ಅಧಿಕಾರಿಗಳಿಂದ ನಾಡಹಬ್ಬ ಸಂಭ್ರಮ ನಿರ್ಲಕ್ಷ್ಯ ಸಲ್ಲ

| Published : Nov 06 2024, 11:53 PM IST

ಅಧಿಕಾರಿಗಳಿಂದ ನಾಡಹಬ್ಬ ಸಂಭ್ರಮ ನಿರ್ಲಕ್ಷ್ಯ ಸಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ ತಾಲೂಕಿನ ತಾಲೂಕು ಆಡಳಿತದ ಅಧಿಕಾರಿಗಳು ನಾಡ ಹಬ್ಬದ ಸಂಭ್ರಮವನ್ನು ನಿರ್ಲಕ್ಷ್ಯ ಮಾಡಿರುವುದು ವಿಷಾದನೀಯ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿ 50 ವರ್ಷಗಳಾದ ಕಾರಣ ರಾಜ್ಯ ಸರ್ಕಾರ ವರ್ಷ ಪೂರ್ತಿ ಕನ್ನಡ ಕಾರ್ಯಕ್ರಮ ಎಂದು ಘೋಷಣೆ ಮಾಡಿದೆ. ಆದರೆ ಗುಳೇದಗುಡ್ಡ ತಾಲೂಕಿನ ತಾಲೂಕು ಆಡಳಿತದ ಅಧಿಕಾರಿಗಳು ನಾಡ ಹಬ್ಬದ ಸಂಭ್ರಮವನ್ನು ನಿರ್ಲಕ್ಷ್ಯ ಮಾಡಿರುವುದು ವಿಷಾದನೀಯವೆಂದು ಭಾಷಾನೀತಿ ತಜ್ಞರ ರಾಜ್ಯ ಸಮಿತಿ ಸದಸ್ಯ ಡಾ.ಸಣ್ಣವೀರಣ್ಣ ದೊಡ್ಡಮನಿ ವಿಷಾದ ವ್ಯಕ್ತಪಡಿಸಿದರು.

ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕು ಆಡಳಿತ ತನ್ನೆಲ್ಲ ಇಲಾಖೆಗಳ ಸಹಯೋಗದಲ್ಲಿ ನ.1ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಜೃಂಭಣೆಯಿಂದ ಆಚರಿಸದೇ ಕೇವಲ ನಾಡದೇವಿಯ ಭಾವಚಿತ್ರದ ಮೆರವಣಿಗೆ ಮಾಡಿ ಮುಗಿಸಿದ್ದು ಇಲ್ಲಿನ ಸಾಹಿತಿ, ಸಂಘಟಕರಿಗೆ ಬೇಸರವುಂಟು ಮಾಡಿದೆ. ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಶಾಲಾ ಮಕ್ಕಳಿಗೆ ಕನ್ನಡದ ವಿಷಯ ಕುರಿತಾದ ಚರ್ಚೆ, ಭಾಷಣ, ಪ್ರಬಂಧ, ಗೀತಗಾಯನ ಹೀಗೆ ಕಾರ್ಯಕ್ರಮ ಏರ್ಪಡಿಸಲಿಲ್ಲ.

ಆಗಿರುವ ಪ್ರಮಾದ ಸರಿಪಡಿಸಿ ಇದೇ ತಿಂಗಳ 30ರೊಳಗಾಗಿ ಒಂದು ದಿನ ತಾಲೂಕಿನ ಕನ್ನಡ ನುಡಿ ಸಡಗರವನ್ನು ಅದ್ಧೂರಿಯಾಗಿ ಈ ಮೂಲಕವಾದರೂ ಆಚರಿಸಿ ನುಡಿಸೇವೆ ಮಾಡುವ ಶ್ರಮಿಕ ಕಲಾವಿದರಿಗೆ, ನುಡಿ ಸೇವೆ ಮಾಡುವ ತಜ್ಞರಿಗೆ ಗೌರವ ಸಲ್ಲಿಸಿದರೆ ತಮ್ಮ ಆಡಳಿತಕ್ಕೆ ಮೆರುಗು ಹೆಚ್ಚುತ್ತದೆ ಎಂದರು.

ಹಿರಿಯ ಸಾಹಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಡಾ.ಸಿ.ಎಂ.ಜೋಶಿ ಮಾತನಾಡಿ, ನಮ್ಮ ತಾಲೂಕು ಪ್ರಾಚೀನ ಪರಂಪರೆ ಹೊಂದಿದೆ. ಇಲ್ಲಿನ ಕವಿ ಕಲಾವಿದರು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಇಂತಹ ಸಾಂಸ್ಕೃತಿಕ ಹಿರಿಮೆ ಇರುವ ತಾಲೂಕು ಕೇಂದ್ರದಲ್ಲಿ ಅಧಿಕಾರಿಗಳು ಸಮರ್ಪಕವಾದ ನಿರ್ಧಾರ ತೆಗೆದುಕೊಳ್ಳದೆ ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ನಿರಾಭಿಮಾನಿಗಳಂತೆ ವರ್ತಿಸುತ್ತಿರುವುದು ವಿಷಾದದ ಸಂಗತಿ. ಈ ತಿಂಗಳು ಕನ್ನಡ ಸಂಭ್ರಮ ಜರುಗಿಸುವಂತೆ ಜವಾಬ್ದಾರಿ ವಹಿಸಬೇಕೆಂದು ಆಗ್ರಹಿಸಿದರು.

ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಾಯ ಇಲಾಖೆ ಸಚಿವರಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಮನವಿ ರವಾನಿಸಲಾಯಿತು. ತಹಸೀಲ್ದಾರರ ಪರವಾಗಿ ಉಪತಹಸೀಲ್ದಾರ ರಜಪೂತ್ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ಘಂಟಿ, ಕಸಾಪ ಸದಸ್ಯರಾದ ಮಹಾದೇವ ಜಗತಾಪ, ಬಸವರಾಜ ಯಂಡಿಗೇರಿ, ಶೇಖರ ರಾಠೋಡ, ಹುಚ್ಚೇಶ ಯಂಡಿಗೇರಿ, ಕಿರಣ ಬಾಪ್ರಿ, ಮಹಾಲಿಂಗ ಯಂಡಿಗೇರಿ, ಕಜಾಪ ತಾಲೂಕು ಅಧ್ಯಕ್ಷ ಬಸವರಾಜ ಸಿಂದಗಿಮಠ, ಯಲ್ಲಪ್ಪ ಮನ್ನಿಕಟ್ಟಿ, ಪರಶು ಮಾದರ, ಗುಂಡಪ್ಪ ಕೋಟಿ ಸೇರಿದಂತೆ ಇನ್ನೂ ಅನೇಕರು ಇದ್ದರು.