ಹಿರೇಕೆರೂರು ಪಟ್ಟಣದ ಪೊಲೀಸ್ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ 7ನೇ ನಾಡಹಬ್ಬ ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು.
ಹಿರೇಕೆರೂರು: ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಅನಾವರಣ ಮಾಡುವ ಜತೆಗೆ ನಾಡು ನುಡಿಯ ಬಗ್ಗೆ ಅಭಿಮಾನ ಹೊಂದಲು ನಾಡಹಬ್ಬದಂತಹ ಕಾರ್ಯಕ್ರಮಗಳು ಬಹು ಉಪಯುಕ್ತವಾಗಿವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಪೊಲೀಸ್ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ 7ನೇ ನಾಡಹಬ್ಬ ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ, ನೆಲ ಜಲದ ಬಗ್ಗೆ ಅಭಿಮಾನ ಹೊಂದಿ, ಕನ್ನಡ ನಾಡಿನ ಏಳ್ಗೆಗೆ ಕಂಕಣಬದ್ಧರಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು ನಾಡು ನುಡಿ ಸಂರಕ್ಷಣೆಗೆ ಸದಾ ಶ್ರಮಿಸುತ್ತಿವೆ. ಸರ್ವಜ್ಞ, ಶಾಂತಕವಿಗಳ ನಾಡಲ್ಲಿ ಜನಿಸಿದ ನಾವೆಲ್ಲ ಪುಣ್ಯವಂತರು. ಪ್ರತಿಯೊಬ್ಬರೂ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಪರಂಪರೆಗಳನ್ನು ಗೌರವಿಸುವ ಮೂಲಕ ನಿತ್ಯ ಜೀವನದಲ್ಲಿ ಅವುಗಳನ್ನು ಪಾಲನೆ ಮಾಡುವ ಮೂಲಕ ನಾಡಿ ಗತ ವೈಭವವನ್ನು ಮತ್ತಷ್ಟು ಉತ್ತುಂಗದತ್ತ ಏರಿಸಬೇಕು ಎಂದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಮಾತೃಭಾಷೆ ಕನ್ನಡವನ್ನು ಹೆತ್ತ ತಾಯಿಯಂತೆ ಪೋಷಣೆ ಮಾಡಬೇಕು. ಕನ್ನಡ ಭಾಷೆ, ನೆಲ, ಜಲ ನಾಡಿನ ಭವ್ಯ ಪರಂಪರೆಗಳನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊಂದಿ, ಕನ್ನಡ ನಾಡು ಇನ್ನು ವೈಭವದಿಂದ ಮೆರೆಸಬೇಕು ಮತ್ತು ಇಂದಿನ ಯುವ ಜನತೆ ನಾಡಿನ ಅಭಿವೃದ್ಧಿಗೆ ಯೋಜನೆ ರೂಪಿಸಿ, ನಾಡಿನ ಸರ್ವತೋಮುಖ ಪ್ರಗತಿಗೆ ಕಾರಣರಾಗಿ ಮುಂದಿನ ಜನಾಂಗಕ್ಕೆ ಅನಕೂಲ ಕಲ್ಪಿಸುವ ಕಾರ್ಯ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಹಿರೇಕೆರೂರು ತಾಲೂಕು ಘಟಕ ಸದಾ ಚಟುವಟಿಕೆಯಿಂದ ಕೂಡಿದ್ದು, ಎಲ್ಲರ ಸಹಕಾರದಿಂದ ಅನೇಕ ರಚನಾತ್ಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪ ಗೌರವ ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮೇಘರಾಜ ಮಾಳಗಿಮನಿ, ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ಪ್ರಭುಸ್ವಾಮಿ ಹಾಲೇವಾಡಿಮಠ, ಡಾ. ಎಸ್.ಪಿ. ಗೌಡರ, ರಾಘವೇಂದ್ರ ಅಗಸಿಬಾಗಿಲ, ಎಂ.ಸಿ. ತುಮ್ಮಿನಕಟ್ಟಿ, ಎಂ.ಬಿ. ಕಾಗಿನೆಲ್ಲಿ, ಬಿ.ಎಸ್. ಪಾಟೀಲ, ಪಿ.ಎಸ್. ಸಾಲಿ, ಎಂ.ಎಂ. ಮತ್ತೂರ, ಪ್ರಕಾಶ ಹಿತ್ಲಳ್ಳಿ, ಬಿ.ಟಿ. ಚಿಂದಿ, ಡಾ. ಬಸವರಾಜ ಪೂಜಾರ, ಕುಮಾರ ಮಡಿವಾಳರ, ನಾಗರಾಜ ಪುರದ, ವೀರಣ್ಣ ಚಿಟ್ಟೂರ ಹಾಗೂ ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮದ ಆನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಗಾಯನ ಹಾಗೂ ನೃತ್ಯ ರೂಪಕಗಳು ಮತ್ತು ಕನ್ನಡ ರಸಮಂಜರಿ ಕಾರ್ಯಕ್ರಮ ನಡೆದವು.