ತರೀಕೆರೆ: ವಿದ್ಯಾರ್ಥಿಗಳು ಈಗಿನಿಂದಲೇ ನಡತೆಯಲ್ಲಿ ಸಭ್ಯತೆ ಅಭ್ಯಾಸದ ಕಡೆ ಸಮರ್ಪಣೆ ಕಾಪಾಡಿಕೊಂಡು ಆರೋಗ್ಯದ ದೃಷ್ಟಿ ಯಿಂದ ಶುಚಿತ್ವದ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್.ವೀರಭದ್ರಪ್ಪ ಹೇಳಿದ್ದಾರೆ.
- ಭಾವಿಕೆರೆ ಗ್ರಾಮದಲ್ಲಿ ರಾಷ್ಟ್ರೀಯ ಯುವ ದಿನ, ಕಾನೂನು ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆವಿದ್ಯಾರ್ಥಿಗಳು ಈಗಿನಿಂದಲೇ ನಡತೆಯಲ್ಲಿ ಸಭ್ಯತೆ ಅಭ್ಯಾಸದ ಕಡೆ ಸಮರ್ಪಣೆ ಕಾಪಾಡಿಕೊಂಡು ಆರೋಗ್ಯದ ದೃಷ್ಟಿ ಯಿಂದ ಶುಚಿತ್ವದ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್.ವೀರಭದ್ರಪ್ಪ ಹೇಳಿದ್ದಾರೆ.ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಷನಲ್, ಪ್ರಗತಿ ಲೀಜನ್ ಮತ್ತು ಚುಂಚಶ್ರೀ ಒಕ್ಕಲಿಗರ ಸಂಘದ ಸಂಯುಕ್ತಾ ಶ್ರಯದಲ್ಲಿ ಸಮೀಪದ ಭಾವಿಕೆರೆ ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಹೆಚ್ಚಿನ ಹಾಗೂ ನಿರಂತರ ಶಿಸ್ತುಬದ್ಧ ಜೀವನ ಶೈಲಿ ಅಳವಡಿಸಿಕೊಂಡಲ್ಲಿ ಸಾಧನೆ ಮಾಡಲು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಇದರಿಂದ ಮಕ್ಕಳ ಬಗೆಗಿನ ಪೋಷಕರ ಕನಸು ಸಾಕಾರಗೊಂಡು ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಯುವಶಕ್ತಿಗೆ ಅಣುಶಕ್ತಿಯಷ್ಟೇ ಸಾಮರ್ಥ್ಯವಿದೆ. ಈ ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ ಎಂದು ಹೇಳಿದ ಮಹಾನ್ ಸಂತ ಶ್ರೀ ಸ್ವಾಮಿ ವಿವೇಕಾನಂದರ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತ ಯುವ ಜನತೆ ಈ ಆದರ್ಶ ಗಳನ್ನು ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕಾನೂನು ರೀತಿ ಪ್ರೌಢಾವಸ್ಥೆಗೆ ಬರುವ ಮುನ್ನವೆ ಹದಿ ಹರೆಯದವರಲ್ಲಿ ಹಲವಾರು ಕಾರಣಗಳಿಂದ ಆಕರ್ಷಿತರಾಗಿ ತಪ್ಪು ಹೆಜ್ಜೆಗಳನ್ನಿಟ್ಟು ಫೋಕ್ಸೋ ಕಾಯಿದೆ ಅಡಿ ಸಿಲುಕಿ ಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದ್ದರೂ ಸಹ ಅರಿವಿನ ಕೊರತೆಯಿಂದ ಈ ಫೋಕ್ಸೋ ಪ್ರಕರಣಗಳು ನಡೆಯುತ್ತಿದ್ದು, ಪ್ರತಿ ಪ್ರಕರಣದಲ್ಲೂ ಇಬ್ಬರೂ ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಕೇಂದ್ರ ಸರ್ಕಾರದ ರಾಷ್ಟ್ರೀಯ ಮಹಿಳಾ ಆಯೋಗದಿಂದ ತೇರೆ ಮೇರೆ ಸಪ್ನೆ ಯೋಜನೆ ದೇಶದೆಲ್ಲಡೆ ಹೆಚ್ಚುತ್ತಿರುವ ವಿಚ್ಚೇದನೆ ಪ್ರಕರಣಗಳನ್ನು ಗಮನದಲ್ಲಿರಿಸಿಕೊಂಡು ಆರಂಭಿಸಿದ್ದು ಇದರ ಮೂಲಕ ವಿವಾಹಪೂರ್ವ ಆಪ್ತ ಸಮಾಲೋಚನೆ ಮಾಡಿಸಿ ಅರಿವು ಮೂಡಿಸುವ ಆಲೋಚನೆ ಹೊಂದಲಾಗಿದೆ. ಈ ಯೋಜನೆಯನ್ನು ರಾಜ್ಯದಲ್ಲಿ ಮಹಿಳಾ ಆಯೋಗ ಕೂಡಿ- ಬಾಳೋಣ ಎಂಬ ಶೀರ್ಷಿಕೆಯಡಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಗಳ ಮೂಲಕ ಅನುಷ್ಠಾನಕ್ಕೆ ಮುಂದಾಗಿದ್ದು ಈ ಮೂಲಕ ಪ್ರಿ-ವೆಡ್ಡಿಂಗ್ ಶೂಟಿಂಗ್ ನಿಂತ ಫ್ರೀ-ವೆಡ್ಡಿಂಗ್ ಕೌನ್ಸಿಲಿಂಗ್ ಗೆ ಒಳಪಡಿಸಿಕೊಂಡು ವಿಚ್ಛೆದನದ ವಿಷಯ ಬಾರದಂತೆ ಸುಖ ಸಂಸಾರದ ಜೀವನ ರೂಪಿಸಿಕೊಳ್ಳಬಹುದು ಎಂದು ಹೇಳಿದರು.ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಮಾತನಾಡಿ ವಿದ್ಯಾರ್ಥಿಗಳು ಕಾನೂನು ತಿಳಿದುಕೊಳ್ಳಬೇಕು. ಇದರಿಂದ ಮುಂದಿನ ಜೀವನಕ್ಕೆ ಒಳ್ಳೆಯದಾಗುತ್ತದೆ, ಕಾನೂನು ಗೊತ್ತಿಲ್ಲ ಎಂದು ತಪ್ಪು ಮಾಡಿದರೆ ಕ್ಷಮೆ ಇಲ್ಲ ಎಂದರಲ್ಲದೆ ಬಾಲ್ಯ ವಿವಾಹಗಳು ಕಂಡುಬಂದರೆ 1098ಗೆ ಕರೆ ಮಾಡಿ ತಡೆಗಟ್ಟಬೇಕು. ಹೆಣ್ಣಿಗೆ 18 ವರ್ಷ ಗಂಡಿಗೆ21 ವರ್ಷ ತುಂಬಿರ ಬೇಕು, ಇಲ್ಲದಿದ್ದರೆ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಬಾಲ ಕಾರ್ಮಿಕ ವಿರೋಧಿ ಕಾನೂನು, ಶಿಕ್ಷಣ ಕಾಯಿದೆ ಹಾಗೂ ರ್‍ಯಾಗಿಂಗ್ ಕುರಿತು ಉಪನ್ಯಾಸ ನೀಡಿದರು.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚುಂಚಶ್ರೀ ಒಕ್ಕಲಿಗರ ಸಂಘದ ರಾಜೇಶ್ವರಿ ನಂದಕುಮಾರ್, ಬಾವಿಕೆರೆ ಗ್ರಾಪಂ ಅಧ್ಯಕ್ಷೆ ಜಯಂತಿ, ಜೆಸಿಐ ಪ್ರಗತಿ ಲೀಜನ್ ಅಧ್ಯಕ್ಷೆ ಆಶಾ ಬೋಸ್ಲೆ, ವಿದ್ಯಾರ್ಥಿಗಳು ಬಾಗವಹಿಸಿದ್ದರು.
-16ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ಭಾವಿಕೆರೆ ಗ್ರಾಮದಲ್ಲಿ ರಾಷ್ಟ್ರೀಯ ಯುವ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಜನ ಚಿಂತನ ಸಂಸ್ಥೆ ಅಧ್ಯಕ್ಷ ಎನ್.ವೀರಭದ್ರಪ್ಪ ಮಾತನಾಡಿದರು. ಹಿರಿಯ ವಕೀಲ ಎಸ್.ಸುರೇಶ್ ಚಂದ್ರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಇದ್ದರು.