ನಾ.ಡಿಸೋಜಾ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಲೆನಾಡಿನ ಜನಜೀವನದ ನೋವು ನಲಿವುಗಳಿಗೆ ಅಕ್ಷರ ರೂಪ ಕೊಟ್ಟ ಪರಿಸರ ಪ್ರೇಮಿ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ : ನಾ.ಡಿಸೋಜಾ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಲೆನಾಡಿನ ಜನಜೀವನದ ನೋವು ನಲಿವುಗಳಿಗೆ ಅಕ್ಷರ ರೂಪ ಕೊಟ್ಟ ಪರಿಸರ ಪ್ರೇಮಿ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಹಯೋಗದಲ್ಲಿ ನಡೆದ ನಾ ಡಿಸೋಜಾ ಮಕ್ಕಳ ಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ನಾ.ಡಿಸೋಜಾ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ಜೀವನಕ್ಕೆ ಬೆಳಕು: ಲೇಖಕ ತನ್ನ ಬುದ್ದಿ, ಮನಸ್ಸಿನ ಭಾವನೆ, ಕಲ್ಪನೆ ಮತ್ತು ಜೀವನ ತತ್ವಗಳಿಗೆ ಸೃಜನಾತ್ಮಕ ರೂಪಕೊಟ್ಟಾಗ ಅದು ಉತ್ತಮ ಕೃತಿಯಾಗುತ್ತದೆ. ಅಂತಹ ಕೃತಿಗಳು ಜನ ಜೀವನಕ್ಕೆ ದೀಪದ ಬೆಳಕನ್ನು ನೀಡುತ್ತವೆ. ಕೃತಿಗಳನ್ನು ರಚಿಸಿದವರು ನಾ. ಡಿಸೋಜಾ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಅಪಾರ ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿರುವ ನಾ.ಡಿಸೋಜಾ ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರ ಸಾಹಿತ್ಯ ಕೃಷಿ ನಡೆಸಿದ್ದಾರೆ ಎಂದರು.

ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದರು ಎಂದು ಕಾಮತ್ ನುಡಿದರು. ಮಡಿಕೇರಿಯ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಮರ್ಥವಾಗಿ ಸಮ್ಮೇಳನ ನಡೆಸಿಕೊಟ್ಟ ಖ್ಯಾತಿ ನಾ.ಡಿಸೋಜಾ ಅವರದ್ದು. ಸಮ್ಮೇಳನದ ನೆನಪಿಗೋಸ್ಕರ ಸಮ್ಮೇಳನ ಅಧ್ಯಕ್ಷರ ಹೆಸರಿನಲ್ಲಿ ಸಾಹಿತ್ಯ ಪರಿಷತ್ತು ದತ್ತಿ ಸ್ಥಾಪಿಸಿದ್ದು ಮಕ್ಕಳಲ್ಲಿ ಸಾಹಿತ್ಯದ ಚಿಂತನೆ ಮೂಡಬೇಕು ಎನ್ನುವುದು ಈ ದತ್ತಿಯ ಉದ್ದೇಶ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ತಿಪ್ಪೇಸ್ವಾಮಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಬಹುಮಾನ ವಿತರಣೆ: ದತ್ತಿಯ ಆಶಯದಂತೆ ವಿದ್ಯಾರ್ಥಿಗಳಿಗೆ ಗಾಯನ ಮತ್ತು ನೃತ್ಯ ಸ್ಪರ್ಧೆ ಜರುಗಿತು. ಗಾಯನ ಸ್ಪರ್ಧೆ ಪ್ರಥಮ ಬಹುಮಾನವನ್ನು ವಿದ್ಯಾರ್ಥಿನಿ ಚೊಂದಮ್ಮ ಎಂ.ಯು ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಸಪ್ನಾ ಎಂ ಶೇಟ್ ಪಡೆದುಕೊಂಡರು. ತೃತೀಯ ಬಹುಮಾನವನ್ನು ಮಣಿಕಂಠ ಪಡೆದುಕೊಂಡರು. ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಲಕ್ಷ್ಮಿ ಆರ್. ಮತ್ತು ಹರ್ಷಿತಾ ಎಂ.ಸಿ. ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ತುಳಸಿ ಮತ್ತು ಅರ್ಪಿತ ಪಡೆದುಕೊಂಡರು. ತೃತೀಯ ಬಹುಮಾನವನ್ನು ಹರ್ಷಿತ ಪಡೆದುಕೊಂಡರು.

ಕೊಡಗು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾದ ಪುದಿಯನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಎಫ್.ಎಂ.ಸಿ ಕಾಲೇಜಿನ ವಿದ್ಯಾರ್ಥಿ ಸಂಘದ ಸಂಯೋಜಕರು, ಪ್ರಾಧ್ಯಾಪಕರು ಆಗ ಡಾ.ಎ.ಎನ್.ಗಾಯತ್ರಿ ಇದ್ದರು.

ವಿದ್ಯಾರ್ಥಿನಿ ಅರ್ಪಿತಾ ನಿರೂಪಿಸಿದರು. ರೇವತಿ ರಮೇಶ್ ಸ್ವಾಗತಿಸಿದರೆ, ಎಂ.ಯು. ಚೊಂದಮ್ಮ ನಾಡಗೀತೆ ಹಾಡಿದರು. ಉಪನ್ಯಾಸಕರ ಪರಿಚಯವನ್ನು ಸಂಧ್ಯಾ ನೆರವೇರಿಸಿದರು. ಕಾರ್ಯಕ್ರಮ ಸಂಯೋಜಕಿ, ಪ್ರಾಧ್ಯಾಪಿ ಡಾ.ಎ.ಎನ್ ಗಾಯತ್ರಿ ನಿರ್ವಹಿಸಿದರು.