ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಸಿದ್ದಾಪುರ ಭಾಗದ ಕೆಲವು ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಮುಖ್ಯಸ್ಥ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಸಿಎನ್‌ಸಿ ವತಿಯಿಂದ ವಿರಾಜಪೇಟೆ ಗಡಿಯಾರ ಕಂಬದ ಬಳಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭೂಮಾಫಿಯಾ, ಕಾರ್ಪೋರೇಟ್ ಮಾಫಿಯಾ ಸೇರಿಕೊಂಡು ಆಮದು ಗಿರಿಜನರನ್ನು ಕೊಡಗಿಗೆ ಕರೆತಂದು ಸ್ಥಳೀಯರೆಂದು ಬಿಂಬಿಸಿ ಖ್ಯಾತ ಅರ್ಥಶಾಸ್ತಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಕೊಡವರ ಪರ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ವಿರುದ್ಧವಾಗಿ ಅರ್ಜಿ ಸಲ್ಲಿಸಲು ಸಿದ್ಧರಾಗುತ್ತಿದ್ದಾರೆ ಎಂದು ಅವರು ದೂರಿದರು.ಭಾಗಮಂಡಲದಲ್ಲಿ ಕೊಡವ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಕಾಮಗಾರಿಗೆ ಭೂಪರಿವರ್ತನೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಆದರೆ ಭೂಮಾಫಿಯಾ ಮತ್ತು ಕಾರ್ಪೋರೇಟ್ ವಲಯಗಳಿಗೆ ಯಾವುದೇ ವಿಳಂಬ ಮಾಡದೆ ಒತ್ತಡಕ್ಕೆ ಮಣಿದು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡಿಕೊಡಲಾಗುತ್ತಿದೆ. ತಡಿಯಂಡ್ ಮೋಳ್ ನಿಂದ ಹಿಡಿದು ಪುಷ್ಪಗಿರಿ ಮತ್ತು ಬ್ರಹ್ಮಗಿರಿ ವರೆಗೆ ನಿಷೇಧಿತ ಪ್ರದೇಶದಲ್ಲಿ ತಕ್ಷಣ ತಕ್ಷಣ ಭೂಪರಿವರ್ತನೆಯಾಗುತ್ತಿದೆ ಎಂದು ಆರೋಪಿಸಿದರು.
ತಲಕಾವೇರಿ, ಭಾಗಮಂಡಲ ಕೊಡವ ಟ್ರಸ್ಟ್ ಅವರಿಗೆ ಸಮುದಾಯ ಭವನ ನಿರ್ಮಾಣ ಮಾಡಲು ಅವಕಾಶ ನಿರಾಕರಣೆ ಮಾಡಿರುವುದು ಸಂವಿಧಾನದ 51 ಎ ಮತ್ತು 25, 26 ವಿಧಿಯ ಉಲ್ಲಂಘನೆಯಾಗಿದೆ. ಅತ್ಯಂತ ಸಣ್ಣ ಸಮುದಾಯವೊಂದು ಧಾರ್ಮಿಕ ಆಚಾರ, ವಿಚಾರಗಳನ್ನು ಮುಕ್ತವಾಗಿ ಆಚರಣೆ ಮಾಡಲು ಅಡ್ಡಿಪಡಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.ಕೊಡವರು ತಮ್ಮ ಜನ್ಮಭೂಮಿಯಲ್ಲಿ ನ್ಯಾಯಸಮ್ಮತವಾಗಿ ಮನೆ ನಿರ್ಮಿಸಲು ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಇಲ್ಲಸಲ್ಲದ ನಿಯಮಗಳನ್ನು ರೂಪಿಸಿ ಕಿರುಕುಳ ನೀಡಲಾಗುತ್ತಿದೆ. ಭೂಕುಸಿತವಾದ ಮಗ್ಗುಲದ ಮಲೆತಿರಿಕೆ ಬೆಟ್ಟದಲ್ಲಿ ಬೃಹತ್ ರೆಸಾರ್ಟ್ ನಿರ್ಮಾಣಗೊಂಡಿದೆ ಎಂದು ಆರೋಪಿಸಿದರು.
ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕರ್ನಲ್ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಮನೆಯಪಂಡ ಕಾಂತಿ ಸತೀಶ್, ಬಲ್ಲಡಿಚಂಡ ಬೇಬಿ ಮೇದಪ್ಪ, ಮಾಳೇಟಿರ ಶ್ರೀನಿವಾಸ್, ಮಾಚೇಟಿರ ಚೋಟು ಕಾವೇರಿಪ್ಪ ಮತ್ತಿತರರು ಹಾಜರಿದ್ದರು.