ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಗೋವಿನ ಕೆಚ್ಚಲು ಕತ್ತರಿಸಿದ್ದನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾದ 15ಜನ ಮುಖಂಡರು ಮುದ್ದೇಬಿಹಾಳದಲ್ಲಿ ಶಾಸಕ ಸಿ.ಎಸ್.ನಾಡಗೌಡರ ಮನೆ ಮುಂದೆ ರಂಗೋಲಿ ಹಾಕಿ, ಶಾಂತಿಯುತವಾಗಿ ಪ್ರತಿಭಟಿಸಿ ಅವರಿಗೆ ಮನವಿ ಕೊಡಲು ಮುಂದಾಗಿದ್ದರು. ಈ ವೇಳೆ ಪಿಎಸ್‌ಐ ತಿಪ್ಪಾರೆಡ್ಡಿ ಅವರು ಹೋರಾಟಗಾರರ ಎದೆ ಮೇಲಿನ ಅಂಗಿ ಹಿಡಿದು, ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಮಾಜಿ ಶಾಸಕ, ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಸ್‌ಐ ತಿಪ್ಪಾರೆಡ್ಡಿಗೆ ಯಾಕೆ ಹಲ್ಲೆ ಮಾಡ್ತಿದ್ದೀರಿ, ನಮ್ಮ ಹೋರಾಟಗಾರರು ಏನು ತಪ್ಪು ಮಾಡಿದ್ದಾರೆ ಎಂದು ಕೇಳಿದರೆ ನನ್ನ ಮೇಲೆಯೇ ಹಲ್ಲೆ ಮಾಡಲು ಏರಿ ಬರ್ತಾನೆ. ಸ್ಟೇಷನ್ ಗೆ ಹೋದರೆ ನಮ್ಮನ್ನೇ ದಬಾಯಿಸಿದ್ದಾನೆ. ಕಾರ್ಯಕರ್ತರ ಮೇಲೆ ಆಗಿರುವ ಅನ್ಯಾಯವನ್ನು ಖಂಡಿಸಿ ಠಾಣೆ ಎದುರು ಧರಣಿ ಕೂತಿದ್ದರೆ ಇತ್ತ ಸ್ವತಃ ಪಿಎಸ್‌ಐ ಸುಮೋಟೊ ಕೇಸ್ ಹಾಕಿದ್ದಾನೆ. ಮುಖಂಡರಾದ ಜಗದೀಶ, ಸಂಜು, ನಾಗೇಶ ಸೇರಿದಂತೆ 14 ಜನರ ಮೇಲೆ ಕೇಸ್ ಹಾಕಿ ನಾಲ್ವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾನೆ ಎಂದರು ಏಕ ವಚನದಲ್ಲಿಯೇ ಕಿಡಿ ಕಾರಿದರು.
ಇನ್ನು ಠಾಣೆಗೆ ಒಯ್ದು ಕೆಲವರ ಮೇಲೆ ಲಾಠಿಯಿಂದ ಹೊಡೆಯುವ ಕೆಲಸ ಮಾಡಿದ್ದಾನೆ. ನಾನು ಹೋಗಿ ಕೇಳಿದಾಗ ಯಾರನ್ನೂ ಹೊಡೆದಿಲ್ಲ ಎಂದಿದ್ದಾನೆ. ಪ್ರತಿಭಟನೆ ವೇಳೆ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಸ್ಥಳಕ್ಕೆ ಬಂದು, ಸುಮಾರು 500 ಜನ ಪೊಲೀಸರನ್ನು ಕರೆಯಿಸಿ, ಹೋರಾಟಗಾರರನ್ನು ಹೆದರಿಸುವ ಕೆಲಸ ಮಾಡಿದ್ದಾರೆ. ಶಾಂತಿಯುತವಾಗಿ ಮನವಿ ಕೊಡಲು ಹೋದವರಿಗೆ ಶಾಸಕರ ಮನೆ ಮೇಲೆ ದಾಳಿ ಮಾಡಲು ಮುಂದಾರು, ಅವರ ಮನೆಯಲ್ಲಿದ್ದ ವ್ಯಕ್ತಿಗಳ ಖಾಸಗಿತನಕ್ಕೆ ಭಂಗ ತಂದರು, ಆಗ ನಾನು ತಡೆಯಲು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪಿಎಸ್‌ಐ ಕೇಸ್ ಮಾಡಿದ್ದಾರೆ ಎಂದರೆ ಇವರು ಪಕ್ಕಾ ಕಾಂಗ್ರೆಸ್ ಏಜಂಟ್ ಥರಾ ವರ್ತನೆ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಬೇಕಾದ ಹಿರಿಯ ಅಧಿಕಾರಿಗಳು ಅಲ್ಲಿನ ವಾಸ್ತವಿಕ ವಿಡಿಯೋ ತರಿಸಿಕೊಂಡು ಪರಿಶೀಲನೆ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಠಾಣೆಯಲ್ಲಿ ನ್ಯಾಯ ಸಿಗುತ್ತಿಲ್ಲ:
ತಾಲೂಕಿನ ಬಿಂಜಲಭಾವಿ ಗ್ರಾಮದ ಮಹಾದೇವಿ ಸಿದ್ದನಗೌಡ ಪಾಟೀಲ ಎಂಬುವವರ ಆಸ್ತಿ ವಿವಾದದ ವಿಚಾರವಾಗಿ ನಾಲ್ಕು ದಿನದಿಂದ ಕಲಕೇರಿ ಠಾಣೆಗೆ ಹಾಗೂ ಎಸ್‌ಪಿ ಕಚೇರಿಗೆ ಅಲೆದಾಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಅಪ್ಪಾಜಿ ನಾಡಗೌಡರ ಸಂಬಂಧಿ, ದತ್ತುಪುತ್ರ ಎನಿಸಿಕೊಂಡ ನಾಡಗೌಡ ಎಂಬ ವ್ಯಕ್ತಿ ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ. ನಾಡಗೌಡರ ಸೂಚನೆ ಮೇರೆಗೆ ಕಲಕೇರಿ ಠಾಣೆ ಪಿಎಸ್‌ಐ ಸುರೇಶ ಮಂಟೂರ ಅವರು ತಮ್ಮ ಸಿಬ್ಬಂದಿ ಜೊತೆಗೆ ಬಂದು ಅಂಗನವಾಡಿಗೆ ಹೋಗುವ ಹಾಗೂ ಸ್ಥಳೀಯರು ಜಮೀನಿಗೆ ಹೋಗುವ ರಸ್ತೆ ಮೇಲೆ ಕಲ್ಲುಹಾಕಿ ರಸ್ತಯನ್ನೇ ಬಂದ್ ಮಾಡಿದ್ದಾರೆ. ಅಪ್ಪಾಜಿ ನಾಡಗೌಡ ಎಂಬಾತ ಸಂಭಾವಿತ ರಾಜಕಾರಣಿ ಎಂದು ಬಿಂಬಿಸುವ ಅವರು ಒಬ್ಬ ಗೋಮುಖ ವ್ಯಾಘ್ರ ಎಂದು ನಡಹಳ್ಳಿ ಕಿಡಿ ಕಾಡಿದರು.ಅಲ್ಲದೇ, ಮುದ್ದೇಬಿಹಾಳದ ಭಾಗದಲ್ಲಿ ಅಕ್ರಮವಾಗಿ ಹಲವರು ಇಸ್ಪೀಟ್ ಕ್ಲಬ್ ನಡೆಸುತ್ತಿದ್ದಾರೆ. ಪಿಎಸ್‌ಐ ಅಲ್ಲಿನ ಕಲೆಕ್ಷನ್ ಏಜಂಟ್ ಆಗಿದ್ದಾನೆ. ಇನ್ನು ಕೃಷ್ಣಾನದಿ ಭಾಗದಲ್ಲಿ ಮರಳು ದಂಧೆ ಹಗಲು ರಾತ್ರಿ ಎನ್ನದೆ ರಾಜಾರೋಷವಾಗಿಯೇ ನಡೆಯುತ್ತಿದೆ. ಈ ಕುರಿತು ಎಸ್‌ಪಿ ಅವರು ಕ್ರಮ ಕೈಗೊಳ್ಳದಿದ್ದರೆ ನಾವು ಐಜಿ, ಡಿಜಿಗೆ ದೂರು ನೀಡುವುದಾಗಿ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿ.ಜಿ.ಬಿರಾದಾರ, ರಾಜಶೇಖರ ಡೊಳ್ಳಿ, ರೇಣುಕಾ ಪರಸಪ್ಪಗೋಳ ಇದ್ದರು.