ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಮೊದಲ ತಂಡದಲ್ಲಿ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿನ ಅಶೋಕಪುರಂ ಅರಣ್ಯ ಭವನದ ಆವರಣದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿದ್ದು, ಮಂಗಳವಾರ ರಿಲ್ಯಾಕ್ಸ್ ಮೂಡ್ ನಲ್ಲಿದ್ದವು.ಸೋಮವಾರವಷ್ಟೇ ಗಜಪಯಣ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಲಾರಿಗಳಲ್ಲಿ ಬಂದ ಆನೆಗಳು ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದು, ಮಂಗಳವಾರ ಮುಂಜಾನೆಯೇ ಆನೆಗಳಿಗೆ ಮಾವುತರು ಮತ್ತು ಕಾವಾಡಿಗಳು ಸ್ನಾನ ಮಾಡಿಸಿದ್ದರು. ಬಳಿಕ ಹಸಿ ಹುಲ್ಲು, ಒಣ ಹುಲ್ಲು, ಕಬ್ಬು, ಆಲದ ಎಲೆಗಳನ್ನು ಆನೆಗಳಿಗೆ ನೀಡಿದ್ದರು. ಆಹಾರವನ್ನು ಮೆಲ್ಲುತ್ತಾ ಆನೆಗಳು ವಿಶ್ರಾಂತಿ ಪಡೆಯುತ್ತಿದ್ದರೇ, ಮಾವುತರು ಮತ್ತು ಕಾವಾಡಿಗಳು ತಮ್ಮ ತಮ್ಮ ಆನೆಗಳ ಆರೈಕೆ ಮಾಡುತ್ತಾ ರಿಲ್ಯಾಕ್ಸ್ ಆಗಿದ್ದರು.
ಮೊದಲ ತಂಡದಲ್ಲಿ ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ ಆನೆಗಳು ಆಗಮಿಸಿವೆ.ಶೆಡ್, ಗುಡಾರ ನಿರ್ಮಾಣ
ಅರಣ್ಯ ಭವನಕ್ಕೆ ಆಗಮಿಸುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳು ಉಳಿದುಕೊಳ್ಳಲು ಇಷ್ಟು ವರ್ಷ ಸಮರ್ಪಕ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದರು. ಆದರೆ, ಈ ಬಾರಿ ಅರಣ್ಯ ಇಲಾಖೆಯು ದೊಡ್ಡ ಶೆಡ್ ನಿರ್ಮಿಸಿದ್ದು, ಜೋರು ಮಳೆ ಗಾಳಿಯಲ್ಲಿ ಮಾವುತರು ಮತ್ತು ಕಾವಾಡಿಗಳು ಈ ಶೆಡ್ ನಲ್ಲಿ ಆಶ್ರಯ ಪಡೆಯಬಹುದಾಗಿದೆ. ಅಲ್ಲದೆ, ಎಲ್ಲಾ ಆನೆಗಳ ಬಳಿಯೂ ಆಯಾಯ ಮಾವುತ ಮತ್ತು ಕಾವಾಡಿಗಳು ರಾತ್ರಿಯಿಡೀ ಆನೆಗಳನ್ನು ಕಾಯಲು ಗುಡಾರ ಸಹ ನಿರ್ಮಿಸಿದೆ.ಆನೆ ನೋಡಲು ಬಂದ ಜನ
ಅರಣ್ಯ ಭವನದಲ್ಲಿ ದಸರಾ ಆನೆಗಳು ಇರುವ ವಿಚಾರ ತಿಳಿದು, ಸಾವಿರಾರು ಜನ ಆನೆ ನೋಡಲು ಮುಗಿ ಬಿದ್ದರು. ಅಶೋಕಪುರಂ, ಕೆ.ಜಿ. ಕೊಪ್ಪಲು, ಕೃಷ್ಣಮೂರ್ತಿಪುರಂ, ಜಯನಗರ, ಕುವೆಂಪುನಗರ, ಸರಸ್ವತಿಪುರಂ ಸೇರಿದಂತೆ ನಗರದ ವಿವಿಧೆಡೆಯಿಂದ ನೂರಾರು ಜನ ಅರಣ್ಯ ಭವನಕ್ಕೆ ಭೇಟಿ ನೀಡಿ ಆನೆಗಳನ್ನು ವೀಕ್ಷಿಸಿ, ದೂರದಿಂದಲೇ ಫೋಟೋ ಕ್ಲಿಕ್ಕಿಸಿಕೊಂಡರು.ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಆರೋಗ್ಯ, ಚಲನದ ಮೇಲೆ ನಿಗಾ ವಹಿಸಿದ್ದರು.
----ಬಾಕ್ಸ್
10ಕ್ಕೆ ಗಜಪಡೆ ಅರಮನೆ ಪ್ರವೇಶಅರಣ್ಯ ಭವನದಲ್ಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಅರಣ್ಯ ಇಲಾಖೆಯಿಂದ ಆ.10 ರಂದು ಸಾಂಪ್ರದಾಯಿಕ ಪೂಜೆ ನೆರವೇರಿಸಿ ಅರಮನೆಗೆ ಕಳಿಸಿಕೊಡಲಾಗುತ್ತದೆ. ಬಳಿಕ ಅರಮನೆಗೆ ನಡಿಗೆ ಮೂಲಕ ತೆರಳುವ ಆನೆಗಳಿಗೆ ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಆ.10ರ ಸಂಜೆ 6.45 ರಿಂದ 7.20ರ ಗೋಧೂಳಿ ಲಗ್ನದಲ್ಲಿ ಪೂಜೆ ನೆರವೇರಿಸಿ ಸ್ವಾಗತಿಸಲಾಗುತ್ತಿದೆ.
ಆ.7 ರಂದು ಅರಮನೆ ಪ್ರವೇಶ ಕಾರ್ಯಕ್ರಮವನ್ನು ಆ.10ಕ್ಕೆ ಮುಂದೂಡಲಾಗಿದೆ. ಇದರಿಂದ ಕಾಡಿನಿಂದ ನಾಡಿಗೆ ಆಗಮಿಸಿರುವ ಆನೆಗಳು ಒಂದು ವಾರ ಅರಣ್ಯ ಭವನದಲ್ಲಿಯೇ ಬೀಡುಬಿಡಬೇಕಾಗಿದೆ.