ನಾದಮಣಿ ನಾಲ್ಕೂರು ತತ್ವಪದಗಳಿಗೆ ತಲೆದೂಗಿದ ಜನ

| Published : Mar 07 2024, 01:49 AM IST

ಸಾರಾಂಶ

ಹಾಡುಗಳ ಮಧ್ಯೆ ಮಧ್ಯೆ ಅನಿಸಿಕೆ ಹಂಚಿಕೊಂಡ ನಾದಮಣಿ ನಾಲ್ಕೂರು ಅವರು ಇಂದು ಪ್ರತಿಕ್ಷಣ ಎದುರಾಗುವ ಸತ್ಯಗಳಿಗೆ, ಸಂವಿಧಾನಕ್ಕೆ ವಿಧೇಯರಾಗುವುದು ಕಡಿಮೆಯಾಗಿದೆ ಎಂದರು.

ಹರಪನಹಳ್ಳಿ: ಮಣ್ಣಿಗೆ ವಂದನೆ, ಮುಗಿಲಿಗೆ ವಂದನೆ, ಸಕಲ ಜೀವಕ್ಕೆ ವಂದನೆ... ಹೀಗೆ ವಿವಿಧ ತತ್ವಪದಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ತತ್ವಪದಗಾರ ನಾದಮಣಿ ನಾಲ್ಕೂರು ಅವರು ಕಣ್ಣುಮುಚ್ಚಿ ವೀಣೆ ನುಡಿಸುತ್ತಾ ತಬಲಾ ನೆರವಿನೊಂದಿಗೆ ಹಾಡುತ್ತಿದ್ದರೆ ನೆರೆದ ಜನತೆ ತಲೆದೂಗುತ್ತಿದ್ದರು.

- ಇದು ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಶಿಕ್ಷಕ ಎನ್‌.ಆರ್‌. ಮರೇಗೌಡರ ಸ್ಮರಣಾರ್ಥ ಸಂವಿಧಾನ ಕುರಿತು ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಹಾಗೂ ನಾದಮಣಿ ನಾಲ್ಕೂರು ಅವರ ಕತ್ತಲ ಹಾಡು ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಕಂಡುಬಂದ ದೃಶ್ಯ.

ಭಾರತದ ಬಹುತ್ವವನ್ನು ನೆನಪಿಸುವ ನಮ್ಮ ಎಲುಬಿನ ಹಂದರದೊಳಗೊಂದು ಮಂದಿರವಿದೆ, ಜಗದಗಲದಿ ಎಲ್ಲಾದರೂ ಸರಿಯೇ ನ್ಯಾಯದ ಪರ ನಿಲ್ಲುವಿಯಾದರೆ, ಕನಕದಾಸರ ನಾನು ನೀನು ಎನ್ನದಿರುವ ಹೀನ ಮಾನವ... ಹೀಗೆ ಒಂದರ ಮೇಲೊಂದು ಹಾಡಿನ ಸ್ವರೂಪದ ಮಾತು, ಮಾತಿನ ಸ್ವರೂಪದ ಹಾಡು ಹಾಡುತ್ತಾ ಹೋದಾಗ ನೆರೆದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಹಾಡುಗಳ ಮಧ್ಯೆ ಮಧ್ಯೆ ಅನಿಸಿಕೆ ಹಂಚಿಕೊಂಡ ನಾದಮಣಿ ನಾಲ್ಕೂರು ಅವರು ಇಂದು ಪ್ರತಿಕ್ಷಣ ಎದುರಾಗುವ ಸತ್ಯಗಳಿಗೆ, ಸಂವಿಧಾನಕ್ಕೆ ವಿಧೇಯರಾಗುವುದು ಕಡಿಮೆಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಅವರು, ಸಮಾಜ ತಿದ್ದುವ ಕೆಲಸ ಮಾಗಿದ ಶಿಕ್ಷಕನಿಂದ ಮಾತ್ರ ಸಾಧ್ಯ. ಅಂತಹ ಕೆಲಸವನ್ನು ಶಿಕ್ಷಕ ಎನ್‌.ಆರ್‌. ಮರೇಗೌಡರ ಮಾಡಿದ್ದಾರೆ. ಆದ್ದರಿಂದ ಗ್ರಾಮಸ್ಥರು ಅವರನ್ನು ಇಂದು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದರು.

ತಾವರಗೊಂದಿ ನಿವೃತ್ತ ಶಿಕ್ಷಕ ಚೆನ್ನಬಸಪ್ಪ ಮಾತನಾಡಿ, ಎನ್‌.ಆರ್‌. ಮರೇಗೌಡರು ಸರಳ, ಸಜ್ಜನ ಹಾಗೂ ಸಮಾಜಮುಖಿ ಶಿಕ್ಷಕರಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎನ್‌.ಆರ್. ಮರೇಗೌಡರ ಪುತ್ರ ಮಾಲತೇಶ ಮರಿಗೌಡರ ಮಾತನಾಡಿ, ಸಂವಿಧಾನದ ಮಹತ್ವ ತಿಳಿಸುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ನಮ್ಮ ತಂದೆಯವರ ಸ್ಮರಣಾರ್ಥ ಸಂವಿಧಾನಕ್ಕೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಆಯೋಜಿಸಿದ್ದೇವು ಎಂದರು.

ಮಾಲತೇಶ ಮರಿಗೌಡರ ಕುಟುಂಬದವರಿಂದ ವಿವಿಧ ಶಾಲೆಗಳ ಗ್ರಂಥಾಲಯಗಳಿಗೆ ಸಂವಿಧಾನದ ಪೀಠಿಕೆ ಹಾಗೂ ಪುಸ್ತಕಗಳನ್ನು ದೇಣಿಗೆಯಾಗಿ ನೀಡಲಾಯಿತು. ಸಂವಿಧಾನ ಕುರಿತು ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಹೀಗೆ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ, ಕತ್ತಲ ಹಾಡು ಹೆಸರಿನಲ್ಲಿ ನಾದಮಣಿ ನಾಲ್ಕೂರು ಅವರ ತತ್ವಪದಗಳ ನಿನಾದ, ಶಾಂತಿಪ್ರೀತಿಯ ಮಾತು, ಶಿಕ್ಷಕ ಎನ್‌.ಆರ್‌. ಮರಿಗೌಡರ ಸ್ಮರಣಾರ್ಥ ಆಯೋಜಿಸಿದ್ದ ಸುಂದರ ಕಾರ್ಯಕ್ರಮ ಇಂದಿನ ಜಂಜಾಟದ ಜೀವನದಲ್ಲಿ ಗ್ರಾಮಸ್ಥರಿಗೆ ಮುದ ನೀಡಿತು.

ಗ್ರಾಪಂ ಅಧ್ಯಕ್ಷೆ ಸರಿತಾ, ನಾಗವೇಣಿ ಮಾಲತೇಶ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್, ಶಿಕ್ಷಕರಾದ ಸಿ. ಗಂಗಾಧರ, ಪದ್ಮರಾಜ, ಚಂದ್ರಣ್ಣ, ದೇವೇಂದ್ರಪ್ಪ, ಶಕುಂತಲಾ, ಮುಖಂಡ ಎಂ. ದ್ಯಾಮಪ್ಪ, ನಾಗರಾಜ, ಹಾಸ್ಟೆಲ್‌ ಮೇಲ್ವಿಚಾರಕ ಎನ್.ಜಿ. ಬಸವರಾಜ, ಶಿವಾನಂದಗೌಡ ಇತರರು ಉಪಸ್ಥಿತರಿದ್ದರು.