ಸಾರಾಂಶ
ರಾಜ್ಯದ ನಾಡ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಸಿಬ್ಬಂದಿಗೆ ಬರೋಬ್ಬರಿ 9 ತಿಂಗಳಿಂದ ವೇತನವಿಲ್ಲದೆ, ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ಕುಟುಂಬ ನಿರ್ವಾಹಣೆಗಾಗಿ ಪರದಾಡತೊಡಗಿದ್ದಾರೆ.
ಕನ್ನಡಪ್ರಭ ವಾರ್ತೆ ಆಳಂದ
ರಾಜ್ಯದ ನಾಡ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಸಿಬ್ಬಂದಿಗೆ ಬರೋಬ್ಬರಿ 9 ತಿಂಗಳಿಂದ ವೇತನವಿಲ್ಲದೆ, ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ಕುಟುಂಬ ನಿರ್ವಾಹಣೆಗಾಗಿ ಪರದಾಡತೊಡಗಿದ್ದಾರೆ.ಕಲಬುರಗಿ ಜಿಲ್ಲೆಯ ಒಟ್ಟು ಅಟಲ್‌ಜೀ ಜನಸ್ನೇಹಿ 48 ಕೇಂದ್ರಗಳಲ್ಲಿ 48 ಜನ ಗುತ್ತಿಗೆ ಆಧಾರದ ಮೇಲೆ ದುಡಿಯುವ ಕಂಪ್ಯೂಟರ್ ಆಪರೇಟರ್‌ಗೆ 9 ತಿಂಗಳಿಂದ ವೇತನ ಪಾವತಿಯಾಗಿಲ್ಲ.
ಸಹಾಯಕ ಸಿಬ್ಬಂದಿಗಳನ್ನು ತೆಗೆದುಹಾಕಲಾಗಿದೆ. ಇರುವ ಸಿಬ್ಬಂದಿಗಳಿಗೂ ಕೆಲಸದ ಹೊರೆ ಎದುರಾಗಿದೆ. ಆದರೆ ಈ ನಡುವೆ ವೇತನವೂ ಪಾವತಿಯಾಗದೆ ನಮ್ಮ ಜೀವನ ಕಂಗಾಲಾಗಿಸತೊಡಗಿದೆ ಎಂದು ಸಿಬ್ಬಂದಿಗಳು ಆಕ್ರೋಶ ಹೊರಹಾಕತೊಡಗಿದ್ದಾರೆ.ವೇತನ ವಿಳಂಬ: ಸಿಬ್ಬಂದಿಗೆ ತಲಾ ನಿಗದಿಪಡಿಸಿದ 17.271 ರುಪಾಯಿ ವೇತನ ಮತ್ತು ಪಿಎಂ ಮತ್ತು ಇಎಸ್‍ಐ ಮೊತ್ತವು ನೀಡಿರುವುದಿಲ್ಲ. ಈ ಸೇವೆಗೆ ಸರ್ಕಾರದಿಂದ ಟೆಂಟರ್ ಕರೆದ ಕಾಮಗಾರಿಯನ್ನು ಹಂಚಿಕೆ ಮಾಡಲಾಗುತ್ತಿದೆ. ಆದರೆ ಟೆಂಡರ್ ಕರೆಯಲು ಸದರಿ ವಿಳಂಬವಾಗಿದೆ. ಇನ್ನೂ ಟೆಂಡರ್ ಕರೆದಿಲ್ಲದಿರುವುದು ವೇತನ ಪಾವತಿಗೆ ವಿಳಂಬವಾಗಿದೆ ಎಂದು ಹೇಳುತ್ತಿದ್ದಾರೆ ವೇತನ ನೀಡುತ್ತಿಲ್ಲ ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ಅಟಲ್ ಜೀ ಕೇಂದ್ರದ ಕೆಲಸವೇನು: ರಾಜ್ಯದ ಅಟಲ್‌ಜೀ ಜನಸ್ನೇಹಿ ಸೇವಾ ಕೇಂದ್ರದಲ್ಲಿ ಒಟ್ಟು 37 ಸರ್ಕಾರಿ ಸೇವೆಯನ್ನು ನೋಂದಣಿ ಮತ್ತು ದಾಖಲೆ ಒದಗಿಸುವ ಸೇವಾ ಕೇಂದ್ರ ಇದಾಗಿದೆ. ಇಲ್ಲಿ ರೈತರಿಗೆ ಪಹಣಿ ವಿತರಣೆ, ಜಾತಿ, ಆದಾಯ ಪ್ರಮಾಣ ಪತ್ರ, ಮೋಜಣಿ ಸೇವಾ, ಜನನ, ಮರಣ ಪ್ರಮಾಣ ಪತ್ರ, ಸಂದ್ಯಾಸುರಕ್ಷಾ, ವಿಧವಾ, ವೃದ್ಧಾಪ್ಯ ವೇತನ ವಿಕಲಚೇತನ ಹೀಗೆ ಹಲವು ಪಿಂಚಣಿ ಯೋಜನೆಗಳ ನೋಂದಣಿ, ದಾಖಲೆ ವಿತರಣೆ ಹಾಗೂ ಕೃಷಿ ಸೇವೆ ಸೇರಿ 37 ಸೇವೆಯನ್ನು ನಿರ್ವಹಣೆ ಕಾರ್ಯವನ್ನು ಈ ಸಿಬ್ಬಂದಿ ವೇತನಕ್ಕಾಗಿ ಎದುರುನೋಡುತ್ತಲೇ ಕೇಂದ್ರದ ಸೇವೆ ನಿರ್ವಹಿಸುತ್ತಿದ್ದಾರೆ.ಎರಡು ದಿನಗಳಲ್ಲಿ ವೇತನ ಡಿಸಿ: ಅಟಲ್‌ಜೀ ಕೇಂದ್ರದ ಆಪರೇಟರ್‌ಗಳ ವೇತನ ಪಾವತಿಯನ್ನು ಎರಡು ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಿಬ್ಬಂದಿ ಹೇಳಿಕೊಂಡಿದ್ದಾರೆ.
ಈ ಕುರಿತು ಸೋಮವಾರ ಬೇಡಿಕೆಯ ಮನವಿ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದ ಕಲಬುರಗಿ ಜಿಲ್ಲೆಯ ಅಟಲ್‌ಜೀ ಜನಸ್ನೇಹಿ ಸೇವಾ ಕೇಂದ್ರದ ಆಪರೇಟರ್‌ಗಳ ನಿಯೋಗ ಜಿಲ್ಲಾಧಿಕಾರಿಗಳನ್ನು ನೇರವಾಗಿ ಭೇಟಿಮಾಡಲಾಗಿಲ್ಲವಾದರೂ ಅವರ ಸಿಬ್ಬಂದಿ ಮೂಲಕ ಎರಡು ದಿನಗಳಲ್ಲಿ ವೇತನ ಪಾವತಿಸುವ ಭರವಸೆ ದೊರೆತ್ತಿದ್ದರಿಂದ ಮನವಿ ನೀಡದೆ ಹಿಂದುರುಗಿದ್ದೇವೆ ಎಂದು ಕೇಂದ್ರದದ ಆಪರೇಟರ್‌ಗಳು ಹೇಳಿಕೊಂಡಿದ್ದಾರೆ.