹ ಇದ್ದರೂ ನೋ ಸ್ಟಾಕ್ ಎಂದು ಹೇಳಲಾಗುತ್ತಿದೆ. ಹಾಗಾದರೆ ಉಳಿದ ಗೊಬ್ಬರ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಯೂರಿಯಾ ಕೊರತೆಯಾಗಲು 2.50 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದೂ ಕಾರಣ. ಇದರಲ್ಲಿ ಕೃಷಿ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಮತ್ತು ಕೆಲ ಮಾರಾಟಗಾರರ ಕೈವಾಡ ಇದೆ. ಕೃಷಿ ಸಚಿವ ಚಲುವರಾಯಸ್ವಾಮಿ ಮಂಡ್ಯ ಬಿಟ್ಟು ರಾಜ್ಯದ ಯಾವುದೇ ಜಿಲ್ಲೆಗಳ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿಲ್ಲ. ಉತ್ತರ ಕರ್ನಾಟಕದಲ್ಲಿ ತಮ್ಮ ಇಲಾಖೆಯ ಕುರಿತಂತೆ ಸಭೆ ನಡೆಸಲಿ ಎಂದು ಆಗ್ರಹಿಸಿದರು.ಮಣ್ಣು ತಿನ್ನಿಸುವ ಕೆಲಸ: ಕೊಪ್ಪಳದಲ್ಲಿ ಚಂದ್ರಪ್ಪ ಎನ್ನುವ ರೈತ ಗೊಬ್ಬರ ಸಿಗದೆ ಮಣ್ಣು ತಿಂದಿದ್ದಾರೆ. ರೈತರಿಗೆ ಗೊಬ್ಬರ ನೀಡದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಣ್ಣು ತಿನ್ನಿಸುತ್ತಿದೆ. ಕಾಳ ಸಂತೆಯಲ್ಲಿ ಮಾರಾಟ ಮಾಡುವಲ್ಲಿ ಶಾಮೀಲಾದವರ ಮೇಲೆ ಕ್ರಮ ಆಗಬೇಕು. ಇದರ ವಿರುದ್ಧ ರಾಜ್ಯಾದ್ಯಂತ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈಯಲ್ಲಿ ಅಡಗಿದೆ. ಯಾವಾಗ ಕುರ್ಚಿ ಉರುಳುತ್ತದೆಯೋ ಎಂಬ ಆತಂಕ ಅವರನ್ನು ಕಾಡುತ್ತಿದೆ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕುಮಾರಗೌಡ ಪಾಟೀಲ, ಶಶಿಮೌಳಿ ಕುಲಕರ್ಣಿ, ಬಸವರಾಜ ಕುಂದಗೋಳಮಠ ಸೇರಿದಂತೆ ರೈತ ಮಂಡಲಗಳ ಅಧ್ಯಕ್ಷರು, ಮತ್ತಿತರರು ಉಪಸ್ಥಿತರಿದ್ದರು.